ಇತ್ತೀಚಿನ ಸುದ್ದಿ
Mangaluru | ನಾರಾಯಣ ಗುರು – ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ: ಡಿ.3ರಂದು ಸಿಎಂ ಉದ್ಘಾಟನೆ
23/11/2025, 20:10
ಮಂಗಳೂರು(reporterkarnataka.com): ಮಂಗಳೂರು ವಿವಿ ನಾರಾಯಣ ಗುರು ಅಧ್ಯಯನ ಪೀಠ ಹಾಗೂ ವರ್ಕಲ ಶಿವಗಿರಿ ಮಠದ ಆಶ್ರಯದಲ್ಲಿ ನಾರಾಯಣ ಗುರು ಹಾಗೂ ಮಹಾತ್ಮ ಗಾಂಧಿಜೀ ಅವರ ಐತಿಹಾಸಿಕ ಸಂವಾದ ಶತಮಾನೋತ್ಸವ ಡಿ.3 ರಂದು ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ಕಾರ್ಯಕ್ರಮದ ಕೇಂದ್ರ ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುವುದರ ಜತೆಗೆ ಈ ಕಾರ್ಯಕ್ರಮ ಅವರೇ ಉದ್ಘಾಟನೆ ಮಾಡಲಿದ್ದಾರೆ ಎಂದು ಹರಿಪ್ರಸಾದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ.3ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ವಿವಿಯಲ್ಲಿ ಸ್ಥಾಪನೆ ಆಗಿರುವ ನಾರಾಯಣಗುರು ಪೀಠದ ಒಂದು ಭಾಗದ ಉದ್ಘಾಟನೆ ನೆರವೇರಲಿದೆ. ಜತೆಗೆ ಇನ್ನೊಂದು ಭಾಗದ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಕಾರ್ಯವನ್ನು ನೆರವೇರಿಸಲಿದ್ದಾರೆ ಎಂದರು.
ಮಧ್ಯಾಹ್ನದ ಬಳಿಕ ಬ್ರಹ್ಮಶ್ರೀ ನಾರಾಯಣಗುರು ಮತ್ತು ಮಹಾತ್ಮಗಾಂಧಿ ಅವರ ಕುರಿತು ಐತಿಹಾಸಿಕ ಸಂವಾದ ಶತಮಾನೋತ್ಸವ ನಡೆಯಲಿದೆ. ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ನಡೆವ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಲಾಗಿದೆ. ಪಕ್ಷಾತೀತ ಕಾರ್ಯಕ್ರಮ ಇದಾಗಿದ್ದು, ಶಿವಗಿರಿ ಮಠದ ಸ್ವಾಮೀಜಿ ಸಚ್ಚಿದಾನಂದ, ಕೆ.ಸಿ.ವೇಣುಗೋಪಾಲ್ ಸೇರಿದಂತೆ ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು, ಸಚಿವರು ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪವರ್ ಶೇರಿಂಗ್ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೆ ಉತ್ತರ ನೀಡುವುದಕ್ಕೆ ಸಂಬಂಧಪಟ್ಟವನು ನಾನಲ್ಲ. ಈ ಬಗ್ಗೆ ಕೆ.ಸಿ.ವೇಣುಗೋಪಾಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಕೇಳಬಹುದು.ಡಿ. 3 ರ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಭಾಗವಹಿಸಲಿದ್ದಾರೆ. ಹಾಗಾಗಿ ಈ ಊಹಾಪೋಹಗಳು ಬೇಡ ಎಂದರು.
ವೋಟ್ ಚೋರಿ ಅಭಿಯಾನದ ಭಾಗವಾಗಿ ರಾಮ್ ಲೀಲಾ ಮೈದಾನದಲ್ಲಿ ಡಿ.14 ರಂದು ಕಾರ್ಯಕ್ರಮ ನಡೆಯಲಿದೆ. ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗವು ಯಾವ ರೀತಿಯಲ್ಲಿ ತಪ್ಪು ದಾರಿಯಲ್ಲಿ ನಡೆದಿದೆ ಎಂಬ ಕುರಿತಂತೆ ಅಭಿಯಾನ ನಡೆಯುತ್ತಿದ್ದು, ಕರ್ನಾಟಕದಲ್ಲಿ ಈಗಾಗಲೇ 1.4 ಕೋಟಿ ಸಹಿ ಸಂಗ್ರಹ ನಡೆದಿದ್ದು, ದೇಶದ ವಿವಿಧ ರಾಜ್ಯಗಳಿಂದ ಒಟ್ಟು 5 ಕೋಟಿ ಸಹಿ ಸಂಗ್ರಹವನ್ನು ಆ ದಿನ ರಾಷ್ಟ್ರಪತಿಗೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಕೇಂದ್ರ ಸಂಘಟನಾ ಸಮಿತಿ ರಕ್ಷಣಾಧಿಕಾರಿ ಜ್ಞಾನತೀರ್ಥ ಸಾಮೀಜಿ, ಪ್ರಧಾನ ಸಂಚಾಲಕ ಪಿ.ವಿ. ಮೋಹನ್, ಗೌರವ ಉಪಾಧ್ಯಕ್ಷ ನವೀನ್ ಡಿ ಸುವರ್ಣ, ಸೂರ್ಯಕಾಂತ ಜೆ. ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಪದ್ಮರಾಜ್ ಆರ್. ಪೂಜಾರಿ, ಸದಾಶಿವ ಉಳ್ಳಾಲ್, ನವೀನ್ ಡಿಸೋಜ ಉಪಸ್ಥಿತರಿದ್ದರು.












