ಇತ್ತೀಚಿನ ಸುದ್ದಿ
ರಾಜ್ಯಕ್ಕೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ತನ್ನದೇ ಆದ ಕೊಡುಗೆ ನೀಡಿದೆ: ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ
20/11/2025, 22:58
ಮಂಗಳೂರು(reporterkarnataka.com): ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿ ಕಳೆದ 25 ವರ್ಷದಿಂದ ಜೆಡಿಎಸ್ ಪಕ್ಷ ತನ್ನದೇ ಕೆಲಸ ಮಾಡಿದ್ದು, ತನ್ನದೇ ಆದ ಕೊಡುಗೆಯನ್ನು ನೀಡಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಹೇಳಿದರು.
ನಗರದಲ್ಲಿ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.
ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿ ರಾಜಕೀಯಕ್ಕೆ ಬಂದರೂ, ಸಾಕಷ್ಟು ಏಳು ಬೀಳುಗಳನ್ನು ಕಂಡು, ಬೇರೆ ಬೇರೆ ಚಿಹ್ನೆಗಳಿಂದ ಗುರುತಿಸಿಕೊಂಡು ಬಳಿಕ ಅಂತಿಮವಾಗಿ ತೆನೆಹೊತ್ತ ಮಹಿಳೆಯ ಚಿಹ್ನೆಯಿಂದ ಸ್ಪರ್ಧಿಸುತ್ತ, ಕಳೆದ 25 ವರ್ಷದಲ್ಲಿ ಸಮಾಜದಲ್ಲಿ ತನ್ನನ್ನು ಗುರುತಿಸಿಕೊಂಡಿದೆ ಎಂದರು.

ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗಿನಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವ ತನಕ ನೆಲ-ಜಲ-ಕನ್ನಡವನ್ನು ಅಸ್ತಿತ್ವದಲ್ಲಿ ಇಟ್ಟುಕೊಂಡು, ಬೇರೆ ಪಕ್ಷದೊಂದಿಗೆ ಸಮಿಶ್ರ ಸರ್ಕಾರವನ್ನು ರಚಿಸಿದರೂ, ತಾನು ಹಾಕಿಕೊಂಡ ಲಕ್ಷ್ಮಣ ರೇಖೆಯನ್ನು ದಾಟದೇ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯ, ಸರ್ಕಾರವನ್ನು ಗ್ರಾಮಕ್ಕೆ ಕೊಂಡೋದವರು, ಗುಡಿಸಿಲಿನ ಬಳಿಗೆ ಸರ್ಕಾರ ಎಂಬ ಯೋಜನೆಗಳ ಮೂಲಕ ಹೊಸ ಅದ್ಯಾಯವನ್ನು ಪ್ರಾರಂಭಿಸಿದರು. ರೈತರ ಲಕ್ಷ-ಲಕ್ಷ ಸಾಲ ಮನ್ನಾ, ಪ್ರಾಕೃತಿಕ ವಿಕೋಪದಿಂದ ಮನೆಕಳೆದುಕೊಂಡವರಿಗೆ ಉತ್ತಮ ಮನೆ, ಕೆಪಿಎಲ್ ಶಾಲೆಗಳನ್ನು ಪ್ರಾರಂಭಿಸಿ, ಒಂದೇ ಸೂರಿನಡಿಯಲ್ಲಿ ಕೆ.ಜಿ. ಇಂದ ಹಿಡಿದು ಪಿಯುಸಿ ತನಕ ಕಲಿಯಲು ಅವಕಾಶ, ಮಕ್ಕಳಿಗೆ ಸ್ವಿಮ್ಮಿಂಗ್ ಫೂಲ್‌ಗಳನ್ನು ತೆರೆದು ಪ್ರತೀ ಹೋಬಳಿಗೆ ಒಂದೊಂದು ಶಾಲೆಯನ್ನು ಪ್ರಾರಂಭಿಸಿದರು. ಆದರೆ ಈಗಿನ ಸರ್ಕಾರ ಅಲ್ಲಿ ಕೆಲಸ ಮಾಡುವವರಿಗೆ ಸಂಬಳ ಕೊಡಲು ಆಗುತ್ತಿಲ್ಲ ಎಂದು ದೂರಿದರು.
ಕುಮಾರಸ್ವಾಮಿ ಅವರು ಅಲ್ಲಲ್ಲಿ ಪ್ರಥಮ ದರ್ಜೆ ಕಾಲೇಜುಗಳು, ಮಹಿಳಾ ಪ್ರಧಮ ದರ್ಜೆ ಕಾಲೇಜುಗಳು, ಜಾನುವಾರುಗಳ ಕಾಲುಬಾಯಿ ರೋಗಕ್ಕೆ ಲಸಿಕೆ, ಹಾಲಿಗೆ 5 ರೂ. ಪ್ರೋತ್ಸಾಹ ದನ ಹೆಚ್ಚಳ, ಗ್ರಾಮೀಣ ಪ್ರದೇಶದಲ್ಲಿ ನದಿ, ತೋಡು ದಾಟಿ ಬರುವ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸೇತುಬಂಧು ಅಭಿಯಾನದಡಿ ಸೇತುವೆ ನಿಮಾಣ ಮೊದಲಾದ ಕಾರ್ಯಕ್ರಮಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಪ್ರಮುಖರಾದ ಮೊಹಮದ್ ಕುಂಞ, ಪವನ್‌ಚಂದ್ರ, ವಸಂತ ಪೂಜಾರಿ, ಇಕ್ಬಲ್ ಮುಲ್ಕಿ, ಅಕ್ಷಿತ್ ಸುವರ್ಣ, ಹೈದರ್ ಪಾರ್ಥ್ಯಪಾಡಿ, ವಿನ್ಸಂಟ್ ಪಿರೇರಾ, ಯತೀಶ್ ಸುವರ್ಣ, ಕನಕದಾಸ ಮತ್ತಿತರರು ಇದ್ದರು.












