ಇತ್ತೀಚಿನ ಸುದ್ದಿ
ಬಿಜೆಪಿಯಿಂದ ಭೀಮ ಸ್ಮರಣೆ ಕಾರ್ಯಕ್ರಮ; ಕಾಂಗ್ರೆಸ್ ಮಾಡಿದ ಅನ್ಯಾಯದ ಕುರಿತು ಜಾಗೃತಿ: ಪ್ರತಿಪಕ್ಷ ನಾಯಕ ಆರ್.ಅಶೋಕ್
19/11/2025, 23:05
ಬೆಂಗಳೂರು(reporterkarnataka.com):ಡಾ.ಬಿ.ಆರ್.ಅಂಬೇಡ್ಕರ್‌ಗೆ ಕಾಂಗ್ರೆಸ್ ಮಾಡಿದ ಅನ್ಯಾಯಗಳ ಬಗ್ಗೆ ತಿಳಿಸಲು ಭೀಮ ಸ್ಮರಣೆ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ 26ರಿಂದ ಡಿಸೆಂಬರ್ 6ರವರೆಗೆ ಭೀಮ ಸ್ಮರಣೆ ಕಾರ್ಯಕ್ರಮ ಮಾಡಲಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿದ ಅನ್ಯಾಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಾಬಾ ಸಾಹೇಬರ ಇತಿಹಾಸ ಸ್ಮರಿಸಲು ಮಾಡಿದ ಕೆಲಸಗಳ ಬಗ್ಗೆ ಜಾಗೃತಿ ಮೂಡಿಸಲಿದ್ದೇವೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಕಸ ಗುಡಿಸಲು ಯಂತ್ರ ಖರೀದಿ ಮಾಡುತ್ತಿದ್ದು, ಅದರಲ್ಲೂ ಲೂಟಿ ಹೊಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಒಂದು ಯಂತ್ರಕ್ಕೆ ಎರಡೂವರೆಗೆ ಕೋಟಿ ರೂ. ವೆಚ್ಚವಿದೆ. ವಾಹನ ನಿರ್ವಹಣೆ, ಸಂಬಳ ಸೇರಿದರೂ 5 ಲಕ್ಷ ರೂ. ಆಗುತ್ತದೆ. ಆದರೆ ಇದಕ್ಕಾಗಿ 618 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಸರ್ಕಾರವೇ ಖರೀದಿ ಮಾಡಿದರೆ 308 ಕೋಟಿ ರೂ. ಖರ್ಚಾಗುತ್ತದೆ. ಇದು ಲೂಟಿ ಹೊಡೆಯುವ ಸ್ಕೀಮ್ ಎಂದು ಹೇಳಿದರು.
ಇಷ್ಟು ಹಣ ಪೋಲು ಮಾಡುವ ಬದಲು ಕಸದ ಲಾರಿಗಳನ್ನು ಸಿದ್ಧಪಡಿಸಲಿ. ಸಂಗ್ರಹಿಸುವ ಕಸವನ್ನೇ ವಿಲೇವಾರಿ ಮಾಡಲು ಲಾರಿಗಳಿಲ್ಲ. ಜನರ ಮೇಲೆ ಈಗಾಗಲೇ ಹಲವು ತೆರಿಗೆ ಹಾಕಿದ್ದು, ಈಗ ಜನರ ಅದೇ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದರು.
ಜಯನಗರದಲ್ಲಿ ಹಗಲಿನಲ್ಲೇ ಲೂಟಿ ಮಾಡಲಾಗುತ್ತಿದೆ. ಬ್ಯಾಂಕುಗಳಲ್ಲೇ ಜನರ ಹಣಕ್ಕೆ ರಕ್ಷಣೆ ಇಲ್ಲ. ಇನ್ನು ವಿಧಾನಸೌಧದಲ್ಲೇ ಕಳ್ಳತನವಾದರೂ ಅಚ್ಚರಿ ಇಲ್ಲ. ಪೊಲೀಸ್ ಅಧಿಕಾರಿಗಳು ಲೂಟಿ ಮಾಡುವುದರಲ್ಲಿ ನಿರತರಾಗಿದ್ದಾರೆ. ಲೂಟಿ ಮಾಡುವುದು ಬ್ರ್ಯಾಂಡ್ ಬೆಂಗಳೂರಿನ ಒಂದು ಭಾಗ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಇತರೆ ನಾಯಕರು ದೆಹಲಿಗೆ ಹೋಗಿದ್ದಾರೆ. ಆದರೂ ಸಿಎಂ ಬದಲಾವಣೆ ಆಗುತ್ತಿಲ್ಲ. ಸಿದ್ದರಾಮಯ್ಯ ಕುರ್ಚಿ ಬಿಡುವುದಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಅವರಿಗೆ ಸಮಯ ಸರಿ ಇಲ್ಲ ಎಂದರು.












