ಇತ್ತೀಚಿನ ಸುದ್ದಿ
ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ ಜನರ ಮೆಚ್ಚುಗೆ
04/11/2025, 13:04
ಬೆಂಗಳೂರು(reporterkarnataka.com): ಈ ಹಿಂದೆ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ದಿನಗಳಲ್ಲಷ್ಟೇ ದೀಪಗಳಿಂದ ಅಲಂಕರಿಸಲ್ಪಡುತ್ತಿದ್ದ ವಿಧಾನ ಸೌಧ, ಈಗ ಪ್ರತಿನಿತ್ಯ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಸ್ಪೀಕರ್ ಯು.ಟಿ. ಖಾದರ್ ಅವರ ಮುಂದಾಳತ್ವದಲ್ಲಿ ಈ ಶಕ್ತಿಕೇಂದ್ರವು ಈಗ ಹೊಸ ಟೂರಿಸ್ಟ್ ಸ್ಪಾಟ್ ಆಗಿ ರೂಪಾಂತರಗೊಂಡಿದೆ.
ಪ್ರತಿ ಬಾರಿ ದೀಪಾಲಂಕಾರಕ್ಕೆ ಸುಮಾರು ₹20,000 ವೆಚ್ಚವಾಗುತ್ತಿದ್ದರೂ, ಈಗ ಅಳವಡಿಸಿದ ಎಲ್‌ಇಡಿ ಲೈಟಿಂಗ್‌ನಿಂದ ಕಡಿಮೆ ವೆಚ್ಚದಲ್ಲಿ ಪ್ರತಿನಿತ್ಯ ಬೆಳಗುತ್ತಿದೆ ವಿಧಾನಸೌಧ. ಮಂಗಳೂರು ಮೂಲದ ತಂತ್ರಜ್ಞರಿಂದ ಅಳವಡಿಸಲಾದ ಈ ಎಲ್‌ಇಡಿ ದೀಪಗಳು ವಿಧಾನ ಸೌಧವನ್ನು ರಾತ್ರಿ ವೇಳೆಯಲ್ಲಿ ಆಕರ್ಷಕವಾಗಿ ಹೊಳೆಯುವಂತೆ ಮಾಡಿವೆ.
ರಾತ್ರಿ 11 ಗಂಟೆಯವರೆಗೆ ಸೌಧದ ಸೌಂದರ್ಯವನ್ನು ಕಾಣಲು ಜನರು ನಗರದೆಲ್ಲೆಡೆಯಿಂದ ಹರಿದು ಬರುತ್ತಿದ್ದಾರೆ. “ದಿನದ ಕೆಲಸ ಮುಗಿಸಿ ಬಂದಾಗ ಸಂಜೆ 7 ಗಂಟೆ ಆಗುತ್ತದೆ. ಆಗ ಬೆಳಕು ನಂದಿಸಿದರೆ ನೋಡುವ ಅವಕಾಶವೇ ಸಿಗುವುದಿಲ್ಲ. ಕನಿಷ್ಠ 11 ಗಂಟೆವರೆಗೆ ದೀಪಗಳು ಬೆಳಗಿರಬೇಕು,” ಎಂದು ಬೆಂಗಳೂರಿನ ಪ್ರಶಾಂತ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಜನರ ಸಂಚಾರ ಹೆಚ್ಚಾದ ಹಿನ್ನೆಲೆ ಟ್ರಾಫಿಕ್ ಪೊಲೀಸರಿಗೆ ಹೊಸ ಸವಾಲು ಎದುರಾಗಿದೆ. ಬೆಳಕು ನಂದಿಸಲು ರಾತ್ರಿ 8 ಗಂಟೆಗೆ ಸಮಯ ನಿಗದಿ ಮಾಡುವ ಸಲಹೆ ನೀಡಲಾಗಿದ್ದರೂ, ಸಾರ್ವಜನಿಕರು ಬೆಳಕನ್ನು 11 ಗಂಟೆಯವರೆಗೆ ಮುಂದುವರಿಸಲು ಒತ್ತಾಯಿಸುತ್ತಿದ್ದಾರೆ.




ಈ ಬದಲಾವಣೆಯಿಂದ ವಿಧಾನ ಸೌಧ ಕೇವಲ ಶಕ್ತಿಕೇಂದ್ರವಾಗಿ ಉಳಿಯದೆ, ಬೆಂಗಳೂರಿನ ನೈಟ್ ಲೈಫ್‌ನ ಹೊಸ ಆಕರ್ಷಣೆಯಾಗಿ ಪರಿಣಮಿಸಿದೆ. ಜನರಲ್ಲಿ ಹೆಮ್ಮೆ ಮೂಡಿಸುವ ಈ ಪರಿವರ್ತನೆ ಸ್ಪೀಕರ್ ಯು.ಟಿ. ಖಾದರ್ ಅವರ ಹೊಸ ಶೈಲಿಯ ನಿರ್ವಹಣೆಯ ಫಲ ಎನ್ನುವ ಮಾತುಗಳೂ ಕೇಳಿ ಬರುತ್ತಿದೆ. ಜೊತೆಗೆ ರಾತ್ರಿ 11 ಗಂಟೆಯವರೆಗೂ ಅಲಂಕಾರದ ಬೆಳಕು ಮೂಡಿರಲಿ ಎನ್ನುವ ಸಲಹೆ ಜನ ಸಾಮಾನ್ಯರದ್ದಾಗಿದೆ.













