9:15 PM Saturday11 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ… ಇಂಗಾಲಮುಕ್ತ ಸರಕು ಸಾಗಣೆ ಪ್ರಧಾನಿ ಮೋದಿ ಅವರ ಕನಸು: ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

11/10/2025, 20:30

ಹಾವೇರಿ(reporterkarnataka.com): ಸಮಗ್ರ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಆಗುತ್ತದೆ‌. ಆತ್ಮನಿರ್ಭರ ಭಾರತ, ವಿಕಸಿತ ಭಾರತ ಆಗಬೇಕಾದರೆ ಕೃಷಿಯ ಪಾತ್ರ ಬಹಳ ಮುಖ್ಯ ಇದೆ. ಆರ್ಥಿಕ ಅಭಿವೃದ್ಧಿಗೆ ಕೃಷಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಧನ – ಧಾನ್ಯ ಕೃಷಿ ಯೋಜನೆ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.
ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಚಾಲನೆ ಕೊಟ್ಟಿದ್ದಾರೆ. ಯಾವ ರಾಜ್ಯ ಹಾಗೂ ಜಿಲ್ಲೆಯಲ್ಲಿ ದೇಶದ ಸರಾಸರಿ ಉತ್ಪಾದನೆಗಿಂತ ಕಡಿಮೆ ಇದೆಯೊ ಅಂತಹ 100 ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಬಜೆಟ್ ನಲ್ಲಿ ಘೋಷಿಸಿದ್ದರು. ಒಕ್ಕಲಿಗ ಒಕ್ಕಿದರೆ ಬಿಕ್ಕುವುದು ಜಗವೆಲ್ಲ ಅಂತ ಸರ್ವಜ್ಞ ಹೇಳಿದ್ದಾನೆ. ಈ ವ್ಯವಸ್ಥೆ ಇಡೀ ಪ್ರಪಂಚದಲ್ಲಿ ಬರುತ್ತಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಒಕ್ಕಲಿಗರ ಬದುಕು ಬಯಲ ಬದುಕು. ಅನಿಶ್ಚಿತತೆಯ ಬದುಕು, ಮಳೆ ಬರುತ್ತದೊ ಇಲ್ಲವೊ ಗೊತ್ತಿಲ್ಲಾ ಆದರೂ ಬಿತ್ತಬೇಕು, ಬೀಜ ಹುಟ್ಟುತ್ತದೊ ಗೊತ್ತಿಲ್ಲಾ, ಮಳೆ ಬಂದ ಮೇಲೆ ಕಳೆ ತೆಗೆಯಬೇಕು, ಗೊಬ್ಬರ ಹಾಕಬೇಕು, ಇಳುವರಿ ಎಷ್ಟು ಬರುತ್ತದೆ ಗೊತ್ತಿಲ್ಲ. ಬಂದ ಮೇಲೆ ಅದಕ್ಕೆ ರೇಟು ಸಿಗುತ್ತದೊ ಗೊತ್ತಿಲ್ಲ. ಈ ವ್ಯವಸ್ಥೆ ಏನು ಮಾಡಿದರೂ ಬದಲಾವಣೆ ಆಗುತ್ತಿಲ್ಲ. ಯಾಕೆ ಹೀಗೆ ಆಗುತ್ತಿದೆ ಅಂದರೆ, ರೈತ ತನಗೋಸ್ಕರ ಬೆಳೆಯನ್ನು ಬೆಳೆಯುವುದಿಲ್ಲ. ತನ್ನ ಮನೆಗೆ ತನ್ನ ಕುಟುಂಬಕ್ಕೆ ಅಷ್ಟೆ ಅಲ್ಲ ಇಡಿ ಮನು ಕುಲಕ್ಕೆ ಬೆಳೆ ಬೆಳೆಯುತ್ತಾನೆ. ಆದರೆ, ಮನುಕುಲವು ರೈತನ ಶ್ರಮದ ಬೆಲೆಯನ್ನು ಗುರುತಿಸಲು ಸಾಧ್ಯವಾಗಿಲ್ಲ. ಅವನು ಸುಗ್ಗಿ ಬಂದರೆ ಎಷ್ಟು ಖರ್ಚು ಮಾಡುತ್ತಾನೊ ಗೊತ್ತಿಲ್ಲ. ಒಂದು ವರ್ಷ ಇಪ್ಪತೈದು ಸಾವಿರ ಬಂದರೆ ಮುಂದಿನ ವರ್ಷ ಮೂವತೈದು ಸಾವಿರ ಬರುತ್ತದೆ. ಜಾಸ್ತಿ ಮಳೆಯಾದರೂ ಸಮಸ್ಯೆ, ಕಡಿಮೆ ಮಳೆಯಾದರೂ ಸಮಸ್ಯೆ, ಕಳೆ ಜಾಸ್ತಿಯಾದರೂ ಹೆಚ್ಚು ಖರ್ಚು ಬರುತ್ತದೆ. ಸುಗ್ಗಿಯ ಪೂರ್ವದಲ್ಲಿ ಅನಿಶ್ಚಿತತೆಯ ಬದುಕು. ಅದೇ ಸುಗ್ಗಿಯ ನಂತರ ವ್ಯಾಪಾರ ಮಾಡುತ್ತಾರೆ. ವ್ಯಾಪಾರಸ್ಥರು ಅದರಲ್ಲಿ ಲಾಭ‌ನಷ್ಟ ನೋಡುತ್ತಾರೆ. ರೈತ ಲಾಭ ನಷ್ಟ ನೋಡದೇನೆ ಖರ್ಚು ಮಾಡುತ್ತಾನೆ. ರೈತ ಬೀಜ, ಗೊಬ್ಬರ, ಕಳೆ, ಕಟಾವು ಮಾಡಲು ಮಾಡಿದ ವೆಚ್ಚ ಅಂತಿಮವಾಗಿ ಅವನು ಮಾರಾಟ ಮಾಡಿದ ಉತ್ಪನ್ನಕ್ಕಿಂತ ಕಡಿಮೆ ಇದ್ದರೆ ಮಾತ್ರ ಲಾಭವಾಗುತ್ತದೆ. ಅದಕ್ಕೆ ವಿದೇಶದಲ್ಲಿ ಒಂದು ವ್ಯವಸ್ಥೆ ಮಾಡಿದ್ದಾರೆ. ಅವರು ಪ್ರತಿ ವರ್ಷ ಬಿತ್ತನೆ ಮುಂಚೆ ಏನು ಬೆಲೆ ಇತ್ತು. ಕಳೆದ ಹತ್ತು ವರ್ಷದಲ್ಲಿ ಏನು ವಾತಾವರಣ ಇದೆ. ಒಟ್ಟಾರೆ ಎಷ್ಟು ಉತ್ಪಾದನೆ ಆಗುತ್ತದೆ. ಆಂತರಿಕ ಮಾರುಕಟ್ಟೆಗೆ ಎಷ್ಟು ಬೇಕಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಎಷ್ಟು ಬೇಕು ಎನ್ನುವುದನ್ನು ನೋಡಿ ಒಂದು ದರ ನಿಗದಿ ಮಾಡುತ್ತಾರೆ. ಉದಾಹರಣೆಗೆ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಾಲ್ ಗೆ 2500 ರೂ. ದರ ನಿಗದಿ ಮಾಡುತ್ತಾರೆ. ಒಂದು ವೇಳೆ ಮಾರುಕಟ್ಟೆಯ ದರ 2500 ಕ್ಕಿಂತ ಕಡಿಮೆ ಬಂದರೆ ಅದನ್ನು ಸರ್ಕಾರ ಕೊಡುತ್ತದೆ. ಅಂದರೆ ರೈತನಿಗೆ ಕನಿಷ್ಠ 2500 ರೂ. ಬರುತ್ತದೆ ಎನ್ನುವ ಗ್ಯಾರೆಂಟಿ ಇರುತ್ತದೆ. ಎಲ್ಲಿಯವರೆಗೂ ಈ ಥರದ ವ್ಯವಸ್ಥೆಗಳು, ತೀರ್ಮಾನಗಳು ಮತ್ತು ಅದರ ಅನುಷ್ಠಾನ ಮಾಡುವ ವ್ಯವಸ್ಥೆ ಬರಬೇಕು ಅದು ಮುಖ್ಯ ಎಂದರು.

*ಸಮಗ್ರ ಕೃಷಿಗೆ 100 ಜಿಲ್ಲೆ:*
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇದನ್ನು ಮನಗಂಡು ಯಾವ ಯಾವ ಜಿಲ್ಲೆಯಲ್ಲಿ ಇಳುವರಿ ಕಡಿಮೆ ಇದೆ. ಬೇರೆ ಜಿಲ್ಲೆಯ ರೈತರು ಎಲ್ಲಿ ಉತ್ತಮವಾಗಿದ್ದಾರೆ. ಇದನ್ನು ಸರಿ ಮಾಡಬೇಕು ಎನ್ನುವ ಉದ್ದೇಶದಿಂದ ಸಮಗ್ರ ಕೃಷಿ ಅಭಿವೃದ್ಧಿ ಯಾದರೆ ಮಾತ್ರ ದೇಶದ ಅಭಿವೃದ್ಧಿ ಆಗುತ್ತದೆ ಎಂದು ದೇಶದ ನೂರು ಜಿಲ್ಲೆಗಳನ್ನು ಆಯ್ಕೆ ಮಾಡಿದ್ದು ಅದರಲ್ಲಿ ಹಾವೇರಿ ಗದಗ ಜಿಲ್ಲೆ ಸೇರಿ ರಾಜ್ಯದ ಆರು ಜಿಲ್ಲೆಗಳಿವೆ. ಇಲ್ಲಿ ಸಮಗ್ರ ಕೃಷಿಯ ಬಗ್ಗೆ ಒಟ್ಟಾರೆ ದವಸ ಧಾನ್ಯ ಬೆಳೆಯುವ ಬಗ್ಗೆ ಉತ್ಪಾದನೆ ಹೆಚ್ಚಳ ಮಾಡುವ ಕ್ರಮಗಳ ಬಗ್ಗೆ ಅದಾದ ಮೇಲೆ ದಾಸ್ತಾನು ಮಾಡಲು ಗ್ರಾಮ ಪಂಚಾಯತಿ, ಬ್ಲಾಕ್ ಮಟ್ಟದಲ್ಲಿ ಮೂಲ ಸೌಕರ್ಯ ಕಲ್ಪಿಸುವ ಬಗ್ಗೆ ಬೇರೆ ಜಿಲ್ಲೆಗಳಿಗಿಂತ ರೈತರಿಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲ ಹೆಚ್ಚು ಕೊಡಬೇಕು ಎನ್ನುವ ನಿರ್ಣಯಗಳು ಇದರಲ್ಲಿ ಆಗುತ್ತವೆ. ಮತ್ತು ನೂರು ಜಿಲ್ಲೆಗಳಿಗೆ ಏಳು ಇಲಾಖೆಗಳು ಸರಾಸರಿ 24% ಖರ್ಚು ಮಾಡಬೇಕು. ಉಳಿದ ಜಿಲ್ಲೆಗಳಲ್ಲಿ ಶೇ 14% ಖರ್ಚು ಮಾಡಬೇಕು ಎನ್ನುವ ಮಹತ್ವದ ತೀರ್ಮಾನವನ್ನು ಪ್ರಧಾನಮಂತ್ರಿಯವರು ಮಾಡಿದ್ದಾರೆ ಎಂದರು.
ಆತ್ಮನಿರ್ಭರ ಭಾರತ, ವಿಕಸಿತ ಭಾರತ ಆಗಬೇಕಾದರೆ ಕೃಷಿಯ ಪಾತ್ರ ಬಹಳ ಮುಖ್ಯ ಇದೆ. ಆರ್ಥಿಕ ತಜ್ಞರು ಹೇಳುವ ಪ್ರಕಾರ ಕೃಷಿಯಲ್ಲಿ ಶೇ 1% ರಷ್ಟು ಅಭಿವೃದ್ಧಿ ಆದರೆ, ಉತ್ಪಾದನಾ ವಲಯದಲ್ಲಿ ಶೇ 4% ರಷ್ಟಾಗುತ್ತದೆ. ಸೇವಾ ವಲಯದಲ್ಲಿ ಅದು ಶೇ 10% ರಷ್ಟು ಅಭಿವೃದ್ಧಿ ಆಗುತ್ತದೆ. ಕೃಷಿ ಉತ್ಪಾದನೆ ಹೆಚ್ಚಾದ ಮೇಲೆ ಅದರ ಸಂಸ್ಕರಣೆ, ಸಾರಿಗೆ, ಲಾಜೆಸ್ಟಿಕ್ಸ್ ಮೂಲಕ ಉತ್ಪಾದನೆ ವಲಯದಲ್ಲಿ ಶೇ 4% ರಷ್ಟು ಹೆಚ್ಚಾಗುತ್ತದೆ. ಅದರ ಪರಿಣಾಮ ಸೇವಾ ವಲಯದಲ್ಲಿ ಹೆಚ್ಚಾಗುತ್ತದೆ. ಆರ್ಥಿಕ ಅಭಿವೃದ್ಧಿಗೆ ಕೃಷಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ.
ನಮ್ಮ ದೇಶದಲ್ಲಿ 140 ಕೋಟಿ ಜನಸಂಖ್ಯೆ‌ಇದೆ. ಬೇರೆ ದೇಶಗಳಲ್ಲಿ ಹದಿನೈದು ಇಪ್ಪತ್ತು ಕೋಟಿ ಜನಸಂಖ್ಯೆ ಇದ್ದರೂ ಹಾಹಾಕಾರ ಇದೆ. ಆಹಾರವೂ ಕೆಲಸವೂ ಇಲ್ಲ. ಆದರೆ, ನಮ್ಮ ದೇಶದಲ್ಲಿ ಇಷ್ಟು ಜನಸಂಖ್ಯೆ ಇದ್ದರೂ ಕೂಡ, ಅತಿ ಹೆಚ್ಚು ಜನರು ಕೃಷಿಯಲ್ಲಿ ತೊಡಗಿರುವುದರಿಂದ ಆರ್ಥಿಕತೆಯ ಜೊತೆಗೆ ಸಮಾಜಿಕ ಮತ್ತು ಕಾನೂನು ವ್ಯವಸ್ಥೆ ಸುಭದ್ರವಾಗಿದೆ. ಹೀಗಾಗಿ ರೈತರು ಕೇವಲ ಬೆಳೆಯನ್ನು ಮಾತ್ರ ಬೆಳೆಯುವುದಿಲ್ಲ ಆರ್ಥಿಕತೆಯನ್ನೂ ಸುಧಾರಣೆ ಮಾಡುತ್ತಾರೆ. ಅಷ್ಟೇ ಅಲ್ಲ ಸಮಾಜದಲ್ಲಿ ಸೌಹಾರ್ದತೆಯನ್ನೂ ಕೂಡ ಮೂಡಿಸಿದ್ದಾರೆ. ಈ ಕಲ್ಪನೆಯನ್ನು ಇಟ್ಟುಕೊಂಡು ರೈತನನ್ನು ನೋಡಿದಾಗ ಮಾತ್ರ ನಾವು ರೈತರಿಗೆ ನ್ಯಾಯ ಒದಗಿಸಲು ಸಾಧ್ಯ. ರೈತ ಏನೋ ಬೆಳೆಯುತ್ತಾನೆ ಅನ್ನುವ ಮನೊಭಾವನೆ ಬಿಟ್ಟು ರೈತನ ಸಮಗ್ರ ಕೃಷಿ ಅಭಿವೃದ್ಧಿ ಬಹಳ ಮುಖ್ಯ. ಹಸಿರು ಕ್ರಾಂತಿಯ ಮೂಲಕ ಈ ದೇಶದಲ್ಲಿ ಆಹಾರ ಉತ್ಪಾದನೆ ಹೆಚ್ಚಾಗಿದೆ. ಆದರೆ, ಹಸಿರು ಕ್ರಾಂತಿಗೆ ಕಾರಣವಾಗಿರುವ ರೈತ ಮಾತ್ರ ಅಲ್ಲೆ ಇದ್ದಾನೆ. ರೈತನಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸುಭದ್ರತೆಯನ್ನು ಕೊಡಬೇಕು ಎಂದು ಹೇಳಿದರು.

*ಬ್ಯಾಂಕಿಂಗ್ ವ್ಯವಸ್ಥೆ ಬದಲಾಗಬೇಕು:*
ನಾನು ಮುಖ್ಯಮಂತ್ರಿ ಇದ್ದಾಗ ರೈತರ ಮಕ್ಕಳು ಹಣದ ಸಮಸ್ಯೆಯಿಂದ ಶಾಲೆ ಬಿಡಬಾರದು ಎಂದು ಶಿಷ್ಯವೇತನ ಕೊಡುತ್ತಿದ್ದೆ. ಯಾವುದೇ ಸಮುದಾಯದ ಮಕ್ಕಳಿದ್ದರೂ ಶಿಷ್ಯವೇತನ ಕೊಡುವ ವ್ಯವಸ್ಥೆ ಮಾಡಿದ್ದೆ. ಗೊಬ್ಬರ ಬೀಜಕ್ಕೆ ವಿಶೇಷ ಸಬ್ಸಿಡಿ ಕೊಡುವ ವ್ಯವಸ್ಥೆ ನಾವು ಮಾಡಿದ್ದೇವು. ಐದು ಲಕ್ಷದ ವರೆಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುವ ವ್ಯವಸ್ಥೆ ಮಾಡಿದ್ದೇವು. ನೀರಾವರಿಗೆ ಹೆಚ್ಚು ದುಡ್ಡು ಕೊಟ್ಟಿದ್ದೇವು. ಹೀಗೆ ಐದು ವರ್ಷ ಒಂದು ರಾಜ್ಯ ಕೃಷಿ ಬಗ್ಗೆ ಬದ್ದತೆಯಿಂದ ಕೆಲಸ ಮಾಡಿದರೆ ಸಾಧ್ಯವಾಗುತ್ತದೆ. ಒಂದು ವರ್ಷ ಎರಡು ವರ್ಷದಲ್ಲಿ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಇದರ ಜೊತೆಗೆ ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಬದಲಾಗಬೇಕು. ಕೃಷಿ ಬ್ಯಾಂಕ್ ರೈತರಿಗೆ ಅವರ ಭೂಮಿಯ ಅನುಪಾತದ ಆಧಾರದಲ್ಲಿ ಸಾಲವನ್ನು ಕೊಡುವ ವ್ಯವಸ್ಥೆಯಾಗಬೇಕು. ಒಂದು ಎಕರೆಗೆ ಇಪ್ಪತ್ತು ಸಾವಿರ ಖರ್ಚಿದ್ದರೆ ಹದಿನೈದು ಸಾವಿರ ಕೊಟ್ಟರೆ ಏನು ಪ್ರಯೋಜನ ಇಲ್ಲ. ಹದಿನೈದು ಸಾವಿರ ರೂಪಾಯಿಯನ್ನೂ ಅವರು ಕೊಡುವುದಿಲ್ಲ. ಐದು ಸಾವಿರ ಕೊಡುತ್ತಾರೆ‌. ಭೂಮಿ ಮತ್ತು ಸಾಲದ ಅನುಪಾತವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.

*ಕೃಷಿ ಸಾಲಕ್ಕೆ ಸಿಬಿಲ್ ರೇಟಿಂಗ್ ಅಗತ್ಯವಿಲ್ಲ:*
ಸಿಬಿಲ್ ಸ್ಕೋರ್ ಜೊತೆಗೆ ಕೇಂದ್ರದ ಹಣಕಾಸು ಸಚಿವರ ಜೊತೆಗೆ ನಾನು ಮಾತನಾಡುತ್ತೇನೆ. ಆರ್ ಬಿಐ ದವರಿಗೂ, ಸಿಬಿಲ್ ಸಂಸ್ಥೆಯವರೊಂದಿಗೂ ಮಾತನಾಡಿದ್ದೇನೆ. ಅವರು ನಾವು ಕೇವಲ ಸಿಬಿಲ್ ರೇಟಿಂಗ್ ಮಾಡುತ್ತೇವೆ ಯಾರಿಗೂ ಸಾಲ ಕೊಡಬೇಡಿ ಎಂದು ಹೇಳುವುದಿಲ್ಲ. ಸಾಲ ಕೊಡುವವರು ಮತ್ತು ತೆಗೆದುಕೊಳ್ಳುವವರ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಬ್ಯಾಂಕ್ ಗಳನ್ನು ಒಪ್ಪಿಸಿ ಒಂದು ಸ್ಪಷ್ಟವಾದ ಸುತ್ತೊಲೆ ಬಂದಾಗ ಕೃಷಿ ಸಾಲಕ್ಕೆ ಸಿಬಿಲ್ ರೇಟಿಂಗ್ ಅವಶ್ಯಕತೆ ಇಲ್ಲ ಎನ್ನುವುದನ್ನು ಮಾಡಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

*ರೈತರನ್ನು ಒಳಗೊಂಡ ಯೋಜನೆ:*
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕೃಷಿ ಧನ್ ಧಾನ್ಯ ಯೋಜನೆಯ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿಯನ್ನು ಕೃಷಿ ಇಲಾಖೆ ಕೊಡಬೇಕು. ಅವರಿಗೆ ತರಬೇತಿ ಕೊಡಬೇಕು. ರೈತರನ್ನು ಸೇರಿಸಿಕೊಳ್ಳಬೇಕು ಇದು ಇಲಾಖೆಯ ಯೋಜನೆ ಅಲ್ಲ ರೈತರ ಯೋಜನೆ. ರೈತರನ್ನು ಒಳಗೊಂಡು ಅವರ ಸಲಹೆ ಸೂಚನೆಯನ್ನು ಇಲಾಖೆ ಪಡೆದುಕೊಳ್ಳಬೇಕು. ಆಫಿಸಿನಲ್ಲಿ ಕುಳಿತು ಕೃಷಿ ಮಾಡಲು ಆಗುವುದಿಲ್ಲ. ರೈತರಿಗೆ ಅನುಭವ ಇರುತ್ತದೆ. ಯಾವಾಗ ಬಿತ್ತಬೇಕು, ಯಾವಾಗ ಕಳೆ ತೆಗೆಯಬೇಕು, ಮಣ್ಣಿನ ಗುಣ ಹೇಗಿದೆ ಎಲ್ಲಾ ಅವರಿಗೆ ಗೊತ್ತಿರುತ್ತದೆ. ಎಲ್ಲ ತಾಲೂಕುಗಳ ರೈತರ ಸಮಿತಿ ಮಾಡಿ ಕಾಲಕಾಲಕ್ಕೆ ಅವರಿಂದ ಸಲಹೆ ಸೂಚನೆ ಪಡೆದು, ಪ್ರತಿಯೊಂದು ಹೆಜ್ಜೆಯಲ್ಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಹೋಗಬೇಕು. ಆಗ ಮಾತ್ರ ಈ ಯೋಜನೆ ಯಶಸ್ವಿಯಾಗುತ್ತದೆ. ಇಲ್ಲದಿದ್ದರೆ ರೈತರ ಪರಿಸ್ಥಿತಿ ಹಾಗೇ ಇರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಇಗ್ಗೂಡಿಸಬೇಕು ಸಮನ್ವಯ ಮೂಡಿಸಬೇಕು. ಕೇಂದ್ರ ಸರ್ಕಾರ ಕೆಲವು ಯೋಜನೆಗಳನ್ನು ಒಂದೆಡೆ ಖರ್ಚು ಮಾಡುವುದು, ರಾಜ್ಯದ ಹಣ ಒಂದು ಕಡೆ ಖರ್ಚು ಮಾಡುವುದರಿಂದ ಪ್ರಯೋಜನ ಆಗುವುದಿಲ್ಲ. ಕೇಂದ್ರ ರಾಜ್ಯದ ಯೋಜನೆಗಳನ್ನು ಸಮನ್ವಯಗೊಳಿಸಿ ಜಾರಿಗೊಳಿಸಬೇಕು. ಕೃಷಿ ಸಚಿವರು, ಕೃಷಿ ಇಲಾಖೆ ಆಯುಕ್ತರು ಸೇರಿದಂತೆ ಎಲ್ಲರ ಜೊತೆ ಮಾತನಾಡುತ್ತೇನೆ. ಕೇಂದ್ರ ರಾಜ್ಯದ ಯೋಜನೆಗಳನ್ನು ಸಮನ್ವಯಗೊಳಿಸಿ ಕೆಲಸ ಮಾಡೋಣ. ಒಟ್ಟಾರೆ ನಮ್ಮ ಗುರಿ ದೇಶದ ಅಭಿವೃದ್ಧಿ ರೈತ ಮತ್ತು ಕೃಷಿ ಅಭಿವೃದ್ಧಿ ಆಗಬೇಕು. ಸಿದ್ದೇಶ್ವರ ಸ್ವಾಮೀಜಿ ಒಂದು ಮಾತು ಹೇಳಿದ್ದರು. ಯಾವತ್ತು ರೈತ ಸಂತೋಷವಾಗಿರುತ್ತಾನೊ, ಕಾಲಾಗ ಜುರಕಿ ಚಪ್ಪಲಿ, ರೇಷ್ಮೆ ಅಂಗಿ, ಕೈಯಾಗ ಛತ್ರಿಯನ್ನು ಸಂತೋಷವಾಗಿ ಹಿಡಿದುಕೊಂಡು ತಿರುಗಾಡುತ್ತಾನೊ ಅವತ್ತು ದೇಶ ಉದ್ದಾರ ಆಗುತ್ತದೆ ಎಂದು ತಿಳಿದುಕೊಳ್ಳಿ ಅಂತ ಹೇಳಿದ್ದಾರೆ. ಆ ಕೆಲಸವನ್ನು ನಾವೆಲ್ಲ ಸೇರಿ ಮಾಡೋಣ, ರೈತ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ, ಎಲ್ಲ ರಾಜಕೀಯ ಪಕ್ಷಗಳು ರೈತರಿಗೆ ಸೇರಿವೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ,ಮಾಜಿ ಶಾಸಕರಾದ ವೀರುಪಾಕ್ಷಪ್ಪ ಬಳ್ಳಾರಿ, ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ವೀರನಗೌಡ ಪುಟ್ಟನಗೌಡ್ರ, ಜಂಟೀ ಕೃಷಿ ನಿರ್ದೇಶಕರಾದ ಡಾ ಮಲ್ಲಿಕಾರ್ಜುನ, ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಡೀನ್ ಡಾ ಕೆ.ವಿ ಬಸವಕುಮಾರ, ಹಿರಿಯ ವಿಜ್ಞಾನಿಗಳಾದ ಡಾ ಎ.ಹೆಚ್ ಬಿರಾದಾರ ಮುಖಂಡರಾದ ಡಾ ಬಸವರಾಜ ಕೇಲಗಾರ,ಕಜ್ಜರಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಗೀತಾ ಮಡಿವಾಳರ ಸೇರಿದಂತೆ ರೈತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು