ಇತ್ತೀಚಿನ ಸುದ್ದಿ
ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ ತಲಕಾವೇರಿಯಲ್ಲಿ ತೀರ್ಥೋದ್ಭವ
10/10/2025, 13:53

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕಾವೇರಿ ಸಂಕ್ರಮಣದ ಹಿನ್ನೆಲೆಯಲ್ಲಿ ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ಕಾವೇರಿ ತುಲಾ ಸಂಕ್ರಮಣ ಪ್ರಯುಕ್ತ ಕೊಡಗು ಜಿಲ್ಲೆಗೆ ಮಾತ್ರ ಸೀಮಿತವಾಗಿ ಅ. 17ರಂದು ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಾಗಿದೆ. ಸರಕಾರ 2024ರಲ್ಲಿ ಬಿಡುಗಡೆ ಮಾಡಿದ್ದ 2025ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಅ. 18 ರಂದು ಕಾವೇರಿ ಸಂಕ್ರಮಣಕ್ಕೆ ಕೊಡಗಿನಲ್ಲಿ ಸಾರ್ವತ್ರಿಕ ರಜೆ ಎಂದು ತಿಳಿಸಲಾಗಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ದಿನಾಂಕ 17-10-2025ರಂದು ಮಧ್ಯಾಹ್ನ 1.44 ರ ಸಮಯದಲ್ಲಿ ಪುಣ್ಯ ಕ್ಷೇತ್ರ ತಲಕಾವೇರಿಯಲ್ಲಿ ತೀರ್ಥೋದ್ಭವ ಆಗಲಿರುವ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿಗಳ ಕಾನೂನು ಸಲಹೆಗರಾರು ಮತ್ತು ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಸರಕಾರದ ಗಮನ ಸೆಳೆದಿದ್ದರು. ಹೀಗಾಗಿ ಮೊದಲು ಹೊರಡಿಸಲಾಗಿದ್ದ ರಜೆ ದಿನಗಳ ಆದೇಶವನ್ನು ತಿದ್ದುಪಡಿಗೊಳಿಸಿ ಅ. 18ರ ಬದಲಿಗೆ ಅ 17ರಂದು ರಜೆ ಘೋಷಣೆ ಮಾಡಲಾಗಿದೆ. ಸರಕಾರದ ಹೊಸ ತಿದ್ದುಪಡಿಯ ಆದೇಶದಂತೆ ಕೊಡಗು ಜಿಲ್ಲೆಯಾದ್ಯಂತ ಅ 17 ರಂದು ಸಾರ್ವಜನಿಕ ರಜೆಯಿರಲಿದೆ.