ಇತ್ತೀಚಿನ ಸುದ್ದಿ
124 ರಾಷ್ಟ್ರಗಳ ಅಂತಾರಾಷ್ಟ್ರೀಯ ಸೌರ ಒಕ್ಕೂಟದ 8ನೇ ಅಧಿವೇಶನ: ಅ.27ರಿಂದ 30ರವರೆಗೆ ನವದೆಹಲಿಯಲ್ಲಿ ಆಯೋಜನೆ
09/10/2025, 14:36

ನವದೆಹಲಿ(reporterkarnataka.com): ದೆಹಲಿಯಲ್ಲಿ ಅ.27ರಿಂದ 30ರವರೆಗೆ ಅಂತರಾಷ್ಟ್ರೀಯ ಸೌರ ಒಕ್ಕೂಟ (ISA)ದ 8ನೇ ಅಧಿವೇಶನವನ್ನು ಭಾರತ ಆಯೋಜಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಹಾಗೂ ಐಎಸ್ಎ ಅಧ್ಯಕ್ಷ ಪ್ರಲ್ಹಾದ್ ಜೋಶಿ ತಿಳಿಸಿದರು.
ಇಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ನಾಲ್ಕು ದಿನಗಳ ಕಾಲ ನವದೆಹಲಿಯ ಭಾರತ್ ಮಂಟಪದಲ್ಲಿ ಈ ಅಧಿವೇಶನ ಏರ್ಪಡಿಸಿದ್ದು, ಸೌರಶಕ್ತಿ ಉತ್ಪಾದನೆ-ಬಳಕೆ ನಿಟ್ಟಿನಲ್ಲಿ ಜಗತ್ತಿನ ಪ್ರಯತ್ನವನ್ನು ಒಂದೇ ವೇದಿಕೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಹೇಳಿದರು.
ಭಾರತ ಮತ್ತು ಫ್ರಾನ್ಸ್‌ನಿಂದ ಪ್ರಾರಂಭಿಸಲ್ಪಟ್ಟ ISA ಜಾಗತಿಕವಾಗಿ ದಕ್ಷಿಣದ ಅತಿದೊಡ್ಡ ಒಪ್ಪಂದ ಆಧಾರಿತ ಸರ್ಕಾರಿ ಸಂಸ್ಥೆಯಾಗಿದ್ದು, 124 ಸದಸ್ಯ ರಾಷ್ಟ್ರಗಳು ಮತ್ತು ಸಹಿ ಮಾಡಿದ ದೇಶಗಳನ್ನು ಈ ಅಧಿವೇಶನ ಒಟ್ಟುಗೂಡಿಸುತ್ತದೆ ಎಂದರು.
2018ರಲ್ಲಿ ನಡೆದ ಮೊದಲ ISA ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ನೆನಪಿಸಿಕೊಂಡ ಸಚಿವರು, ʼಒಂದು ಸೂರ್ಯ, ಒಂದು ಪ್ರಪಂಚ, ಒಂದು ಗ್ರಿಡ್ (OSOWOG) ಅನ್ನು ಮುನ್ನಡೆಸುವ ಮೂಲಕ ಸೌರ ನಿಯೋಜನೆಯನ್ನು ಹೆಚ್ಚಿಸುವಲ್ಲಿ ISA ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಭಾರತ ವಿಶ್ವಸಾರ್ಹ ಸಾಮರ್ಥ್ಯ ಹೊಂದಿದೆ ಎಂದು ನುಡಿದರು.
*ಭಾರತ 125 GW ಸೌರಶಕ್ತಿ ಸಾಮರ್ಥ್ಯ:* ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ತನ್ನ ನವೀಕರಿಸಬಹುದಾದ ಇಂಧನ ಗುರಿಗಳನ್ನು 5 ವರ್ಷಗಳ ಮೊದಲೇ ಸಾಧಿಸಿದೆ. ಪಳೆಯುಳಿಕೆಯೇತರ ಸಂಪನ್ಮೂಲಗಳಿಂದ ಒಟ್ಟಾರೆ ಸ್ಥಾಪಿತ ವಿದ್ಯುತ್ ಸಾಮರ್ಥ್ಯದಲ್ಲಿ ಶೇ.50 ದಾಟಿದೆ. ಇಂದು ಸರಿಸುಮಾರು 125 GW ಸೌರಶಕ್ತಿ ಸಾಮರ್ಥ್ಯದೊಂದಿಗೆ ಭಾರತ ವಿಶ್ವದ ಮೂರನೇ ಅತಿದೊಡ್ಡ ಸೌರ ಉತ್ಪಾದಕ ರಾಷ್ಟ್ರವಾಗಿದೆ ಎಂದು ಪ್ರತಿಪಾದಿಸಿದರು.
ʼಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆʼ ಮೂಲಕ ದೇಶದಲ್ಲಿ 20 ಲಕ್ಷಕ್ಕೂ ಹೆಚ್ಚು ಮನೆಗಳು ಸೌರಶಕ್ತಿಯಿಂದ ಬೆಳಕು ಕಂಡಿವೆ. ಅಲ್ಲದೇ, “PM-KUSUM ಯೋಜನೆಯಡಿ 3.5 ಮಿಲಿಯನ್ ಗ್ರಿಡ್-ಸಂಪರ್ಕಿತ ಕೃಷಿ ಪಂಪ್‌ಗಳನ್ನು ಸೌರೀಕರಣಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಪಿಎಂ ಕುಸುಮ್ ಯೋಜನೆ ಮೂರು ಘಟಕಗಳು 10 ಗಿಗಾವ್ಯಾಟ್ ಸಣ್ಣ ಸೌರ ಸ್ಥಾವರಗಳ ಸ್ಥಾಪನೆಯನ್ನು ಗುರಿಯಾಗಿಸಿಕೊಂಡಿದೆ. 1.4 ಮಿಲಿಯನ್ ಆಫ್-ಗ್ರಿಡ್ ಸೌರ ಪಂಪ್‌ಗಳನ್ನು ಬೆಂಬಲಿಸುತ್ತಿದೆ. ನಮ್ಮ ಈ ಪ್ರಯತ್ನಗಳು ಭಾರತದ ಶುದ್ಧ ಇಂಧನ ಪರಿವರ್ತನೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಹೇಳಿದರು.
ಕೇಂದ್ರ ಇಂಧನ ಸಚಿವಾಲಯದ ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ ಮಾತನಾಡಿ, ನಾವಿಂದು ಸೌರಶಕ್ತಿಯಲ್ಲಿ 3ನೇ ಅತಿದೊಡ್ಡ, ಪವನ ವಿದ್ಯುತ್‌ನಲ್ಲಿ 4ನೇ ಅತಿದೊಡ್ಡ ಹಾಗೂ ವಿಶ್ವದ 3ನೇ ಅತಿದೊಡ್ಡ ನವೀಕರಿಸಬಹುದಾದ ಇಂಧನ ಶಕ್ತಿ ಹೊಂದಿದ್ದೇವೆ ಎಂದು ನುಡಿದರು.
*ಸೌರ ಮಾಡ್ಯೂಲ್ ತಯಾರಿಕೆಯಲ್ಲಿ ಭಾರತ ಸೆಕೆಂಡ್:* ಸೌರ ಮಾಡ್ಯೂಲ್‌ಗಳ ತಯಾರಿಕೆಯಲ್ಲಿ ಚೀನಾ ನಂತರದ ಎರಡನೇ ಅತಿದೊಡ್ಡ ರಾಷ್ಟ್ರವಾಗಿದೆ ಭಾರತ. ನಮ್ಮ ಉತ್ಪಾದನೆ ಸೌರ ಮಾಡ್ಯೂಲ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ, ಹಸಿರು ಹೈಡ್ರೋಜನ್‌ನಂತಹ ಪ್ರದೇಶಗಳಿಗೂ ವಿಸ್ತರಿಸುತ್ತದೆ. 2031ರ ವೇಳೆಗೆ 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸುವ ಗುರಿಯೊಂದಿಗೆ ಮುನ್ನಡೆದಿದ್ದೇವೆ ಎಂದರು.
ನವೀಕರಿಸಬಹುದಾದ ಇಂಧನ ವಲಯ ಜಾಗತಿಕವಾಗಿ ಬದಲಾವಣೆಯ ಹಂತದಲ್ಲಿದೆ. ತೈಲವು 1,000 GW ತಲುಪಲು 25 ವರ್ಷಗಳನ್ನು ತೆಗೆದುಕೊಂಡರೆ, ನವೀಕರಿಸಬಹುದಾದ ಇಂಧನ ಕೇವಲ ಎರಡೇ ವರ್ಷಗಳಲ್ಲಿ ಅದನ್ನು ದ್ವಿಗುಣಗೊಳಿಸಿತು ಎಂದು ಹೇಳಿದರು.