ಇತ್ತೀಚಿನ ಸುದ್ದಿ
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ವಿರೋಧಿಸಿದ ಬಿಜೆಪಿಗರಿಗೆ ಶಿಕ್ಷಕರೇ ಉತ್ತರ ನೀಡಿದ್ದಾರೆ: ಸಚಿವ ಮಧು ಬಂಗಾರಪ್ಪ
03/10/2025, 21:27

ಶಿವಮೊಗ್ಗ( reporterkarnata.com): ನಿಗದಿತ ಅವಧಿಗಿಂತ ಮುಂಚಿತವಾಗಿ ಸಮೀಕ್ಷೆ ಪೂರ್ಣಗೊಳಿಸಿದ 25 ಜನ ಶಿಕ್ಷಕರಿಗೆ ಜಿಲ್ಲಾ ಉಸ್ತುವಾರಿ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಅವರು ಶಿವಮೊಗ್ಗದಲ್ಲಿ ಅಭಿನಂದಿಸಿ ಸನ್ಮಾನಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಯಶಸ್ವಿಯಾಗಿ ಮುಂದುವರೆಯುತ್ತಿದ್ದು, ಸಮೀಕ್ಷೆಯನ್ನು ನಿಗದಿತ ಅವಧಿಗಿಂತ ಮುಂಚಿತವಾಗಿ ಪೂರ್ಣಗೊಳಿಸಿದ 25 ಶಿಕ್ಷಕರಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯ,
ಶಿವಮೊಗ್ಗದಲ್ಲಿ ಇಂದು ಅಭಿನಂದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಿದ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, “ಸಂವಿಧಾನದ ಪೀಠಿಕೆಯನ್ನು ಓದಿ ಪ್ರಮಾಣ ಮಾಡಿದಂತೆ, ನಮ್ಮ ಶಿಕ್ಷಕರು ಈ ಕೆಲಸವನ್ನು ಅತ್ಯುತ್ತಮವಾಗಿ ಮಾಡಿದ್ದಾರೆ. ಇದು ಕೇವಲ ಸಮೀಕ್ಷೆ ಅಲ್ಲ, ಸಂವಿಧಾನವನ್ನು ಎತ್ತಿ ಹಿಡಿಯುವ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಕೆಲಸವಾಗಿದೆ” ಎಂದರು.
ಜಿಲ್ಲೆಯಲ್ಲಿ ಸಮೀಕ್ಷೆಯ ಪ್ರಗತಿಯನ್ನು ಮೆಚ್ಚಿದ ಅವರು, ರಾಜ್ಯದ ಸರಾಸರಿ 54% ರಷ್ಟಿದ್ದರೆ, ಶಿವಮೊಗ್ಗ ಜಿಲ್ಲೆಯಲ್ಲಿ 63.46% ರಷ್ಟು ಗಣತಿ ಪೂರ್ಣಗೊಂಡಿದೆ. ಅದರಲ್ಲೂ ಶಿಕಾರಿಪುರದಲ್ಲಿ ಶೇ. 70 ಮತ್ತು ಸೊರಬದಲ್ಲಿ ಶೇ. 77 ರಷ್ಟು ಮತ್ತು ಶಿವಮೊಗ್ಗ ನಗರ 56%, ತೀರ್ಥಹಳ್ಳಿ 57% ಯಶಸ್ವಿಯಾಗಿದೆ ಎಂದು ಅಂಕಿಅಂಶಗಳನ್ನು ನೀಡಿದರು. ಆರಂಭದಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳಿದ್ದರೂ, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅವುಗಳನ್ನು ಸರಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರಾದ ಪ್ರಹ್ಲಾದ್ ಜೋಶಿ, ಆರ್. ಅಶೋಕ ಮತ್ತು ಬಿ.ವೈ. ವಿಜಯೇಂದ್ರ ಅವರನ್ನು ಸಚಿವರು ತೀವ್ರವಾಗಿ ಟೀಕಿಸಿದರು.
“ಸಮೀಕ್ಷೆಯನ್ನು ವಿರೋಧಿಸುವ ಬಿಜೆಪಿಯವರು ದೇಶದ್ರೋಹಿಗಳು. ಸಮಾನತೆಯನ್ನು ತರುವ ಈ ಪ್ರಯತ್ನಕ್ಕೆ ಅಡ್ಡಿಪಡಿಸುತ್ತಿರುವ ನಿಮ್ಮ (ಬಿಜೆಪಿ) ಉದ್ದೇಶವೇನು? ಬಡವರು, ತಳವರ್ಗದವರು ಏಕೆ ಮೇಲಕ್ಕೆ ಬರಬಾರದು?” ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜಾತಿಗಣತಿ ವರದಿಯನ್ನು ಅನುಷ್ಠಾನಕ್ಕೆ ತರುವುದಾಗಿ ಭರವಸೆ ನೀಡಲಾಗಿದೆ. ಆದರೆ, ಬಿಜೆಪಿಗೆ ಪ್ರಣಾಳಿಕೆಗಿಂತ ಅದಾನಿ ಮತ್ತು ಅಂಬಾನಿ ಮಾತ್ರ ಕಾಣಿಸುತ್ತಾರೆ ಎಂದು ಹೇಳಿದರು.
ವಿಜಯೇಂದ್ರರವರನ್ನು ಉಲ್ಲೇಖಿಸಿ, “ಶಿಕಾರಿಪುರದಲ್ಲೇ ಶೇ. 70ರಷ್ಟು ಸಮೀಕ್ಷೆ ಆಗಿದೆ. ಜನರೇ ನಿಮಗೆ ಏನು ಮಾಡಬೇಡಿ ಎಂದು ಹೇಳಿದರಲ್ಲ, ಅದನ್ನು ಮಾಡಿ ತೋರಿಸಿದ್ದಾರೆ. ನಿಮಗೆ ನಾಚಿಕೆಯಾಗಬೇಕು” ಎಂದರು.
ಮಾಜಿ ಉಪಮುಖ್ಯಮಂತ್ರಿಗಳಾಗಿದ್ದ ಆರ್. ಅಶೋಕ್ ಮತ್ತು ಅಶ್ವತ್ಥ ನಾರಾಯಣ ಅವರು ಸಮೀಕ್ಷೆಯನ್ನು ರಾಜಕೀಯಗೊಳಿಸುತ್ತಿರುವುದಕ್ಕೆ ಖಂಡನೆ ವ್ಯಕ್ತಪಡಿಸಿ, “ಈ ದೇಶದ ಸಂವಿಧಾನ, ಕಾನೂನು ಮತ್ತು ಸಮಾನತೆಯ ಆಧಾರದ ಮೇಲೆ ನಾವು ಆಡಳಿತ ನಡೆಸುತ್ತಿದ್ದೇವೆ. ಇದು ಸಿದ್ದರಾಮಯ್ಯನವರ ಸಮೀಕ್ಷೆ ಅಲ್ಲ, ಇದು ಸಮಾನತೆಯ ಸಮೀಕ್ಷೆ” ಎಂದು ಪ್ರತಿಪಾದಿಸಿದರು.
ದಸರಾ ಉತ್ಸವಗಳಲ್ಲಿ ಭಾಗವಹಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಎಲ್ಲ ಕಡೆಯೂ ಶಾಂತಿಯುತವಾಗಿ ಮತ್ತು ಅದ್ದೂರಿಯಾಗಿ ಹಬ್ಬ ಆಚರಿಸಲಾಗಿದೆ ಎಂದು ತಿಳಿಸಿದರು.
ಶಿವಮೊಗ್ಗದ ದಸರಾದಲ್ಲಿ ನಟ ಶಿವರಾಜಕುಮಾರ್ ಅವರು ಭಾಗವಹಿಸಿದ್ದನ್ನು ವಿಶೇಷವಾಗಿ ಸ್ಮರಿಸಿದ ಸಚಿವರು, “ಕೀಮೋಥೆರಪಿ ಚಿಕಿತ್ಸೆ ಮುಗಿಸಿದ ಕೆಲವೇ ದಿನಗಳಲ್ಲಿ ಶಿವಣ್ಣನವರು ನಾಡಹಬ್ಬದಲ್ಲಿ ಪಾಲ್ಗೊಂಡಿರುವುದು ಅವರ ಬದ್ಧತೆಯನ್ನು ತೋರಿಸುತ್ತದೆ” ಎಂದು ಪ್ರಶಂಸಿಸಿದರು. ಅಲ್ಲದೆ, ದಸರಾ ಯಶಸ್ಸಿಗೆ ಶ್ರಮಿಸಿದ ಕಲಾವಿದರು, ಅಧಿಕಾರಿಗಳು ಮತ್ತು ಶಿವಮೊಗ್ಗ ಜಿಲ್ಲೆಯ ಜನತೆಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸಿದರು.
ಸಮೀಕ್ಷೆಯು ರಾಜ್ಯದ ಜನರಿಗೆ ನ್ಯಾಯ ಮತ್ತು ಸಮಾನತೆಯನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಯಾವುದೇ ಕಾರಣಕ್ಕೂ ಈ ಕೆಲಸವನ್ನು ನಿಲ್ಲಿಸುವುದಿಲ್ಲ ಎಂದು ಸಚಿವರು ಪುನರುಚ್ಚರಿಸಿದರು.