ಇತ್ತೀಚಿನ ಸುದ್ದಿ
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸ್ವಚ್ಛ ಆಡಳಿತ: ಪ್ರತಿಪಕ್ಷ ನಾಯಕ ಆರ್.ಅಶೋಕ್ ಗುಣಗಾನ
17/09/2025, 18:41

ಬೆಂಗಳೂರು(reporterkarnataka.com): ಹಿಂದಿನ ಯುಪಿಎ ಸರ್ಕಾರ ಕುಟುಂಬ ರಾಜಕಾರಣ ಮಾಡಿಕೊಂಡು ಭ್ರಷ್ಟ ಆಡಳಿತ ನೀಡಿತ್ತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸ್ವಚ್ಛ ಆಡಳಿತ ನೀಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಜಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಸ್ವಯಂಸೇವಕನಿಂದ ಆರಂಭವಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಬೆಳೆದಿದ್ದಾರೆ. ಕಾಂಗ್ರೆಸ್‌ನಲ್ಲಿ ಕುಟುಂಬದಲ್ಲಿ ಹುಟ್ಟಿದರೆ ನೇರವಾಗಿ ಪಕ್ಷದ ಅಧ್ಯಕ್ಷ ಆಗಬಹುದು. ದೇಶವನ್ನು ಲೂಟಿ ಮಾಡಿದ ಕುಟುಂಬದಲ್ಲಿ ಹೀಗೆಯೇ ನಡೆಯುತ್ತದೆ. ಮನಮೋಹನ್ ಸಿಂಗ್ ಅವಧಿಯಲ್ಲಿ ಎಲ್ಲ ಬಗೆಯ ಭ್ರಷ್ಟಾಚಾರ ಮಾಡಲಾಗಿತ್ತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸ್ವಚ್ಛ ಆಡಳಿತ ನೀಡಿದ್ದಾರೆ ಎಂದರು.
ಈಗ ಕಾಂಗ್ರೆಸ್‌ನವರು ಪ್ರಧಾನಿ ಮೇಲೆ ಇವಿಎಂ ಕುರಿತು ಆಪಾದನೆ ಮಾಡಿದ್ದಾರೆ. ಗೆದ್ದಾಗ ಮಾತಾಡದೇ ಸೋತಾಗ ಮಾತಾಡುತ್ತಾರೆ. ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕನೇ ಅಕ್ರಮ ಮಾಡಿ ಗೆದ್ದಿದ್ದಾನೆ ಎಂದು ಕೋರ್ಟ್ ಹೇಳಿದೆ. ಬಿಹಾರದಲ್ಲಿ ಸೋಲುವ ಭಯದಿಂದ ಭ್ರಮನಿರಸನಾಗಿ ಇಂತಹ ಆರೋಪ ಮಾಡಿದ್ದಾರೆ. ಆದರೆ ಪ್ರಧಾನಿ ಮೋದಿ ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ದೇಶಸೇವೆ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮುಂದೆಯೂ ಅಧಿಕಾರಕ್ಕೆ ಬಂದು ದೇಶವನ್ನು ನಂ.1 ಸ್ಥಾನಕ್ಕೆ ಏರಿಸಲಿದ್ದಾರೆ ಎಂದರು.
ಆರ್ಥಿಕತೆಯಲ್ಲಿ ನಾಲ್ಕನೇ ಸ್ಥಾನ, ಸೇನಾಬಲದಲ್ಲಿ ಐದನೇ ಸ್ಥಾನದಲ್ಲಿ ಭಾರತ ಇದೆ. ಪ್ರಪಂಚಕ್ಕೆ ಸವಾಲು ಹಾಕುವ ಚೀನಾ, ಅಮೆರಿಕ ಕೂಡ ಭಾರತದ ಸ್ನೇಹ ಬಯಸಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ. ವಯಸ್ಸಿನ ಆಧಾರದಲ್ಲಿ ಬಿಜೆಪಿಯಲ್ಲಿ ಯಾರನ್ನೂ ಮನೆಗೆ ಕಳುಹಿಸಿಲ್ಲ. ನಮ್ಮಲ್ಲಿ ಅನೇಕ ನಾಯಕರು ವಯಸ್ಸಾದರೂ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಮೋದಿಯವರು ಮುಂದೆಯೂ ಪ್ರಧಾನಿಯಾಗಲಿ ಎಂದು ಅವರು ಹೇಳಿದರು.
*ರೇಷನ್ ಕಾರ್ಡ್ ರದ್ದು:*
ಕಾಂಗ್ರೆಸ್ ಸರ್ಕಾರ 13 ಲಕ್ಷ ರೇಷನ್ ಕಾರ್ಡ್ ರದ್ದು ಎಂದು ಹೇಳಿ ಒಳಗೊಳಗೆ 25 ಲಕ್ಷ ಕಾರ್ಡ್ ರದ್ದು ಮಾಡಲಿದೆ. ಇದರಿಂದಾಗಿ ಬಡವರಿಗೆ ಯಾವುದೇ ಸೌಲಭ್ಯ ಸಿಗುವುದಿಲ್ಲ. ರೇಷನ್ ಕಾರ್ಡ್ ಇದ್ದವರಿಗೆ ಔಷಧಿ, ಚಿಕಿತ್ಸೆ ಉಚಿತವಿದೆ. ಇಂತಹ ಚಿಕಿತ್ಸೆಗಳಲ್ಲಿ ಹಣ ಉಳಿತಾಯ ಮಾಡಬಹುದು. ಬಡವರಿಗೆ ಎಲ್ಲ ಸೌಲಭ್ಯಗಳು ಸ್ಥಗಿತಗೊಳ್ಳಲಿದೆ ಎಂದರು.
ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚದೆ ಸುರಂಗ ರಸ್ತೆ ನಿರ್ಮಿಸಲಾಗುತ್ತದೆ. ರಿಂಗ್ ರಸ್ತೆಯಲ್ಲೂ ವಾಹನ ಚಲಾಯಿಸಲು ಆಗುವುದಿಲ್ಲ. ಬಿಎಂಟಿಸಿ ಬಸ್ಸುಗಳು ಬಹಳ ನಿಧಾನವಾಗಿ ಚಲಿಸುವಂತಾಗಿದೆ. ಅನೇಕ ಐಟಿ ಕಂಪನಿಗಳು ಹೈದರಾಬಾದ್, ಚೆನ್ನೈಗೆ ಹೋಗಲು ಯತ್ನಿಸುತ್ತಿವೆ. ಬಿಜೆಪಿ ಸರ್ಕಾರ ಇದ್ದಾಗ, ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೂ 100 ಕೋಟಿ ರೂ. ನೀಡಲಾಗಿತ್ತು. ಆದರೆ ಈಗ ಅನುದಾನವೇ ಇಲ್ಲ ಎಂದರು.
ಸರ್ಕಾರ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದೆ. ಈ ಸಮೀಕ್ಷೆಗೆ ಹಣ ಹಾಳು ಮಾಡದೆ ಮುಂದೂಡುವುದು ಉತ್ತಮ. ಹಬ್ಬ ಇರುವುದರಿಂದ ಸಮೀಕ್ಷೆಯನ್ನು ಮುಂದೂಡಬೇಕು. ಬೇರೆ ಯಾವುದೇ ಕೆಲಸ ನಡೆಯುತ್ತಿದೆ. ಆರ್ಥಿಕ ಸ್ಥಿತಿ ಹಾಳಾಗಿಹೋಗಿದೆ. ಬೆಳೆ ಹಾನಿ ಪರಿಹಾರಕ್ಕೆ ಹಣ ಕೊಡಲು ಗತಿ ಇಲ್ಲ. ಅನುದಾನ ನೀಡುವುದರಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಪ್ರತಿ ಕ್ಷೇತ್ರವನ್ನೂ ಪ್ರತ್ಯೇಕವಾಗಿ ನೋಡಿ ಅನುದಾನ ನೀಡಬೇಕಾಗುತ್ತದೆ. ಹಾಗಾದರೆ ಮಾತ್ರ ಅದನ್ನು ಅಭಿವೃದ್ಧಿಯ ಪಥ ಎನ್ನಬಹುದು ಎಂದು ಅವರು ಹೇಳಿದರು.
ಮುಡಾ ಹಗರಣ ಸಂಬಂಧ ಮಾಜಿ ಆಯುಕ್ತರನ್ನು ಇಡಿ ಬಂಧಿಸಿದೆ. ಮುಡಾ ಹಗರಣದಲ್ಲಿ ನಷ್ಟವಾದ ಎಲ್ಲ ಹಣ ವಾಪಸ್ ಬರಬೇಕು. ಎಲ್ಲ ರೀತಿಯ ತನಿಖೆಯಾಗಿ ತಪ್ಪಿತಸ್ಥರು ಬಂಧನವಾಗಬೇಕೆಂಬುದು ಬಿಜೆಪಿಯ ಆಗ್ರಹ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಕುಲಗಳನ್ನು ರೂಪಿಸಿದ್ದಾರೆ. ಕುಲವೆಂದು ಹೊಡೆದಾಡಬೇಡಿ ಎಂದು ಕನಕದಾಸರು ಹೇಳಿದರೆ, ಸಿಎಂ ಸಿದ್ದರಾಮಯ್ಯ ಕುಲಗಳು ಹೊಡೆದಾಡಿ ಎನ್ನುವಂತೆ ಮಾಡಿದ್ದಾರೆ. ಕ್ರೈಸ್ತರಲ್ಲೂ ಹಿಂದೂ ಜಾತಿಗಳು ಬಂದಿವೆ. ಹಿಂದೆ ವೀರಶೈವ ಲಿಂಗಾಯತರನ್ನು ಒಡೆದಿದ್ದರು. ಈಗ ಅದನ್ನೇ ಮಾಡಲು ಹೋದರೆ ಕಾಂಗ್ರೆಸ್ ಪಕ್ಷವೇ ಒಡೆದುಹೋಗುತ್ತದೆ ಎಂದರು.