ಇತ್ತೀಚಿನ ಸುದ್ದಿ
Mangaluru | ವಿಚ್ಚೇಧನಕ್ಕೆ ಕೋರ್ಟ್ ಮೆಟ್ಟಿಲೇರಿದವರನ್ನು ಮತ್ತೆ ಒಂದುಗೂಡಿಸಿದ ಲೋಕ್ ಅದಾಲತ್
14/09/2025, 00:11

ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ ಕಾರ್ಯಕ್ರಮವು ವಿಚ್ಚೇಧನಕ್ಕೆ ಮುಂದಾಗಿದ್ದ ದಂಪತಿಯನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಯಿತು.
ಹರೀಶ್- ಶಶಿಕಲಾ ಎಂಬ ದಂಪತಿಯು ದಾಂಪತ್ಯ ಭಿನ್ನಾಭಿಪ್ರಾಯಗಳಿಂದ ವಿಚ್ಚೇಧನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನಂತರ ಈ ಪ್ರಕರಣವನ್ನು ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದ ಮೂಲಕ ಸರಿಪಡಿಸಲು ಪ್ರಯತ್ನಿಸಿ, ಗಂಡ ಹೆಂಡತಿಯ ಮಧ್ಯೆ ಸಂಧಾನ ನಡೆಸಿ, ಒಂದುಗೂಡಿ ದಾಂಪತ್ಯ ಜೀವನ ಮುಂದುವರೆಸುವುದರ ಬಗ್ಗೆ ಉಭಯ ಪಕ್ಷಗಾರರಿಗೆ ಮನವರಿಕೆ ಮಾಡಲಾಗಿದೆ. ಸಂಧಾನಕ್ಕೆ ಒಪ್ಪಿ, ದಂಪತಿ ಮತ್ತೆ ಒಂದುಗೂಡಿ ಜೀವನ ಮುಂದುವರಿಸಲು ಒಪ್ಪಿದ್ದರು.
ಅದರಂತೆ ಶನಿವಾರ ಲೋಕ ಅದಾಲತ್ ಗೆ ಆಗಮಿಸಿದ್ದ ಹರೀಶ್-ಶಶಿಕಲಾ ದಂಪತಿಯು ಪ್ರಧಾನ ಜಿಲ್ಲಾ ನ್ಯಾಯಾಧೀಶ ಬಸವರಾಜ ಅವರ ಸಮಕ್ಷಮದಲ್ಲಿ ಪರಸ್ಪರ ಹಾರ ಬದಲಾಯಿಸುವ ಮೂಲಕ ಒಂದಾಗುವ ಮೂಲಕ ಪ್ರಕರಣ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ, ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ನ್ಯಾಯಾವಾಧಿಗಳು ಉಪಸ್ಥಿತರಿದ್ದರು.