ಇತ್ತೀಚಿನ ಸುದ್ದಿ
ಇವಿ ಉದ್ಯಮದಲ್ಲಿ 30@30 ಗುರಿಯತ್ತ ಭಾರತ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ
11/09/2025, 12:47

* ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅಭಿಮತ
* 2030ರ ವೇಳೆಗೆ ಶೇ.30ರಷ್ಟು ವಿದ್ಯುತ್ ವಾಹನಗಳ ಹೊಂದಲಿದೆ ಭಾರತ
* ಕೋಲ್ಕತ್ತಾದ ʼಅತ್ಯಾಧುನಿಕ ವಿದ್ಯುತ್ ವಾಹನ ಪರೀಕ್ಷಾ ಸೌಲಭ್ಯʼಕ್ಕೆ ಚಾಲನೆ
ನವದೆಹಲಿ(reporterkarnataka.com): ಭಾರತ 2030ರ ವೇಳೆಗೆ ಶೇ.30ರಷ್ಟು ವಿದ್ಯುತ್ ವಾಹನಗಳನ್ನು ಹೊಂದುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ ಸಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನವದೆಹಲಿಯಲ್ಲಿ ಕೋಲ್ಕತ್ತಾದ ಅಲಿಪೋರ್ ಪ್ರಾದೇಶಿಕ ಪ್ರಯೋಗಾಲಯದ ʼಅತ್ಯಾಧುನಿಕ ವಿದ್ಯುತ್ ವಾಹನ ಪರೀಕ್ಷಾ ಸೌಲಭ್ಯʼಕ್ಕೆ ಚಾಲನೆ ನೀಡಿ, ಇವಿ ವಾಹನಗಳಿಗೆ ಆದ್ಯತೆ ನೀಡುತ್ತಿರುವ ಕೇಂದ್ರ ಸರ್ಕಾರ ಅವುಗಳ ಪ್ರಾಯೋಗಿಕ ಪರೀಕ್ಷೆಗೂ ಮಹತ್ವ ನೀಡಿದೆ ಎಂದರು.
ಭಾರತದ 30@30 ಗುರಿಯನ್ನು ಬೆಂಬಲಿಸಲು ವಿದ್ಯುತ್ ವಾಹನಗಳು ಮತ್ತು ಅವುಗಳ ಘಟಕಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸಲು ಕಠಿಣ ಪರೀಕ್ಷೆ, ಮೌಲ್ಯೀಕರಣ ಮತ್ತು ಪ್ರಮಾಣೀಕರಣಕ್ಕೆ ಒಳಗಾಗುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಸುಸ್ಥಿರ ಚಲನಶೀಲತೆ ಉತ್ತೇಜಿಸುವ ಮತ್ತು ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವ ನಮ್ಮ ಧ್ಯೇಯಕ್ಕೆ ಬದ್ಧವಾಗಿ ಇವಿ ವಲಯ ಸಾಗುತ್ತಿದೆ ಎಂದು ಪ್ರತಿಪಾದಿಸಿದರು.
ಪರಿಸರ ಸ್ನೇಹಿಯಾಗಿ ವಿದ್ಯುತ್ ವಾಹನಗಳು ಮುಂಚೂಣಿಯಲ್ಲಿವೆ. ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಹಾಗೂ ಹೊರಸೂಸುವಿಕೆ ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಕೇಂದ್ರ ಸರ್ಕಾರ ಸೌರ ಶಕ್ತಿ, ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಆದ್ಯತೆ ನೀಡಿದಂತೆ ವಿದ್ಯುತ್ ಚಾಲಿತ ವಾಹನ, ಡ್ರೋಣ್ ಉದ್ಯಮ ಹಾಗೂ ಅವುಗಳ ಬ್ಯಾಟರಿ ಟೆಸ್ಟಿಂಗ್ ಪ್ರಯೋಗಾಲಯ ಸೌಲಭ್ಯ ಕಲ್ಪಿಸಲು ಸಹ ಮಹತ್ವ ನೀಡಿದೆ. ಆ ಮೂಲಕ ಇವಿ ಉದ್ಯಮ ವಲಯವನ್ನು ಮತ್ತಷ್ಟು ಬಲಪಡಿಸುತ್ತಿದೆ ಎಂದು ಹೇಳಿದರು.
ಭಾರತದ ಇವಿ ಬ್ಯಾಟರಿ ವಹಿವಾಟು, ಮಾರುಕಟ್ಟೆ ಇಂದು ಬಹು ವಿಶಾಲವಾಗಿ ಬೆಳೆಯುತ್ತಿದೆ, ಇವಿ ವಾಹನಗಳಲ್ಲಿ ಬ್ಯಾಟರಿ ಪ್ರಮುಖವಾಗಿದ್ದರಿಂದ ಬ್ಯಾಟರಿ ಉದ್ಯಮ ಮತ್ತು ಟೆಸ್ಟಿಂಗ್ ದೊಡ್ಡ ಮಟ್ಟದಲ್ಲಿ ಬೇಡಿಕೆ ಕಂಡುಕೊಳ್ಳುತ್ತಿದೆ. ಯುವ ಸಮುದಾಯಕ್ಕೆ ಹೆಚ್ಚಿನ ಉದ್ಯೋಗಾವಕಾಶ ಸಹ ಕಲ್ಪಿಸಿದೆ ಎಂದರು.
*21 ಲಕ್ಷ ಇವಿ ವಾಹನ ಸೇಲ್:* ಭಾರತ ಇಂದು 21 ಲಕ್ಷ ಇವಿ ವಾಹನಗಳನ್ನು ವಿತರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದಾಗಿ ಇವಿ ಉದ್ಯಮ ಬೃಹತ್ತಾಗಿ ವಿಸ್ತರಣೆ ಕಾಣುತ್ತಿದೆ. ದ್ವಿಚಕ್ರ ವಾಹನದಿಂದ ಹಿಡಿದು, ಬಸ್, ಕಾರ್, ಟ್ರ್ಯಾಕ್ಟರ್, ಡ್ರೋಣ್ ಮಾತ್ರವಲ್ಲ ರಕ್ಷಣಾ ಸಾಮಗ್ರಿಗಳಲ್ಲೂ ವಿದ್ಯುತ್ ಚಾಲಿತ ತಂತ್ರಜ್ಞಾನ ಹಾಸು ಹೊಕ್ಕಾಗುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
*ಗುರಿ ಮೀರುತ್ತಿದೆ ಸೋಲಾರ್ ವಿದ್ಯುತ್:* ಸೋಲಾರ್ ವಿದ್ಯುತ್ ಉತ್ಪಾದನೆ ಇಂದು ನಿರೀಕ್ಷಿತ ಗುರಿ ಮೀರಿ ಸಾಗುತ್ತಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳೂ ಹೆಚ್ಚಿನ ಸಬ್ಸಿಡಿ ನೀಡುತ್ತಿದ್ದು, ಇದೆಲ್ಲದರ ಪರಿಣಾಮ ಇಂದು 2014ರಲ್ಲಿ ಕೇವಲ 2.44 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಇದ್ದದ್ದು ಇದೀಗ 130 ಮೆಗ್ಯಾವ್ಯಾಟ್ ಮೀರಿದೆ. ಇನ್ನು ಎರಡ್ಮೂರು ವರ್ಷಗಳಲ್ಲಿ 200 ಮೆಗಾವ್ಯಾಟ್ ಉತ್ಪಾದನೆ ಗುರಿ ಹೊಂದಿದೆ ಎಂದು ವಿವರಿಸಿದರು.
*ಭಾರತದ ವಿದ್ಯುತ್ ಬೇಡಿಕೆ ದ್ವಿಗುಣ:* ಭಾರತದಲ್ಲಿ ಇಂದು ಬಹುತೇಕ ಎಲ್ಲಾ ವಲಯಗಳು ವಿಸ್ತಾರವಾದಂತೆ ವಿದ್ಯುತ್ ಬೇಡಿಕೆಯೂ ದ್ವಿಗುಣವಾಗಿದೆ. ಅದಕ್ಕೆ ಪೂರಕವಾಗಿ ಈಗ ಸೌರ ವಿದ್ಯುತ್, ಗಾಳಿ ವಿದ್ಯುತ್ ಹೀಗೆ ನವೀಕರಿಸಬಹುದಾದ ಇಂಧನ ಮೂಲಗಳಿಂದ ಬೇಡಿಕೆ ಸರಿದೂಗಿಸುತ್ತಿದೆ. ಆದಾಯದ ಒಂದು ಉದ್ಯಮವಾಗಿಯೂ ಬೆಳೆಯುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಪಿಎಂ ಸೂರ್ಯ ಘರ್ ಯೋಜನೆಯಲ್ಲಿ ಈವರೆಗೆ 21 ಲಕ್ಷ ಘಟಕಗಳ ಅಳವಡಿಕೆ ಆಗಿದ್ದು, ಸೌರ ಯೋಜನೆ ಜತೆಗೆ ಬ್ಯಾಟರಿ ಉದ್ಯಮ ಸಹ ಬೆಳೆಯುತ್ತಿದೆ. ಕೇಂದ್ರ ಸರ್ಕಾರ ಸೂರ್ಯ ಘರ್‌ಗೆ 3 ಕಿಲೋವ್ಯಾಟ್ ವಿದ್ಯುತ್ ಉತ್ಪಾದನಾ ಸೌರ ಫಲಕ ಘಟಕಕ್ಕೆ ₹78000 ಸಬ್ಸಿಡಿ ನೀಡುತ್ತಿದೆ. ಜತೆಗೆ ಆಯಾ ರಾಜ್ಯ ಸರ್ಕಾರಗಳೂ ಸಹ ಹೆಚ್ಚಿ ಉತ್ತೇಜನ ನೀಡುತ್ತಿವೆ. ಹೀಗಾಗಿ ಲಕ್ಷಾಂತರ ಫಲಾನುಭವಿಗಳು ಇಂದು ಉಚಿತ್ ವಿದ್ಯುತ್ ಪಡೆಯುತ್ತಿದ್ದಾರೆ ಎಂದರು.
*ವೇಗ ಪಡೆಯುತ್ತಿದೆ ಡ್ರೋಣ್ ಉದ್ಯಮ:* ಭಾರತ ಇಂದು ಡ್ರೋಣ್ ಉದ್ಯಮದಲ್ಲಿ ಬಹು ದೊಡ್ಡದಾಗಿ ಬೆಳೆಯುತ್ತಿದೆ. 2014ರಲ್ಲಿ ಡ್ರೋಣ್ ಉತ್ಪಾದನೆ ಶೂನ್ಯವಾಗಿತ್ತು. ಇದೀಗ ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯಿಂದಾಗಿ ವಿಸ್ತರಣೆ ಕಂಡಿದೆ. ಪ್ರಸ್ತುತ ದೇಶದ ಆರ್ಥಿಕತೆಗೆ ₹1.25 ಲಕ್ಷ ಕೋಟಿ ಆರ್ಥಿಕ ಕೊಡುಗೆ ನೀಡಿದೆ ಡ್ರೋಣ್ ಉದ್ಯಮ ಎಂದು ಸಚಿವ ಜೋಶಿ ಹೇಳಿದರು.
*ಕೃಷಿಯಿಂದ ರಕ್ಷಣೆವರೆಗೂ ಬೆಳೆದಿದೆ:* ನಮ್ಮ ಡ್ರೋಣ್ ವಲಯ ಇಂದು ಕೃಷಿ ಮಾತ್ರವಲ್ಲ ಗಡಿಯಲ್ಲಿ ನಮ್ಮ ರಕ್ಷಣೆಗೆ, ಗಡಿಯಾಚೆ ದೇಶದ ಆದಾಯಕ್ಕೂ ಮಹತ್ವದ ಕೊಡುಗೆ ನೀಡುತ್ತಿದೆ. ʼಆಪರೇಷನ್ ಸಿಂಧೂರ್ʼ ವೇಳೆ ಪಾಕಿಸ್ತಾನ ಭಾರತದ ಮೇಲೆ ಒಮ್ಮೆಲೇ 1000 ಡ್ರೋಣ್, ಮಿಸೈಲ್‌ಗಳನ್ನು ಹಾರಿಸಿದರೂ ನಮ್ಮ ರಕ್ಷಣಾ ಕವಚದ ಡ್ರೋಣ್, ಮಿಸೈಲ್‌ಗಳು ಅವೆಲ್ಲವನ್ನೂ ಕ್ಷಣಾರ್ಧದಲ್ಲಿ ಆಗಸದಲ್ಲೇ ಹೊಡೆದುರುಳಿಸಿದ್ದರಿಂದ ಇಂದು ಜಗತ್ತೇ ನಮ್ಮತ್ತ ನೋಡುತ್ತಿದೆ. ಭಾರತದ ಡ್ರೋಣ್ ತಂತ್ರಜ್ಞಾನಕ್ಕೆ ವಿದೇಶಗಳೂ ಫಿದಾ ಆಗಿ ದೊಡ್ಡ ಮಟ್ಟದ ಬೇಡಿಕೆ ಇಡುತ್ತಿದ್ದಾರೆ ಎಂದರು.
*ಕೃಷಿಯಲ್ಲೂ ದೊಡ್ಡ ಬದಲಾವಣೆ ತಂದ ಡ್ರೋಣ್:* ಕೇಂದ್ರ ಸರ್ಕಾರ ಈಗಾಗಲೇ ಕೃಷಿ ವಲಯಕ್ಕೆ ಶೇ.80ರಷ್ಟು ಸಬ್ಸಿಡಿಯಲ್ಲಿ 1000 ಡ್ರೋಣ್‌ಗಳನ್ನು ವಿತರಿಸಿದೆ. ಗ್ರಾಮೀಣ ಮಹಿಳೆಯರಿಗೆ ಒಂದು ಉದ್ಯೋಗವನ್ನೇ ಕಲ್ಪಿಸಿದೆ. ಆರಂಭದಲ್ಲಿ 300-400 ಇದ್ದ ಸ್ಟಾರ್ಟಪ್‌ಗಳು ಸಂಖ್ಯೆ ಇದೀಗ 1 ಲಕ್ಷ ಮೀರಿದೆ. ಡ್ರೋಣ್ ಮಾರುಕಟ್ಟೆ ಬಹು ದೊಡ್ಡದಾಗಿ ಬೆಳೆಯುತ್ತಿದೆ ಎಂದು ಹೇಳಿದರು.
ಭಾರತ ಸೌರ ಶಕ್ತಿ, ಡ್ರೋಣ್, ಇವಿ ವಾಹನಗಳು, ಮೊಬೈಲ್ ಉತ್ಪಾದನೆ ಹೀಗೆ ಸರ್ವದರಲ್ಲೂ ಉತ್ಪಾದನಾ ಹಬ್ ಆಗಿ ಗುರುತಿಸಿಕೊಳ್ಳುತ್ತಿದೆ. ಭಾರತದ ಪಾಲಿಗೆ 21ನೇ ಶತಮಾನ ಉತ್ಪಾದನಾ ಯುಗವಾಗಿದ್ದು, ಆತ್ಮನಿರ್ಭರ ಮತ್ತು ವಿಕಸಿತ ಭಾರತಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ.