ಇತ್ತೀಚಿನ ಸುದ್ದಿ
ಶ್ರದ್ಧಾ ಭಕ್ತಿಪೂರ್ವಕ ಹಬ್ಬ ಆಚರಣೆಗಿಲ್ಲ ಅಡ್ಡಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಸ್ಪಷ್ಟನೆ
22/08/2025, 22:11

ಮಂಗಳೂರು(reporterkarnataka.com): ದಕ್ಷಿಣ ಕನ್ನಡ, ಉಡುಪಿಯಲ್ಲಿ ಹಿಂದುಗಳ ಹಬ್ಬ ಅಡಚಣೆ ಉಂಟು ಮಾಡುತ್ತಿದ್ದಾರೆ ಎಂದು ಇಲ್ಲಿನ ಶಾಸಕರು ಸದನದಲ್ಲಿ ವಿಚಾರ ಎತ್ತುತ್ತಾರೆ. ನಾನು ಸ್ಪಷ್ಟನೆ ಹೇಳಲು ಬಯಸುತ್ತೇನೆ, ಬಿಜೆಪಿ ಬಂಡವಾಳವೇ ಧರ್ಮದ ವಿಚಾರದಲ್ಲಿ ಅಡಚಣೆ ಮಾಡುವುದಾಗಿದ್ದು, ಅದನ್ನು ಅವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಯಾಕೆಂದರೆ ಇಲ್ಲಿ ಯಾವುದೇ ಧರ್ಮದ ಹಬ್ಬಗಳ ಆಚರಣೆಗೆ ಎಲ್ಲಿಯೂ ಯಾವ ರೀತಿಯ ತೊಂದರೆ ಇಲ್ಲ. ಆಯೋಜಕರು ಶ್ರದ್ಧಾಭಕ್ತಿಪೂರ್ವಕವಾಗಿ ಹಬ್ಬಗಳನ್ನು ಆಚರಿಸಿದರೆ ರಾಜ್ಯ ಸರ್ಕಾರದಿಂದ ಯಾವುದೇ ಅಡಚಣೆ ಇಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ನಗರದ ಮಲ್ಲಿಕಟ್ಟೆಯ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇರುವಾಗಲೇ ಸಮಯದ ಬಗ್ಗೆ ಒಂದು ಕಾನೂನನ್ನು ತಂದಿದ್ದರು. ಅಧಿಕಾರಿಗಳ ಕೆಲಸ ಕಾನೂನನ್ನು ಪಾಲನೆ ಮಾಡುವುದು. ಆದರೂ ಕೂಡಾ ಆಯಾಯ ಭೌಗೋಳಿಕ ಪ್ರದೇಶದಲ್ಲಿ ನಡೆಯುತ್ತಿರುವಂತಹ ಹಬ್ಬಗಳಿಗೆ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಿಂದೆಯೂ ಅವಕಾಶ ಕೊಟ್ಟಿತ್ತು ಮುಂದೆಯೂ ಕೊಡಲಿದ್ದಾರೆ. ಎಲ್ಲಿಯೂ ತೊಂದರೆ ಇಲ್ಲ. ಈ ಬಾರಿಯೂ ಧೈರ್ಯದಿಂದ ಹೇಳ್ತಾ ಇದ್ದೇವೆ, ಮುಂದೆ ಬರುವ ಗಣೇಶೋತ್ಸವ, ದಸರಾ ಹಬ್ಬಗಳೂ ಕೂಡ ಹಿಂದೆ ನಾವು ಯಾವ ರೀತಿ ಮಾಡುತ್ತಾ ಇದ್ದೇವೋ ಅದೇ ರೀತಿ ಮಾಡಲು ತೊಂದರೆ ಇಲ್ಲ. ಈ ಬಗ್ಗೆ ನಾನು ಮಂಗಳೂರು ಪೊಲೀಸ್ ಕಮೀಷನರ್ ಅವರನ್ನು ಭೇಟಿಯಾಗಿದ್ದೆ. ಕಾನೂನನ್ನು ಮೀರಿ ಮಾಡಿ ಎಂದು ಅವರು ಹೇಳಲು ಆಗುವುದಿಲ್ಲ. ಕಾನೂನಿನ ಚೌಕಟ್ಟಿನೊಳಗಡೆ ಮಾಡಿ, ಆದರೆ ಡಿಜೆಗೆ ಅವಕಾಶವಿಲ್ಲ, ಅದು ನಮ್ಮ ಸಂಸ್ಕೃತಿಯ ಚೌಕಟ್ಟು ಕೂಡ ಅಲ್ಲ. ಅದನ್ನು ನಿಷೇಧಿಸಬೇಕು ಎಂದು ಹಿಂದಿನಿಂದಲೂ ಆಗ್ರಹವಿದ್ದು, ಅದರ ಬಗ್ಗೆ ಅವರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ವಿನಃ ಬೇರೆ ಯಾವುದೇ ಆಚರಣೆಗಳಿಗೆ ಅವರು ತೊಂದರೆ ಮಾಡುವುದಿಲ್ಲ. ತೊಕ್ಕೊಟ್ಟಿನಲ್ಲಿಯೂ ಆಚರಣೆ ಆಗಿದೆ. ಆದರೆ ಯಾವುದೇ ತೊಂದರೆ ಆಗಿಲ್ಲ. ಸಮಯಾವಕಾಶ 11 ಗಂಟೆ ಇದ್ದರೂ ರಾತ್ರಿ 2 ಗಂಟೆವರೆಗೆ ಮೆರವಣಿಗೆ ನಡೆದಿದೆ. ಯಾರಿಗೂ ತೊಂದರೆ ಮಾಡಿಲ್ಲ. ಈಗಲೂ ಅಷ್ಟೆ ಕಮಿಷನರ್ ಮನವಿ ಏನೆಂದರೆ ಕಾನೂನಿನ ಪ್ರಕಾರ ನಾವು ನಡೆದುಕೊಳ್ಳುತ್ತೇವೆ, ಟೈಮಿಂಗ್ಸ್ ಬಗ್ಗೆ ಸಂಬಂಧಪಟ್ಟ ಪೊಲೀಸ್ ಇಲಾಖೆ ಅನುಮತಿ ಪಡೆಯಿರಿ, ನಿಮ್ಮ ಸಂಸ್ಕೃತಿ ಪ್ರಕಾರ ಆಚರಣೆಗೆ ನಮ್ಮ ಅಭ್ಯಂತರವಿಲ್ಲ, ಯಾವುದೇ ತೊಂದರೆಯನ್ನೂ ಕೊಡುವುದಿಲ್ಲ. ಶಾಸಕರಿಗೆ ಇಂಥಾ ವಿಚಾರ ಬಿಟ್ಟು ಬೇರೆ ವಿಚಾರದ ಕುರಿತು ಸದನದಲ್ಲಿ ಧ್ವನಿ ಎತ್ತಲಿ ಎಂದು ತಿಳಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಎಂ.ಎಸ್.ಮಹಮ್ಮದ್, ನವೀನ್ ಡಿಸೋಜ, ಸುಭಾಶ್ಚಂದ್ರ ಶೆಟ್ಟಿ, ಅಪ್ಪಿ, ಲತಾ, ಶಶಿಧರ ಹೆಗ್ಡೆ, ಚಿತ್ತರಂಜನ್, ಶಾಹುಲ್ ಹಮೀದ್, ನವಾಜ್, ದಿನೇಶ್, ವಿಕಾಸ್, ನೀರಜ್‌ಪಾಲ್, ಪ್ರೇಮ್ ಬಳ್ಳಾಲ್‌ಬಾಗ್ ಮೊದಲಾದವರು ಉಪಸ್ಥಿತರಿದ್ದರು.