ಇತ್ತೀಚಿನ ಸುದ್ದಿ
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್ ವಶಕ್ಕೆ: ಖಾಸಗಿ ವಾಹನದಲ್ಲಿ ಪ್ರಯಾಣ; ಬ್ರಹ್ಮಾವರ ಪೊಲೀಸರಿಂದ ವಿಚಾರಣೆ
21/08/2025, 11:51
ಉಜಿರೆ(reporterkarnataka.com): ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧಿಸಿದಂತೆ ತಿಮರೋಡಿ ಅವರನ್ನು ಅವರ ಉಜಿರೆ ಸಮೀಪದ ಅವರ ಮನೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದಕ್ಕೆ ಮುನ್ನ ಸುಮಾರು 1 ತಾಸಿಗೂ ಅಧಿಕ ಕಾಲ ತಿಮರೋಡಿ ಮನೆ ಎದುರು ಹೈಡ್ರಾಮವೇ ನಡೆದಿದೆ. ವಾರಂಟ್ ಇಲ್ಲದೆ ಹೇಗೆ ಬಂಧನ ಮಾಡುತ್ತೀರಿ ಎಂದು ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಪ್ರಶ್ನಿಸಿದ್ದಾರೆ. ಮೊದಲು ಪೊಲೀಸರು ತಮ್ಮ ವಾಹನ ಹತ್ತುವಂತೆ ತಿಮರೋಡಿ ಅವರಿಗೆ ಸೂಚನೆ ನೀಡಿದರು. ಆದರೆ ಮಹೇಶ್ ತಿಮರೋಡಿ ಅವರು ಪೊಲೀಸ್ ವಾಹನದಲ್ಲಿ ನಾನು ಬರುವುದಿಲ್ಲ, ನನ್ನ ವಾಹನದಲ್ಲೇ ನಾನು ಪೊಲೀಸ್ ಠಾಣೆಗೆ ಆಗಮಿಸುತ್ತೇನೆ ಎಂದು ಪಟ್ಟು ಹಿಡಿದರು. ನಂತರ ಪೊಲೀಸರ ಬೆಂಗಾವಲಿನಲ್ಲಿ ತಿಮರೋಡಿ ಅವರು ತನ್ನ ಸ್ವಂತ ವಾಹನದಲ್ಲಿ ಪ್ರಯಾಣ ಬೆಳೆಸಿದರು. ಭಾರೀ ಸಂಖ್ಯೆಯಲ್ಲಿ ತಿಮರೋಡಿ ಬೆಂಬಲಿಗರು ನೆರೆದಿದ್ದರು.














