ಇತ್ತೀಚಿನ ಸುದ್ದಿ
ಆಕ್ಯೂ ಮೈಂಡ್ ಕಾರ್ಪೊರೇಟ್ ಕ್ವಿಜ್ ಫಲಿತಾಂಶ: ಕ್ಯೂ ಕಲೆಕ್ಟಿವ್ ನಾಲೆಜ್ ಸೊಲ್ಯೂಷನ್ಸ್ ಪ್ರಥಮ, ಎ ಜೆ ಹಾಸ್ಪಿಟಲ್ ಮತ್ತು ಕ್ಯೂ ಕಂಪೆನಿ ರನ್ನರ್ ಅಪ್
12/08/2025, 18:10

ಮಂಗಳೂರು(reporterkarnataka.com): ಮಂಗಳೂರಿನ ವಿವೆಂಟಾದಲ್ಲಿ ನಡೆದ ಆಕ್ಯೂ ಮೈಂಡ್ ಕಾರ್ಪೋರೇಟ್ ಕ್ವಿಜ್ ನಲ್ಲಿ ಕ್ಯೂ ಕಲೆಕ್ಟಿವ್ ನಾಲೆಜ್ ಸೊಲ್ಯೂಷನ್ಸ್ ಸಂಸ್ಥೆಯು ಪ್ರಥಮ ಸ್ಥಾನ ಗಳಿಸಿದೆ. ಎ ಜೆ ಹಾಸ್ಪಿಟಲ್ ಆಂಡ್ ರಿಸರ್ಚ್ ಸೆಂಟರ್ ಮತ್ತು ಕ್ಯೂ ಕಂಪೆನಿ ರನ್ನರ್ ಅಪ್ ಸ್ಥಾನ ಪಡೆದಿವೆ.
ಲೈಕೋರಾ ಕನ್ಸಲ್ಟಿಂಗ್ ಸರ್ವೀಸಸ್ ಪ್ರೈ. ಲಿ. ಏರ್ಪಡಿಸಿದ ಹಾಗೂ ಇ ಜಿ ಡಿ ಕೆ ಇಂಡಿಯಾ ಪ್ರೈ. ಲಿ. (ಇ ಜಿ ಇಂಡಿಯಾ) ಪ್ರಾಯೋಜಿಸಿದ ಈ ಕ್ವಿಜ್ ಸ್ಪರ್ಧೆಯಲ್ಲಿ ಕರ್ನಾಟಕ, ಕೇರಳ ಮತ್ತು ಗೋವಾ ರಾಜ್ಯಗಳ 74 ಕಾರ್ಪೊರೇಟ್ ತಂಡಗಳು ಮತ್ತು 98 ವಿದ್ಯಾರ್ಥಿ ತಂಡಗಳು ಸೇರಿದಂತೆ ಒಟ್ಟು 172 ತಂಡಗಳು ಭಾಗವಹಿಸಿದ್ದವು. ಒಟ್ಟು 1,75,000 ರೂಪಾಯಿ ನಗದು ಬಹುಮಾನವನ್ನು ವಿಜೇತ ಮೂರು ತಂಡಗಳಿಗೆ ಬಹುಮಾನವಾಗಿ ವಿತರಿಸಲಾಯಿತು.
ಕಲೆಕ್ಟಿವ್ ನಾಲೆಜ್ ಸೊಲ್ಯೂಷನ್ಸ್ 125 ಅಂಕ ಗಳಿಸಿ ಮೊದಲ ಬಹುಮಾನ 1 ಲಕ್ಷ ರೂಪಾಯಿ ನಗದು ಮತ್ತು ಬೇಕಲ ದಿ ಗೇಟ್ ವೇ ರೆಸಾರ್ಟ್ ನಲ್ಲಿ ತಂಗುವ ಅವಕಾಶದ ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಎ ಜೆ ಹಾಸ್ಪಿಟಲ್ ಆಂಡ್ ರಿಸರ್ಚ್ ಸೆಂಟರ್ ಪ್ರತಿನಿಧಿಸಿದ ಡಾ. ಹರಿಪ್ರಸಾದ್ ವಿ. ಮತ್ತು ಡಾ. ವಿಶ್ವಾಸ್ ಪೈ ಅವರು 100 ಅಂಕಗಳೊಂದಿಗೆ ಪ್ರಥಮ ರನ್ನರ್ ಅಪ್ ಗೆದ್ದು 50,000 ರೂ. ನಗದು ಬಹುಮಾನವನ್ನು ಪಡೆದುಕೊಂಡರು. ಕ್ಯೂ ಕಂಪೆನಿಯನ್ನು ಪ್ರತಿನಿಧಿಸಿದ ಝಮಾನ್ ಎಸ್. ಖಾನ್ ಮತ್ತು ಸಂಗೀತ ಎಸ್. ವರ್ಮ ಅವರು 2 ನೇ ರನ್ನರ್ ಅಪ್ ಗೆದ್ದು 25,000 ರೂಪಾಯಿ ನಗದು ಬಹುಮಾನವನ್ನು ಪಡೆದರು.
ಸ್ಪರ್ಧಿಗಳು ಉತ್ತರಿಸಲಾಗದ ಕೆಲವು ಕಠಿಣ ಪ್ರಶ್ನೆಗಳಿಗೆ ಉತ್ತರ ನೀಡಿದ ಪ್ರೇಕ್ಷಕರಿಗೆ ಗಿಫ್ಟ್ ವೋಚರ್ ನೀಡಲಾಯಿತು.
ಫೈನಲ್ ಗೆ ಅರ್ಹತೆ ಪಡೆದ ನೆಕ್ಸಸ್ ಕನ್ಸಲ್ಟೆನ್ಸಿ, ಇನ್ಫೋಸಿಸ್ ಮಂಗಳೂರು, ಗ್ಯಾನ್ ಸ್ಪೇಸ್, ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಸೈಂಟ್ ಅಲೋಷಿಯಸ್ ಕಾಲೇಜ್ ತಂಡಗಳು ವೈಯಕ್ತಿಕ ಕಾರಣಗಳಿಂದ ಕೊನೆಯ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದವು.
ಪ್ರಸಿದ್ಧ ಕ್ವಿಜ್ ಮಾಸ್ಟರ್ ಪಿಕ್ ಬ್ರೈನ್ ಖ್ಯಾತಿಯ ಗಿರಿ ಬಾಲ ಸುಬ್ರಹ್ಮಣ್ಯಂ ಮತ್ತು ಏಷ್ಯಾದ ಏಕೈಕ ಮಹಿಳಾ ಕ್ವಿಜ್ ಮಾಸ್ಟರ್ ರಶ್ಮಿ ಫುರ್ತಾದೊ ಅವರು ಕ್ವಿಜ್ ನಡೆಸಿಕೊಟ್ಟರು.
ಲೈಕೋರಾ ಸಂಸ್ಥೆಯ ನಿರ್ದೇಶಕ ಮೈಕೆಲ್ ಆಂದ್ರಾದೆ ಸ್ವಾಗತಿಸಿದರು. ಡೆನ್ಮಾರ್ಕ್ ಮೂಲದ ಇ ಜಿ ಎ/ ಎಸ್ ಕಂಪೆನಿ ಇ ಜಿ ಇಂಡಿಯಾ ಈ ಕಾರ್ಯಕ್ರಮವನ್ನು ಬೆಂಬಲಿಸಿತ್ತು. ನಾರ್ಥರ್ನ್ ಸ್ಕೈ ಪ್ರಾಪರ್ಟೀಸ್ ಸಂಸ್ಥೆ ಸಹ ಪ್ರಾಯೋಜಿಸಿತ್ತು.