ಇತ್ತೀಚಿನ ಸುದ್ದಿ
ಮಂಗಳೂರು; ಆ.8ರಿಂದ ಭಾರತೀಯ ಅರಿವಳಿಕೆ ತಜ್ಞರ ಸಂಘದ ಕರ್ನಾಟಕ ರಾಜ್ಯ ಸಮ್ಮೇಳನ – ‘ಇಸಕಾನ್ ಕರ್ನಾಟಕ 2005’
07/08/2025, 10:45

ಮಂಗಳೂರು(reporterkarnataka.com): ಭಾರತೀಯ ಅರಿವಳಿಕೆ ತಜ್ಞರ ಸಂಘ – ಇಂಡಿಯನ್ ಸೊಸೈಟಿ ಆಫ್ ಅನಸ್ತೇಶಿಯಾಲಾಜಿಸ್ಟ್ (ಐ ಎಸ್ ಎ ) ಇದರ ಮಂಗಳೂರು ನಗರ ಶಾಖೆಯು ಐ ಎಸ್ ಎ ಕರ್ನಾಟಕ ರಾಜ್ಯ ಶಾಖೆಯ ಸಹಯೋಗದಲ್ಲಿ 39ನೇ ವಾರ್ಷಿಕ ಸಮ್ಮೇಳನ- ಇಸಕಾನ್ ಕರ್ನಾಟಕ 2005 (ISACON ಕರ್ನಾಟಕ 2025) ವನ್ನು 2025 ಆಗಸ್ಟ್ 8, 9 ಮತ್ತು 10ರಂದು ಶುಕ್ರವಾರ ನಗರದ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಿದೆ.
ಸಮ್ಮೇಳನವು ಆಗಸ್ಟ್ 8 ರಂದು ಸಂಜೆ 6:00 ಗಂಟೆಗೆ ಪ್ರಾರಂಭವಾಗಲಿದ್ದು, ಉದ್ಘಾಟನಾ ಸಮಾರಂಭದಲ್ಲಿ
ಐ ಎಸ್ ಎ ರಾಷ್ಟ್ರೀಯ ಅಧ್ಯಕ್ಷ ಡಾ. ಜೆ. ಬಾಲವೆಂಕಟ ಸುಬ್ರಮಣಿಯನ್ ಮುಖ್ಯ ಅತಿಥಿಯಾಗಿ ಮತ್ತು ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ರೆವರೆಂಡ್ ಫಾದರ್ ಫಾವು ಸ್ಟಿನ್ ಎಲ್. ಲೋಬೊ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ISA ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷೆ ಡಾ. ಮಂಜುಳಾ ಬಿ.ಪಿ. ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ISA ಮಂಗಳೂರು ನಗರ ಶಾಖೆ ಆಯೋಜಿಸಿದ್ದು, ISA ಕರ್ನಾಟಕ ರಾಜ್ಯ ಶಾಖೆಯು ಪ್ರಾಯೋಜಿಸಿದೆ. ಈ ಪ್ರತಿಷ್ಠಿತ ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ ಅಧ್ಯಕ್ಷ ಡಾ. ಆನಂದ್ ಬಂಗೇರ ಮತ್ತು ಸಂಘಟನಾ ಕಾರ್ಯದರ್ಶಿ ಡಾ. ಶ್ರೀಪಾದ ಜಿ ಮೆಹಂದಳೆ ನೇತೃತ್ವದ ಸಂಘಟನಾ ಸಮಿತಿಯು ಅವಿರತವಾಗಿ ಶ್ರಮಿಸಿದೆ.
ಸಮ್ಮೇಳನವು ಅದ್ಧೂರಿಯಾಗಿ ಯಶಸ್ವಿಯಾಗುವ ಭರವಸೆ ಇದೆ. ಕರ್ನಾಟಕ ರಾಜ್ಯ ಮತ್ತು ದೇಶದ ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದಲೂ ತಜ್ಞರು ಮತ್ತು ವೃತ್ತಿಪರರು ಒಟ್ಟುಗೂಡಿ ವೈದ್ಯಕೀಯ ವಿಜ್ಞಾನ ಕ್ಷೇತ್ರದ ನೂತನ ಜ್ಞಾನ, ವಿಚಾರಗಳು ಮತ್ತು ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ಐಎಸ್ಎ ಮಂಗಳೂರು ನಗರ ಶಾಖೆ ಮತ್ತು ಐಎಸ್ಎ ಕರ್ನಾಟಕ ರಾಜ್ಯ ಶಾಖೆಯ ಎಲ್ಲಾ ಸದಸ್ಯರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಮ್ಮೇಳನದ ಅಂಗವಾಗಿ, ಆಗಸ್ಟ್ 7ರಂದು ಮಂಗಳೂರಿನ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಸಮ್ಮೇಳನ ಪೂರ್ವ ಕಾರ್ಯಾಗಾರಗಳು ನಡೆಯಲಿವೆ. ಆಗಸ್ಟ್ 8 ರಂದು ಸಿಎಂ ಇ (CME ) ಅಂದರೆ ನಿರಂತರ ವೈದ್ಯಕೀಯ ಕಾರ್ಯಾಗಾರ ಆಗಸ್ಟ್ 9 ಮತ್ತು 10 ರಂದು ಸಮ್ಮೇಳನ ನಡೆಯಲಿದೆ .
ಐಎಸ್ಎ ಮಂಗಳೂರು ಕಾರ್ಯದರ್ಶಿ ಡಾ. ಮೇಘನಾ ಮುಕುಂದ್ ಮತ್ತು ಐಎಸ್ಎ ಮಂಗಳೂರು ಅಧ್ಯಕ್ಷ ಡಾ. ಕಿಶನ್ ಶೆಟ್ಟಿ ಸಮ್ಮೇಳನಕ್ಕೆ ಶುಭ ಹಾರೈಸಿದ್ದಾರೆ.
ಸಮ್ಮೇಳನ: ಇಸಾಕಾನ್ ಕರ್ನಾಟಕ 2025
*ದಿನಾಂಕ:* ಶುಕ್ರವಾರ, ಆಗಸ್ಟ್ 8, 2025
*ಸಮಯ:* ಸಂಜೆ 6:00
*ಸ್ಥಳ:* ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್, ಮಂಗಳೂರು.