ಇತ್ತೀಚಿನ ಸುದ್ದಿ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಕೃಷ್ಣಾಪುರ ಶಾಖೆ: ಉಚಿತ ವೈದ್ಯಕೀಯ ತಪಾಸಣಾ ಶಿಬಿರ
03/08/2025, 22:46

ಮಂಗಳೂರು(reporterkarnataka.com): ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಕೃಷ್ಣಾಪುರ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ ಮತ್ತು ನೇತ್ರ ತಪಾಸಣಾ ಶಿಬಿರವು ಯುವಕ ಮಂಡಲ (ರಿ.), ಯುವತಿ ಮಂಡಲ (ರಿ.) ವನಿತಾ ಸೇವಾ ಸಮಾಜ (ರಿ.), ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.) ಕೃಷ್ಣಾಪುರ-ಕಾಟಿಪಳ್ಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಯುವಕ ಮಂಡಲ (ರಿ.) ಕೃಷ್ಣಾಪುರ
5ನೇ ವಿಭಾಗ ಜರುಗಿತು
ಕಾರ್ಯಕ್ರಮವನ್ನು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರಾದ ಶ್ರೀಮತಿ ಲಕ್ಷ್ಮೀ ಶೇಖರ್ ದೇವಾಡಿಗ ಅವರು ಉದ್ಘಾಟಿಸಿ ಮಾತನಾಡಿ, “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ವೈದ್ಯಕೀಯ, ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜನೆ ಮಾಡಿಕೊಂಡು ಬರುತ್ತಿದೆ. ವಿಶೇಷವಾಗಿ ಸಂಸ್ಥೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಅವಕಾಶವನ್ನು ನೀಡಿರುವುದು ಶ್ಲಾಘನೀಯ. ಹೆಣ್ಣುಮಕ್ಕಳು ಕುಟುಂಬ ಸಾಗಿಸಲು ಆರ್ಥಿಕ ಶಕ್ತಿಯಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ನಿಂತಿದೆ” ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ಕೃಷ್ಣಾಪುರ ಯುವಕ ಮಂಡಲ (ರಿ.) ಇಲ್ಲಿನ ಗೌರವಾಧ್ಯಕ್ಷರಾದ ಶ್ರೀ ಪ್ರಶಾಂತ್ ಮುಡಾಯಿ ಕೋಡಿ ರವರು ಮಾತನಾಡಿ “ಮನುಷ್ಯರಾಗಿ ಹುಟ್ಟಿದ ಮೇಲೆ ತಂದೆ-ತಾಯಿ, ಸಂಸಾರವನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಜೊತೆಗೆ ಸಮಾಜದ ಕಷ್ಟವನ್ನು ನೀಗಿಸಬೇಕು ಎಂಬುದು ನಮ್ಮ ಹಿರಿಯರ ಸಂದೇಶ. ಅದೇ ರೀತಿ ಇಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ತನ್ನ ಸಾಮಾಜಿಕ ಕಳಕಳಿಯಿಂದ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಿ ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದರು.
ಮಂಗಳ ಕಾಲೇಜ್, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಪೌಂಡೇಶನ್ ಇದರ ಬ್ಯುಸಿನೆಸ್ ಡೆವಲಪ್‌ಮೆಂಟ್ ಆಪೀಸರ್ ಶ್ರೀ ಜೆ.ಸಿ ನಾಯ್ಕ್ ರವರು ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಯೋಗದೊಂದಿಗೆ ಮಂಗಳ ಆಸ್ಪತ್ರೆಯು ಉಚಿತ ಶಿಬಿರಗಳನ್ನು ಆಯೋಜನೆ ಮಾಡಿದ್ದು, ಈ ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತçಚಿಕಿತ್ಸೆಯನ್ನು ಮಾಡಲಾಗುವುದು, ಬಿ.ಪಿ. ಮತ್ತು ಮದುಮೇಹ ತಪಾಸಣೆ, ಎಲುಬು, ಕೀಲು, ಕಿವಿ, ಮೂಗು, ಗಂಟಲು ತಪಾಸಣೆ, ಜನರಲ್ ವೈದ್ಯಕೀಯ ಸಮಾಲೋಚನೆ, ಹಾಗೂ ಇನ್ನಿತರ ವೈದ್ಯಕೀಯ ಸೇವೆಗಳು ಲಭ್ಯವಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ವಿನಂತಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ‘”ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಪ್ರತೀ ವರ್ಷ ಶಾಖೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತಾ ಬರುತ್ತಿದೆ. ಜನರು ಆರೋಗ್ಯವಂತರಾಗಿದ್ದರೆ ಮಾತ್ರ ಸ್ವಚ್ಚ ಸಮಾಜ ನಿರ್ಮಾಣ ಸಾಧ್ಯ, ಹೀಗಾಗಿ ಶಿಬಿರಗಳನ್ನು ಮಾತ್ರವಲ್ಲದೆ, ಉಚಿತ ಕನ್ನಡಕ್ಕ ವಿತರಣೆ, ಜೊತೆಗೆ ಅಗತ್ಯವಿರುವವರಿಗೆ ಆಸ್ಪತ್ರೆಗಳ ಸಹಯೋಗದೊಂದಿಗೆ ಉಚಿತ ಶಸ್ತçಚಿಕಿತ್ಸೆಯನ್ನು ಮಾಡಿಸಿದ್ದೇವೆ. ಇದು ಸಂಘದ ೮೭ನೇ ಉಚಿತ ವೈದ್ಯಕೀಯ ಶಿಬಿರವಾಗಿದೆ. ಈ ಶಿಬಿರವು ಜನರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಿಂದ ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ನಮ್ಮ ಸಹಕಾರಿ ಸಂಘವು ಮುಖ್ಯ ಪಾತ್ರ ವಹಿಸಿದೆ. ಸಂಘವು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಸಹಕಾರವನ್ನು ನೀಡಿದೆ. ಅದೇ ರೀತಿ ಇಂತಹ ಆರೋಗ್ಯ ಶಿಬಿರವನ್ನು ಏರ್ಪಡಿಸಲು ಸಹಕರಿಸುತ್ತಿರುವ ಮಂಗಳ ಕಾಲೇಜ್, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಪೌಂಡೇಶನ್ ಆಸ್ಪತ್ರೆಯ ಆಡಳಿತ ವರ್ಗ , ವೈದ್ಯರು ಹಾಗೂ ಸಿಬ್ಬಂದಿವರ್ಗದವರಿಗೂ ಕ್ರತಜ್ನತೆಯನ್ನು ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ರಮನಾಥ್ ಸನಿಲ್, ಶ್ರೀ ಗೋಪಾಲ್ ಎಮ್., ಮಂಗಳ ಕಾಲೇಜ್, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಪೌಂಡೇಶನ್ ನ ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ಶ್ರೀ ವಿಜೇಶ್ ಕುಮಾರ್, ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಶಿವಪ್ರಸಾದ್ ಬೊಳ್ಳಾಜೆ , ಪ್ರಧಾನ ಕಾರ್ಯದರ್ಶಿ ಶ್ರೀ ಭರತ್ ಕುಮಾರ್, ವನಿತಾ ಸೇವಾ ಸಮಾಜ (ರಿ.) ಇದರ ಅಧ್ಯಕ್ಷರಾದ ಶ್ರೀಮತಿ ರೇಣುಕಾ ತಿಲಕ್‌ರಾಜ್, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶ್ವೇತಾ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಶ್ರೀ ಅಶೋಕ್ ಕೃಷ್ಣಾಪುರ, ಮತ್ತಿತ್ತರರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 250ಕ್ಕೂ ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ, ಉಚಿತ ಓಷಧಿ ವಿತರಣೆ, ಉಚಿತ ಕನ್ನಡಕ ವಿತರಣೆ ಹಾಗೂ ನೇತ್ರ ತಪಾಸಣೆಯನ್ನು ನಡೆಸಲಾಯಿತು.
ಸಂಘದ ಶಾಖಾಧಿಕಾರಿ ಶ್ರೀಮತಿ ಸುಜಾತ ಸ್ವಾಗತಿಸಿ, ಶಾಖಾಧಿಕಾರಿ ಶ್ರೀಮತಿ ಭಾಗ್ಯಶ್ರೀ ಧನ್ಯವಾದವಿತ್ತರು. ಕಾರ್ಯಕ್ರಮದ ನಿರೂಪಣೆಯನ್ನು ಹಿರಿಯ ಶಾಖಾಧಿಕಾರಿಯಾದ ಶ್ರೀಮತಿ ಸ್ವಾತಿ ಮಾಡಿದರು.