ಇತ್ತೀಚಿನ ಸುದ್ದಿ
ಬೆಂಗಳೂರಿನಲ್ಲಿ ಈಗಾಗಲೇ ದೇಶದ ಮೊದಲ ಕ್ವಾಂಟಮ್ ಕಂಪ್ಯೂಟರ್: ಸಚಿವ ಎನ್ ಎಸ್ ಭೋಸರಾಜು ಪ್ರತಿಕ್ರಿಯೆ
26/07/2025, 17:35

ಬೆಂಗಳೂರು(reporterkarnataka.com): ದೇಶದ ಮೊದಲ ಕ್ವಾಂಟಮ್ ಕಂಪ್ಯೂಟರ್ ಈಗಾಗಲೇ ಬೆಂಗಳೂರಿನಲ್ಲಿದ್ದು, ಸೇವೆಯನ್ನು ನೀಡುತ್ತಿದೆ. ಕರ್ನಾಟಕ ರಾಜ್ಯ ಕ್ವಾಂಟಮ್ ನಾವಿನ್ಯತೆಯಲ್ಲಿ ದೇಶವನ್ನು ಮುನ್ನಡೆಸುತ್ತಿರುವುದಲ್ಲದೇ, ಭಾರತ ದೇಶದ ಕ್ವಾಂಟಮ್ ಅಭಿವೃದ್ದಿಯ ಕೇಂದ್ರಬಿಂದುವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು, ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, ಕರ್ನಾಟಕ ರಾಜ್ಯ ಅದರಲ್ಲೂ ಬೆಂಗಳೂರು ನಗರ ಭಾರತ ದೇಶದ ಕ್ವಾಂಟಮ್ ಕ್ಷೇತ್ರದ ಕೇಂದ್ರಬಿಂದುವಾಗಿ ಈಗಾಗಲೇ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಇದಕ್ಕೆ ಉತ್ತಮ ಉದಾಹರಣೆ ಕ್ಯೂಪೈಎಐ ಸಂಸ್ಥೆ ಬೆಂಗಳೂರು ನಗರದಲ್ಲಿ ದೇಶೀಯವಾಗಿ ನಿರ್ಮಿಸಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 25 ಕ್ಯೂಬಿಟ್ ಕ್ವಾಂಟಮ್ ಕಂಪ್ಯೂಟರ್ ಇಂಡಸ್ ಉತ್ತಮ ಉದಾಹರಣೆ.
ದೇಶದಲ್ಲೇ ಪ್ರಪ್ರಥಮವಾಗಿ ವಿಶ್ವದ ಪ್ರತಿಷ್ಠಿತ ವೈಜ್ಞಾನಿಕ ಸಂಶೋಧನಾ ಸಂಸ್ಥೆಯಾಗಿರುವ ಐಐಎಸ್‌ಸಿಯಲ್ಲಿ ಕ್ವಾಂಟಮ್ ರಿಸರ್ಚ್ ಪಾರ್ಕನ್ನು ಸ್ಥಾಪಿಸಲಾಗಿದೆ. ಅದರ ಎರಡನೇ ಹಂತದ ಅಭಿವೃದ್ದಿಗಾಗಿ 48 ಕೋಟಿ ರೂಪಾಯಿಗಳನ್ನು ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಕ್ವಾಂಟಮ್ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಜುಲೈ 31 ಹಾಗೂ ಆಗಸ್ಟ್ 1 ರಂದು ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಕ್ವಾಂಟಮ್ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಈ ಸಮ್ಮೇಳನದಲ್ಲಿ ಕ್ವಾಂಟಮ್ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರು ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯವನ್ನು ಕ್ವಾಂಟಮ್ ಜಾಗತಿಕ ಶಕ್ತಿ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ರೋಡ್ ಮ್ಯಾಪ್ ಸಿದ್ದಪಡಿಸಲಾಗುತ್ತಿದೆ. ಜುಲೈ 31 ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಇದನ್ನು ಅನಾವರಣಗೊಳಿಸಲಿದ್ದಾರೆ.
ಪ್ರಗತಿಯನ್ನು ಸಂಭ್ರಮಿಸುವಾಗ ನಾವು ಸತ್ಯ ಹಾಗೂ ಅಂಕಿಗಳಲ್ಲಿ ಪರಿಗಣಿಸುವ ಪರಿಪಾಠ ಬೆಳೆಸಿಕೊಳ್ಳುವ ಎಂದು ಹೇಳಿದ್ದಾರೆ.