ಇತ್ತೀಚಿನ ಸುದ್ದಿ
ಬಿರುಸುಗೊಂಡ ಮಳೆ: ತೀರ್ಥಹಳ್ಳಿ ತಾಲೂಕಿನ ಶಾಲಾ – ಕಾಲೇಜುಗಳಿಗೆ ಇಂದು ರಜೆ
26/07/2025, 08:10

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಪುಷ್ಯ ಮಳೆ ಮತ್ತಷ್ಟು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜುಲೈ 26ರ ಶನಿವಾರ ರಜೆ ಘೋಷಣೆ ಮಾಡಿ ತಹಶೀಲ್ದಾರ್ ರಂಜೀತ್ ಅವರು ಆದೇಶ ಹೊರಡಿಸಿದ್ದಾರೆ.
ಈ ಕುರಿತಂತೆ ಅವರು ಶುಕ್ರವಾರ ಸಂಜೆ ಆದೇಶ ಹೊರಡಿಸಿದ್ದಾರೆ. ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆ ಸುರಿಯುತ್ತಿರುವದರಿಂದ ಹಾಗೂ ಶೀತ ವಾತಾವರಣ ಹಿನ್ನೆಲೆಯಲ್ಲಿ, ಮುಂಜಾಗ್ರತಾ ದೃಷ್ಟಿಯಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ದಿನಾಂಕ 26.7.2025 ರ ಶನಿವಾರದಂದು ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಸದರಿ ರಜಾ ಅವಧಿಯ ಶೈಕ್ಷಣಿಕ ಪಠ್ಯಗಳನ್ನು ಮುಂದಿನ ರಜೆಯ ದಿನಗಳಲ್ಲಿ ಸರಿ ಹೊಂದಿಸಿಕೊಳ್ಳಲು ಸಂಬಂಧಿತ ಶಾಲಾ ಮುಖ್ಯಸ್ಥರುಗಳಿಗೆ ತಿಳಿಸಲಾಗಿದೆ ಎಂದು ತಹಶೀಲ್ದಾರ್ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.