10:30 PM Thursday17 - July 2025
ಬ್ರೇಕಿಂಗ್ ನ್ಯೂಸ್
ಬಿರುಸುಗೊಂಡ ಕಾಡಾನೆಗಳ ಅರಣ್ಯಕ್ಕೆ ಅಟ್ಟುವ ಕಾರ್ಯ: ನಾಡಿನಿಂದ ಕಾಡಿನತ್ತ ಆನೆಗಳ ಮತ್ತೊಂದು ಹಿಂಡು ಭಾರೀ ಮಳೆ: ಕೊಡಗು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ: ಶಾಲೆ- ಕಾಲೇಜುಗಳಿಗೆ ನಾಳೆಯೂ… ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ… ಭಾರೀ ಮಳೆ: ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜಿಗೆ… ಕರ್ಣಾಟಕ ಬ್ಯಾಂಕ್ ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ: ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ,… ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಅಭಿವೃದ್ಧಿಪಡಿಸಿದ ವಿಶೇಷ ಡಿಜಿಲಾಕರ್ ಲೋಕಾರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ… Kodagu | ಬೇಲೂರಿನಲ್ಲಿ ಉಪಟಳ ನೀಡುತ್ತಿದ್ದ ‘ಕರಡಿ’ ಆನೆಗೆ ದುಬಾರೆಯಲ್ಲಿ ‘ಬಬ್ರುವಾಹನ’ ಎಂದು… ಸಿಗಂಧೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ: ಪ್ರತಿಪಕ್ಷ ನಾಯಕ ಆರ್.ಅಶೋಕ್ Chikkamagaluru | ಮೂಡಿಗೆರೆ: ವಿದ್ಯುತ್ ತಂತಿ ಸ್ವರ್ಶಿಸಿ ಅನ್ನದಾತ ದಾರುಣ ಸಾವು ಕಾರ್ಕಳ ಥೀಮ್ ಪಾರ್ಕ್‌ ಪರಶುರಾಮ ಮೂರ್ತಿ ಹಿತ್ತಾಳೆಯದ್ದೇ ಹೊರತು ಕಂಚಿನಿಂದ ಮಾಡಿದ್ದು ಅಲ್ಲ:…

ಇತ್ತೀಚಿನ ಸುದ್ದಿ

ಆಸ್ತಿ ವಿವಾದ: ಭೀಕರವಾಗಿ ಕೊಲೆಗೀಡಾದ ಬೆಂಗಳೂರಿನ ರೌಡಿಶೀಟರ್ ಬಿಕ್ಲು ಶಿವ ಪ್ರಕರಣಕ್ಕೆ ಸ್ಫೋಟಕ ತಿರುವು

17/07/2025, 21:24

ಬೆಂಗಳೂರು(reporterkarnataka.com): ಆಸ್ತಿ ವಿವಾದ ಸಂಬಂಧಿಸಿದಂತೆ ಬರ್ಬರವಾಗಿ ಕೊಲೆಗೀಡಾದ ಬೆಂಗಳೂರಿನ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಪ್ರಕರಣ ಸ್ಫೋಟಕ ತಿರುವು ಪಡೆದಿದ್ದು, ನಾನು ಯಾರ ವಿರುದ್ಧವೂ ದೂರು ಕೊಟ್ಟಿಲ್ಲ ಎಂದು ಅವರ ತಾಯಿಯೇ ಹೇಳಿಕೆ ನೀಡಿದ್ದಾರೆ.
ಈ ಕೊಲೆ ಪ್ರಕರಣದಲ್ಲಿ ಕೆ.ಆರ್.ಪುರಂ ಶಾಸಕ ಹಾಗೂ ಮಾಜಿ ಸಚಿವ ಭೈರತಿ ಬಸವರಾಜ್ ಅವರನ್ನು 5ನೇ ಆರೋಪಿಯನ್ನಾಗಿ ಹೆಸರಿಸಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ಬಿಕ್ಲು ಶಿವು ತಾಯಿ ನೀಡಿದ ದೂರಿನ ಮೇರೆಗೆ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಹೇಳಲಾಗಿತ್ತು.
ಆದರೆ ಇದೀಗ ಅವರ ತಾಯಿ ವಿಜಯಲಕ್ಷ್ಮೀ ಈ ಬಗ್ಗೆ ಸ್ಪಷ್ಟನೆ ನೀಡಿ, ನಾನು ಭೈರತಿ ಬಸವರಾಜ್ ಸೇರಿದಂತೆ ಯಾರ ವಿರುದ್ಧವೂ ದೂರು ಕೊಟ್ಟಿಲ್ಲ. ಪೊಲೀಸರು ಅವರ ವಿರುದ್ಧ ಏಕೆ ಎಫ್‍ಐಆರ್ ಹಾಕಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಮಗ ಕೊಲೆಯಾದ ದಿನ ಫೋನಲ್ಲಿ ಯಾರೊಂದಿಗೋ ಮಾತಾಡುತ್ತಿದ್ದವನು. ಹಾಗೆಯೇ ಹೊರಗೆ ಹೋದ. ಸ್ವಲ್ಪ ಹೊತ್ತಿನ ಬಳಿಕ ಜನ ಕೂಗಾಡೋದು ಕೇಳಿಸಿತು. ತಾನು ಹೋಗಿ ನೋಡಿದಾಗ ತನ್ನ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಗೊತ್ತಾಯಿತು ಎಂದು ಹೇಳಿದ್ದಾರೆ.
ನನ್ನ ಮಗನಿಗೆ ಕೆಲವರಿಂದ ಪ್ರಾಣಬೆದರಿಕೆ ಇತ್ತೆಂಬುದು ನಿಜ. ಆದರೆ ಈ ಪ್ರಕರಣಕ್ಕೂ, ಭೈರತಿ ಬಸವರಾಜ್ ಅವರಿಗೂ ಯಾವುದೇ ಸಂಬಂಧ ಇಲ್ಲ. ಪೊಲೀಸರೇ ಅವರ ಹೆಸರನ್ನು ಬರೆದುಕೊಂಡಿದ್ದಾರೆ. ನಾನು ಯಾರ ಮೇಲೂ ದೂರು ಕೊಟ್ಟಿಲ್ಲ ಎಂದ ಮೇಲೆ ಹೇಗೆ ಎಫ್‍ಐಆರ್ ದಾಖಲಿಸಲಾಗಿದೆ? ಎಂದು ಕೇಳಿದರು.
ನನ್ನ ಮಗ ಕೊಲೆಯಾದ ನಂತರ ನಾವು ಚಿಂತಾಕ್ರಾಂತರಾಗಿದ್ದೇವೆ. ಪತ್ನಿ ಹಾಗೂ ಮಕ್ಕಳ ಮುಂದಿನ ಭವಿಷ್ಯವೇನು ಎಂದು ಚಿಂತೆ ಮಾಡುತ್ತಿದ್ದೇವೆ. ಅಂತ್ಯಸಂಸ್ಕಾರ ಹೇಗೆ ನಡೆಸಬೇಕು ಎಂಬುದು ನಮಗೆ ತಿಳಿದಿರಲಿಲ್ಲ. ನಮ್ಮ ಕುಟುಂಬಕ್ಕೆ ಆಸರೆಯಾದ ಮಗ ಹೋದನೆಂಬ ಚಿಂತನೆ ಇರುವಾಗ ಬೇರೆಯವರ ವಿರುದ್ಧ ದೂರು ಕೊಡುವ ಅಗತ್ಯವಿಲ್ಲ ಎಂದು ತಾಯಿ ಸ್ಪಷ್ಟಪಡಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭೈರತಿ ಬಸವರಾಜ್ ಮಾತನಾಡಿ, ರೌಡಿಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ರಾಜಕೀಯ ಷಡ್ಯಂತ್ರದಿಂದ ಈ ರೀತಿ ಏಕೆ ನಡೆದಿದೆ ಎಂಬುದು ತಮಗೂ ಆಶ್ಚರ್ಯವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನನಗೂ ಬಿಕ್ಲು ಶಿವ ಕೊಲೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ, ಕೊಲೆಯಾದವನ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ದೂರು ಕೊಟ್ಟ ತಕ್ಷಣ ಏಕಾಏಕಿ ನನ್ನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಯಾರೇ ದೂರು ಕೊಟ್ಟರೂ ಎಫ್ ಐಆರ್ ದಾಖಲಿಸಬಹುದಾ? ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದರು.
ಈ ರೀತಿ ಒಬ್ಬರ ತೇಜೋವಧೆ ಮಾಡುವಂಥದ್ದು ಬಹಳ ನೋವಾಗುತ್ತದೆ. ನನ್ನ ಕುರಿತು ಈ ರೀತಿ ಅಪಪ್ರಚಾರ ಮಾಡುತ್ತಿರುವುದು ತುಂಬಾ ಬೇಸರ ತರಿಸಿದೆ. ಕ್ಷೇತ್ರದ ಕೆಲಸ ಜನರ ಕೆಲಸ ಬಿಟ್ಟರೆ ಬೇರೆ ಯಾವುದೇ ವ್ಯವಹಾರ ನನಗೆ ಗೊತ್ತಿಲ್ಲ. ಈ ವಿಚಾರಕ್ಕೂ ನನಗೂ ಸಂಬಂಧ ಇಲ್ಲ. ಯಾವುದೇ ಮಾಹಿತಿ ನನ್ನನ್ನು ಕೇಳದೆ ನನ್ನ ಮೇಲೆ ಪೊಲೀಸರು ಎಫ್‍ಐಆರ್ ದಾಖಲೆ ಮಾಡುತ್ತಾರೆ. ಯಾರೋ ದೂರು ಕೊಟ್ಟ ತಕ್ಷಣ ನನ್ನ ಮೇಲೆ ಪೊಲೀಸರು ಕೇಸ್ ದಾಖಲಿಸುತ್ತಾರಾ? ನನ್ನ ವಿರುದ್ಧ ಯಾರು ಷಡ್ಯಂತ್ರ ಮಾಡಿದ್ದಾರೋ ಅವರ ವಿರುದ್ಧವಾಗಿ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಬಿಕ್ಲು ಶಿವು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್, ಜಗದೀಶ್, ವಿಮಲ್, ಕಿರಣ್, ಅನಿಲ್ ವಿರುದ್ಧ ನಗರದ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು