ಇತ್ತೀಚಿನ ಸುದ್ದಿ
ಶಕ್ತಿ ಯೋಜನೆ: 500 ಕೋಟಿ ಮಹಿಳೆಯರಿಗೆ ತಲುಪಿದ ಸಾಂಕೇತಿಕವಾಗಿ ಟಿಕೆಟ್ ವಿತರಿಸಿದ ಮುಖ್ಯಮಂತ್ರಿ
14/07/2025, 15:05

ಬೆಂಗಳೂರು(reporterkarnata.com): ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ 500 ಕೋಟಿ ಮಹಿಳಾ ಪ್ರಯಾಣಿಕರ ಪ್ರಯಾಣ ಸಂಭ್ರಮದ ಅಂಗವಾಗಿ ಸಾಂಕೇತಿಕವಾಗಿ ಟಿಕೆಟನ್ನು ಇಂದು ವಿತರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
2023ರ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಗಿತ್ತು. 2023ರ ಮೇ 20ರಂದು ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಜಾರಿಗೊಳಿಸಲು ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನದಂತೆ ಜೂನ್ 11 ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು. ಅಂದಿನಿಂದ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲಾಗಿರುವ ಬಗ್ಗೆ ಮುಖ್ಯಮಂತ್ರಿ ವಿವರಿಸಿದರು.
*ಸಿಗಂದೂರು ಕಾರ್ಯಕ್ರಮ-ಶಿಷ್ಠಾಚಾರ ಪಾಲನೆಯಾಗಿಲ್ಲ:*
ಸಿಗಂದೂರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಸಾಗರ ತಾಲ್ಲೂಕಿನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಮುಂದೂಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಪತ್ರವನ್ನೂ ಬರೆಯಲಾಗಿತ್ತು. ಕೇಂದ್ರ ಸಚಿವರೂ ಕಾರ್ಯಕ್ರಮ ಮುಂದೂಡಲು ಸಮ್ಮತಿಸಿದ್ದರೂ, ಕೂಡ ಇಲ್ಲಿನ ಸ್ಥಳೀಯ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು, ನನ್ನ ಗಮನಕ್ಕೆ ತಾರದೇ, ಕಾರ್ಯಕ್ರಮವನ್ನು ಇಂದೇ ಆಯೋಜಿಸಿದ್ದಾರೆ. ನನಗೆ ಪೂರ್ವನಿಯೋಜಿತ ಕಾರ್ಯಕ್ರಮಗಳಂತೆ ವಿಜಯಪುರ ಜಿಲ್ಲೆಗೆ ತೆರಳಬೇಕಾಗಿರುವುದರಿಂದ, ಸಾಗರ ತಾಲ್ಲೂಕಿನ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದರು.
ಬಿಜೆಪಿಯ ಈ ನಡೆಯನ್ನು ಪ್ರತಿಭಟಿಸಲು ಸಂಬಂಧಪಟ್ಟ ಸಾಗರ ತಾಲ್ಲೂಕಿನ ಇಂದಿನ ಕಾರ್ಯಕ್ರಮವನ್ನು ಸರ್ಕಾರದ ಯಾವುದೇ ಸಚಿವರು, ಸ್ಥಳೀಯ ಶಾಸಕರು ಭಾಗವಹಿಸುತ್ತಿಲ್ಲ. ನಮ್ಮ ನಡುವೆ ತಿಕ್ಕಾಟವನ್ನು ಪ್ರಾರಂಭಿಸಿರುವುದು ಕೇಂದ್ರ ಸರ್ಕಾರವೇ. ಇಲ್ಲಿ ಶಿಷ್ಠಾಚಾರದ ಪಾಲನೆಯಾಗಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯ ಸರ್ಕಾರದ ಪಾಲೂ ಇರುತ್ತದೆ. ಅಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಲ್ಲ ಶಿಷ್ಠಾಚಾರಗಳನ್ನೂ ತಪ್ಪದೇ ಪಾಲಿಸುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗಾಗಲಿ, ಸಂಬಂಧಪಟ್ಟ ಇಲಾಖಾ ಸಚಿವರನ್ನಾಗಲೀ, ಸ್ಥಳೀಯ ಶಾಸಕರನ್ನಾಗಲೀ ಆಮಂತ್ರಣ ನೀಡಲಾಗಿಲ್ಲ ಎಂದರು.