12:38 AM Saturday12 - July 2025
ಬ್ರೇಕಿಂಗ್ ನ್ಯೂಸ್
ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆಯಲ್ಲಿ ಲೂಟಿ ಮಾಡುವ ಉದ್ದೇಶ: ಪ್ರತಿಪಕ್ಷ ನಾಯಕ… ಬೆಂಗಳೂರು ಕಾಲ್ತುಳಿತ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ನಾ ವರದಿ… ಚಿಕ್ಕಮಗಳೂರು- ತಿರುಪತಿ ರೈಲಿಗೆ ಚಾಲನೆ: ಕಾಫಿನಾಡಿಗರ ದಶಕಗಳ ಕನಸು ಕೊನೆಗೂ ನನಸು Kodagu | ವಿರಾಜಪೇಟೆ ಕ್ಷೇತ್ರದ 1600 ಆದಿವಾಸಿಗಳಿಗೆ ಜಮೀನು ಹಕ್ಕುಪತ್ರ ವಿತರಣೆಗೆ ಅಸ್ತು:… ಹೆಚ್ಚುತ್ತಿರುವ ಕಾಡಾನೆಗಳ ದಾಂಧಲೆ: ವಿರಾಜಪೇಟೆ ತಿತಿಮತಿ ವ್ಯಾಪ್ತಿಯಲ್ಲಿ ಬಿರುಸುಗೊಂಡ ಕಾಡಿಗಟ್ಟುವ ಕಾರ್ಯಾಚರಣೆ Bangaluru | ನಾಗರಬಾವಿಯ ವಿಟಿಯು ಹಬ್ ಆ್ಯಂಡ್ ಸ್ಪೋಕ್ ಕೇಂದ್ರ ಉದ್ಘಾಟನೆ: ಕೇಂದ್ರ… SCSP-TSP ಯೋಜನೆ | ಅಧಿಕಾರಿಗಳು ಮೈಮರೆತರೆ ಪ್ರಕರಣ ದಾಖಲು ಗ್ಯಾರಂಟಿ: ಸಚಿವ ಡಾ.… New Delhi | ಮಿಸ್ ಯೂನಿವರ್ಸ್ ಕರ್ನಾಟಕ ವಿಜೇತೆ ಚಿಕ್ಕಮಗಳೂರಿನ ವಂಶಿ ಮುಖ್ಯಮಂತ್ರಿ… Kodagu | ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಡಿಕ್ಕಿ ಹೊಡೆದು ವ್ಯಕ್ತಿ ಸಾವು ಮಂಗಳೂರಿನ ಪೆಟ್ರೋಲಿಯಂ ಕಂಪನಿಗಳ ಸಂಬಂಧಿತ ದುರಂತ ನಿರ್ವಹಣೆಗೆ ಅಗ್ನಿಶಾಮಕ ಇಲಾಖೆಯ ಸಶಕ್ತಗೊಳಿಸಲಾಗಿದೆ: ಗೃಹ…

ಇತ್ತೀಚಿನ ಸುದ್ದಿ

SCSP-TSP ಯೋಜನೆ | ಅಧಿಕಾರಿಗಳು ಮೈಮರೆತರೆ ಪ್ರಕರಣ ದಾಖಲು ಗ್ಯಾರಂಟಿ: ಸಚಿವ ಡಾ. ಮಹದೇವಪ್ಪ ಎಚ್ಚರಿಕೆ

10/07/2025, 16:09

ಬೆಂಗಳೂರು(reporterkarnataka.com): ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಬಹಳಷ್ಟು ದೂರದೃಷ್ಟಿ ಇಟ್ಟುಕೊಂಡು ಜಾರಿಗೊಳಿಸಲಾದ SCSP-TSP ಯೋಜನೆಯನ್ನು ಜಾರಿಗೊಳಿಸುವ ದಿಸೆಯಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡದೇ ಕಾಯ್ದೆಯ ಆಶಯಗಳನ್ನು ಉಲ್ಲಂಘಿಸಿದರೆ ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್. ಸಿ. ಮಹದೇವಪ್ಪ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದ ಸಭಾಂಗಣ ಸಂಖ್ಯೆ 334ರಲ್ಲಿ ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ 2025-26 ನೇ ಸಾಲಿನ ಕ್ರೀಯಾ ಯೋಜನೆಯ ಸಭೆಯಲ್ಲಿ ಸಚಿವರು ಮಾತನಾಡಿದರು.
ಸರ್ಕಾರ ಬಂದು ಎರಡು ವರ್ಷ ಕಳೆದರೂ ಸಹ ಪರಿಶಿಷ್ಟರ ಬದುಕಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಸರ್ಕಾರವೇ ರೂಪಿಸಿರುವ SCSP-TSP ಕಾಯ್ದೆಯ ಆಶಯಗಳಿಗೆ ಸಂಬಂಧಿಸಿದಂತೆ ಕೆಲವು ಇಲಾಖೆಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದೇ ಇರುವುದು ನನ್ನಲ್ಲಿ ಬೇಸರ ಮೂಡಿಸಿದೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ಇದ್ದ ಪಕ್ಷದಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲೂ ನಾನು ಹಿಂಜರಿಯುವುದಿಲ್ಲ ಎಂದು ಮಾನ್ಯ ಸಚಿವರು ತಿಳಿಸಿದರು.
ಸುಮಾರು 8 ಗಂಟೆಗಳಿಗೂ ಹೆಚ್ಚಿನ ಕಾಲ ಸರ್ಕಾರದ 34 ಇಲಾಖೆಗಳೊಂದಿಗೆ ಸುದೀರ್ಘ ಅವಧಿಯ ಸಭೆ ನಡೆಸಿದ ಸಚಿವರು, ಕೃಷಿ, ನೀರಾವರಿ, ವಸತಿ, ಕೈಗಾರಿಕೆ, ಸಹಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಂಧನ, ಸಾರಿಗೆ, ರೇಷ್ಮೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಮಾಜ ಕಲ್ಯಾಣ, ಉನ್ನತ ಶಿಕ್ಷಣ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿಗದಿಗೊಳಿಸಿರುವ ಅನುದಾನದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿ ಎಷ್ಟರ ಮಟ್ಟಿಗೆ ಸಾಧ್ಯವಾಗಿದೆ ಎಂದು ತಿಳಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಬಹು ಮುಖ್ಯವಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಪರಿಶಿಷ್ಟ ಸಮುದಾಯಗಳ ಅದರಲ್ಲೂ ಪರಿಶಿಷ್ಟ ಮಹಿಳೆಯರ ಬದುಕಲ್ಲಿ ಆಗಿರುವ ಗುಣಾತ್ಮಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಗಿರುವ ಬದಲಾವಣೆಯ ಕುರಿತಾಗಿ ನಿಖರವಾದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಬಹುಮುಖ್ಯವಾಗಿ ಈ ನಾಡಿನಲ್ಲಿ ವಾಸಿಸುವ ಮಾಜಿ ದೇವದಾಸಿ ಮಹಿಳೆಯರ ಕುಟುಂಬದ ಶಿಕ್ಷಣ, ಆರೋಗ್ಯ ಮತ್ತು ಔದ್ಯೋಗಿಕ ಅವಕಾಶಗಳಿಗೆ ಸಂಬಂಧಿಸಿದಂತೆ ಅವರಿಗೆ ಕ್ರಮವಾಗಿ 54 ಲಕ್ಷ,16 ಲಕ್ಷ ರೂಪಾಯಿಗಳನ್ನು ನಿಗದಿ ಮಾಡುವ ಕುರಿತಂತೆ ಚರ್ಚೆ ನಡೆಸಲಾಯಿತು.
ಪರಿಶಿಷ್ಟ ಸಮುದಾಯದ ಮಕ್ಕಳು ಓದುತ್ತಿರುವಂತಹ ವಸತಿ ಶಾಲೆಗಳಲ್ಲಿ ಆಗುವ ವಿದ್ಯುತ್ ವೆಚ್ಚವನ್ನು ಇಂಧನ ಇಲಾಖೆಯಿಂದ ಭರಿಸುವ ಬಗ್ಗೆ ಮಾನ್ಯ ಸಚಿವರು ಸಭೆಯಲ್ಲಿ ಪ್ರಸ್ತಾಪಿಸಿ ಚರ್ಚೆ ನಡೆಸಿದರು.
ಬಹು ಮುಖ್ಯವಾಗಿ GKVK ಕೃಷಿ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ, ದೇಶದ ಉದ್ಧಾರಕ್ಕಾಗಿ ಕೃಷಿ, ನೀರಾವರಿಯ ಕುರಿತು ಬಾಬಾ ಸಾಹೇಬರು ಹೊಂದಿದ್ದ ನಿಲುವುಗಳನ್ನು ಹೆಚ್ಚು ಹೆಚ್ಚು ಪ್ರಚುರ ಪಡಿಸಬೇಕೆಂದು ತಿಳಿಸಿದರು.
ಇನ್ನು ಪರಿಶಿಷ್ಟ ಪಂಗಡದ ಇಲಾಖೆಯ ಅಡಿಯಲ್ಲಿ ಹಾಡಿಗಳಲ್ಲಿ ವಾಸ ಮಾಡುವ ಜನರಿಗೆ ಭೂ ಮಂಜೂರಾತಿ ಮಾಡಲಾಗಿದ್ದು ಅವರಿಗೆ ಮನೆ ಸೌಲಭ್ಯವನ್ನು ಕಲ್ಪಿಸುವ ಕುರಿತಾಗಿ ಚಿಂತನೆ ನಡೆಸಲಾಯಿತು.
ಇನ್ನು ಕನ್ನಡ ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಅಂಬೇಡ್ಕರ್ ಅವರ ವಿಚಾರಗಳ ಕುರಿತಾಗಿ ಹೆಚ್ಚಿನ ಅರಿವು ಮೂಡಿಸುವ ಕೆಲಸ ಮಾಡಬೇಕು ಮತ್ತು ಅಧಿಕಾರಿಗಳೂ ಸಹ ದೇಶ ನಿರ್ಮಾಣದಲ್ಲಿ ಬಾಬಾ ಸಾಹೇಬರು ವಿವಿಧ ಕ್ಷೇತ್ರಗಳಲ್ಲಿ ಹೊಂದಿದ್ದ ಜ್ಞಾನದ ಬಗ್ಗೆ ಅಧ್ಯಯನ ಮಾಡಬೇಕೆಂದು ಸೂಚಿಸಿದರು.
ಪರಿಶಿಷ್ಟ ಸಮುದಾಯದ ಏಳಿಗೆಗಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದರೂ ಸಹ ಪರಿಶಿಷ್ಟ ಸಮುದಾಯದ ಬದುಕಲ್ಲಿ ಅಂತಹ ಪ್ರತಿಫಲನ ಕಾಣಿಸದೇ ಇರುವುದು ನನ್ನಲ್ಲಿ ಬೇಸರ ಮೂಡಿಸಿದ್ದು ಈ ಬಗ್ಗೆ ಸರ್ಕಾರವು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.
ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಪರಿಶಿಷ್ಟರಿಗೆ ನೀಡುವ ಸೌಲಭ್ಯದ ಕುರಿತ ನಿಖರ ದತ್ತಾಂಶವನ್ನು ಸಂಗ್ರಹಿಸಿ, ಆ ದತ್ತಾಂಶದ ಪ್ರತಿಯ ಮೇಲೆ ತಮ್ಮ ಸಹಿ ಹಾಕಿ, ಅದನ್ನು ಧೃಢೀಕರಿಸಬೇಕು ಎಂದು ತಿಳಿಸಿದರು.
ಇನ್ನು ವಸತಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಪರಿಶಿಷ್ಟರಿಗೆ ಮನೆಗಳನ್ನು ನಿರ್ಮಿಸಲು ತೊಡಗಿದ್ದು ಅವುಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಪರಿಶಿಷ್ಟರ ವಸತಿ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ನೀಡಬೇಕೆಂದು ಮಾನ್ಯ ಸಚಿವರು ಸೂಚಿಸಿದರು.
ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದ 34 ಇಲಾಖೆಗಳು ಕೊಟ್ಟಿರುವ ಹಣವನ್ನು ಖರ್ಚು ಮಾಡುವ ನಿಟ್ಟಿನಲ್ಲಿ ಪರಿಣಾಮಕಾರಿ ಯೋಜನೆಗಳನ್ನು ಜಾರಿ ಮಾಡಿದರೆ ಅದನ್ನು ಸ್ವಾಗತಿಸುತ್ತೇನೆ ಎಂದು ಮಾನ್ಯ ಸಚಿವರು ನುಡಿದರು.
ಇನ್ನು ದೀರ್ಘಕಾಲದ ಖಾಯಿಲೆಯಿಂದ ಬಳಲುತ್ತಿರುವ ಪರಿಶಿಷ್ಟ ಸಮುದಾಯದ ರೋಗಿಗಳಿಗೆ ವೈದ್ಯರ ಪತ್ರವನ್ನು ಆಧರಿಸಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡಬೇಕೆಂದು ಸಚಿವರು ಸೂಚಿಸಿದರು.
ಇನ್ನು ತೋಟಗಾರಿಕೆ, ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆಯ ಅಡಿಯಲ್ಲಿ ಪರಿಶಿಷ್ಟ ಸಮುದಾಯದ ಜನರ ಬದುಕಿಗೆ ಅನುಕೂಲ ಆಗುವಂತಹ ಉತ್ಪಾದನಾ ಅವಕಾಶಗಳು ಮತ್ತು ಔದ್ಯೋಗಿಕ ಅವಕಾಶಗಳನ್ನು ಸೃಷ್ಟಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕೆಂದು ಮಾನ್ಯ ಸಚಿವರು ತಿಳಿಸಿದರು.
ಕಡೆಯಲ್ಲಿ ವಿವಿಧ ಇಲಾಖೆಗಳ ಅಡಿಯಲ್ಲಿ SCSP-TSP ಕಾಯ್ದೆಗೆ ಆಶಯಕ್ಕೆ ವಿರುದ್ಧವಾಗಿ ಹಣ ಖರ್ಚಾಗಿರುವ ಬಗ್ಗೆ ಚರ್ಚೆ ನಡೆಯಿತು ಮತ್ತು ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ಮಾನ್ಯ ಸಚಿವರು ಸೂಚನೆ ನೀಡಿದರು.
ಈ ಮಹತ್ವದ ಸಭೆಯಲ್ಲಿ ಮಾನ್ಯ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕೀಹೊಳಿ, ಸಮಾಜ ಕಲ್ಯಾಣ ಇಲಾಖೆಯ ಸಲಹೆಗಾರರಾದ ವೆಂಕಟಯ್ಯ ಅವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು