ಇತ್ತೀಚಿನ ಸುದ್ದಿ
Kodagu | ಪರಪ್ಪನ ಅಗ್ರಹಾರ ಜೈಲಿನೊಳಗೇ ವಿಧ್ವಂಸಕ ಕೃತ್ಯಕ್ಕೆ ಸಂಚು: ಮಾಸ್ಟರ್ ಮೈಂಡ್ ತಡಿಯಂಡವಿಡೆ ನಸೀರ್?
10/07/2025, 10:16

ಕೋವರ್ ಕೊಲ್ಲಿ ಇಂದ್ರೇಶ್ ಬೆಂಗಳೂರು
info.reporterkarnataka@gmail.com
ಜೈಲಿನಿಂದಲೇ ಕರ್ನಾಟಕ ಸೇರಿ ದೇಶದ ವಿವಿಧೆಡೆ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಕೋಲಾರದ 5 ಕಡೆ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ, ಸಿಎಆರ್ ಪೊಲೀಸ್ ಅಧಿಕಾರಿ ಸೇರಿ ಮೂವರು ಶಂಕಿತ ಉಗ್ರರನ್ನ ಬಂಧಿಸಿದೆ. ಈ ಉಗ್ರ ಚಟುವಟಿಕೆಗಳಿಗೆ ಮಾಸ್ಟರ್ ಮೈಂಡ್ ಕೊಡಗಿನ ಹೊಸತೋಟದಲ್ಲಿ ಶುಂಠಿ ಕೃಷಿ ನೆಪದಲ್ಲಿ ಅಡಗಿಕೊಂಡಿದ್ದ ಉಗ್ರ ತಡಿಯಂಡವಿಡೆ ನಸೀರ್ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
2008ರಲ್ಲಿ ಶುಂಠಿ ಕೃಷಿ ಮಾಡುವ ನೆಪದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬಾಂಬ್ ಬ್ಲಾಸ್ಟ್ ನಡೆಸಿದ ಸೂತ್ರದಾರನಾಗಿರುವ ನಸೀರ್ ಪಾಕಿಸ್ಥಾನ ಮೂಲದ ಲಷ್ಕರ್ ಏ ತೊಯ್ಬಾ ಉಗ್ರ ಸಂಘಟನೆಯ ದಕ್ಷಿಣ ಭಾರತದ ಕಮಾಂಡರ್ ಕೂಡ ಆಗಿದ್ದು 2013ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಶಂಕಿತ ಉಗ್ರರನ್ನು ಬುಧವಾರ ಕೋರ್ಟ್‌ಗೆ ಹಾಜರುಪಡಿಸಿರುವ ಎನ್‌ಐಎ ಅಧಿಕಾರಿಗಳ ತಂಡ ಮೂವರೂ ಆರೋಪಿಗಳಾದ ಜೈಲಿನ ಮನೋವೈದ್ಯ ಡಾ ನಾಗರಾಜ್ , ಸಹಾಯಕ ಸಬ್ ಇನ್ಸ್‌ಪೆಕ್ಟರ್ ಚಾಂದ್ ಪಾಶಾ ಹಾಗೂ ತಲೆಮರೆಸಿಕೊಂಡಿರುವ ಉಗ್ರ ಮಹಮದ್ ಜುನೈದ್ ನ ತಾಯಿ ಅನೀಸ್ ಫಾತಿಮಾ ರನ್ನು ಜುಲೈ 14 ರ ವರೆಗೆ ಕಸ್ಟಡಿಗೆ ಪಡೆದುಕೊಂಡಿದೆ. ಅಲ್ಲದೆ ಉಗ್ರರಿಗೆ ಮೊಬೈಲ್ ಸಿಮ್ ನೀಡಿದ್ದ ಆರೋಪದ ಮೇಲೆ ಕೋಲಾರದ ಏರ್‌ಟೆಲ್ ಮಾಜಿ ಉದ್ಯೋಗಿ ಸತೀಶ್ ಗೌಡ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಿದೆ. ಈತನನ್ನು 2023 ರಲ್ಲೂ ಬಂಧಿಸಿದ್ದು ಜಾಮೀನು ಪಡೆದು ಹೊರಗಿದ್ದಾನೆ. ಈ ಮಧ್ಯೆ ಉಗ್ರ ಟಿ.ನಾಸೀರ್ ಕುರಿತು ಹಲವು ಸ್ಫೋಟಕಕ್ಕೆ ವಿಚಾರಗಳನ್ನು ಬಯಲಿಗೆಳೆದಿದೆ.
ವೈದ್ಯನಿಂದಲೇ ಮೊಬೈಲ್ ಮಾರಾಟ ಬಿಗಿ ಭದ್ರತೆ ಇರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭದ್ರತಾ ವ್ಯವಸ್ಥೆಯೇ ಪ್ರಶ್ನಾರ್ಹವಾಗಿರುವಂತಹ ಮಾಹಿತಿ ಬಯಲಾಗಿದೆ. ಈ ಜೈಲಿನಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದ ಡಾ. ನಾಗರಾಜ್ ಎಂಬಾತ ನೂರಾರು ಖೈದಿಗಳಿಗೆ ಹಾಗೂ ಉಗ್ರರಿಗೆ ಅನಧಿಕೃತವಾಗಿ ಮೊಬೈಲ್‌ಗಳನ್ನು ಪೂರೈಕೆ ಮಾಡುತ್ತಿದ್ದ ಪ್ರಕರಣವನ್ನು ಎನ್‌ಐಎ ತನಿಖೆ ಬಹಿರಂಗಪಡಿಸಿದೆ. ಜೈಲಿನೊಳಗೆ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜ್, ತನ್ನ ಸಹಾಯಕಿ ಪವಿತ್ರಳ ಸಹಾಯದಿಂದ ಜೈಲಿಗೆ ಸ್ಕೂಟರ್ ಮುಖಾಂತರ ಮೊಬೈಲ್‌ಗಳನ್ನು ಸಾಗಿಸಿ ಎಂಟು ಹತ್ತು ಸಾವಿರ ರೂಪಾಯಿ ಮೌಲ್ಯದ ಫೋನ್‌ಗಳನ್ನು 45- ₹50 ಸಾವಿರಕ್ಕೆ ಖೈದಿಗಳಿಗೆ ಮಾರಾಟ ಮಾಡುತ್ತಿದ್ದನು. ಈ ಮೊಬೈಲ್‌ಗಳು ನೇರವಾಗಿ ಶಂಕಿತ ಉಗ್ರಗಾಮಿಗಳು, ಡ್ರಗ್ ಪೆಡ್ಲರ್‌ಗಳು ಮತ್ತು ರೌಡಿಶೀಟರ್‌ಗಳ ಕೈಗೆ ತಲುಪುತ್ತಿದ್ದವು ಎಂಬುದು ತನಿಖೆಯ ಮಾಹಿತಿಯಿಂದ ತಿಳಿದುಬಂದಿದೆ.ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿರುವ 100ಕ್ಕೂ ಹೆಚ್ಚು ಖೈದಿಗಳಿಗೆ ಈ ರೀತಿಯಾಗಿ ಮೊಬೈಲ್ ಪೂರೈಕೆ ಮಾಡಿದ ಡಾ. ನಾಗರಾಜ್ ವಿರುದ್ಧ ಎನ್‌ಐಎ ಉನ್ನತ ಮಟ್ಟದ ತನಿಖೆ ನಡೆಸುತ್ತಿದೆ. ವೈದ್ಯಕೀಯ ಸೇವೆಯ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಜೈಲಿನೊಳಗೆ ಅಪರಾಧ ಜಾಲವನ್ನು ಬೆಳೆಸಿದ ಈ ವೈದ್ಯನ ವಿರುದ್ಧ ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಲು ಹಿರಿಯ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ.
ಉಗ್ರ ಸಲ್ಮಾನ್ ಬಂಧನದಿಂದ ಬಯಲಾದ ಉಗ್ರ ಜಾಲ
ಈ ಹಿಂದೆ ಸುಲ್ತಾನ್ ಪಾಳ್ಯ ಹಾಗೂ ಭದ್ರಪ್ಪ ಲೇಔಟ್ ಪ್ರದೇಶದಲ್ಲಿ ಶಂಕಿತ ಉಗ್ರರ ಮನೆ ಮೇಲೆ ಸಿಸಿಬಿ ದಾಳಿ ನಡೆದಿತ್ತು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಉಗ್ರ ಸಲ್ಮಾನ್ ನನ್ನು ಎನ್‌ಐಎ ಮೂರು ತಿಂಗಳ ಹಿಂದೆ ಬಂಧಿಸಿತು. ತನಿಖೆಯಲ್ಲಿ ಬೆಚ್ಚಿ ಬೀಳಿಸುವ ಮಾಹಿತಿ ಹೊರಬಿದ್ದಿದ್ದು, ಸಲ್ಮಾನ್‌ನ ಪಲಾಯನಕ್ಕೆ ಎಎಸ್‌ಐ ಚಾಂದ್ ಪಾಷಾ ನೆರವಾಗಿದ್ದನು. ನಗರ ಸಶಸ್ತ್ರ ಮೀಸಲು ಪಡೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿರುವ ಚಾಂದ್ ಪಾಶಾ ಭದ್ರೆತೆಗಾಗಿ ನಿಯೋಜಿಸಲಾಗಿತ್ತು. ದೇಶದ ವಿವಿಧ ಸ್ಥಳಗಳಲ್ಲಿ ದುಷ್ಕ್ರತ್ಯ ನಡೆಸಲು ಜೈಲಿನಿಂದಲೇ ಉಗ್ರ ಟಿ. ನಾಸೀರ್ ಮತ್ತು ಗ್ಯಾಂಗ್ ಸಂಚು ರೂಪಿಸುತ್ತಿದ್ದರೆಂಬ ಮಾಹಿತಿಗಳು ಕೂಡ ಬಹಿರಂಗವಾಗಿವೆ. ಮತಾಂಧನಾಗಿರುವ ನಾಸೀರ್ ಭಯೋತ್ಪಾದನೆಯ ಚಟುವಟಿಕೆಗಳ ಬಗ್ಗೆ ಯುವಕರ ಮೈಂಡ್ ವಾಶ್ ಮಾಡೋದ್ರಲ್ಲಿ ಉಗ್ರ ನಾಸೀರ್ ಎತ್ತಿದ ಕೈ ಆಗಿದ್ದಾನೆ. ಹಲವು ಜನರನ್ನ ಉಗ್ರ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾನೆ. ಜೈಲಿನಲ್ಲಿದ್ದುಕೊಂಡೇ ಉಗ್ರ ಚಟುವಟಿಕೆಗಳ ಬಗ್ಗೆ ಪ್ಲಾನ್ ಮಾಡುತ್ತಿದ್ದನು. ಜೈಲಿನಿಂದಲೇ ಯುವಕರ ತಂಡ ತಯಾರು ಮಾಡಿದ್ದ ನಾಸೀರ್. ದಕ್ಷಿಣ ಭಾರತದಲ್ಲಿ ನಡೆದ ಹಲವು ಬ್ಲಾಸ್ಟ್ ಗಳ ಮಾಸ್ಟರ್ ಮೈಂಡ್ ಆಗಿದ್ದಾನೆ. 2008ರ ಸರಣಿ ಬಾಂಬ್ ಸ್ಪೋಟ, ಮಂಗಳೂರು ಕುಕ್ಕರ್ ಬಾಂಬ್, ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ, ರಾಮೇಶ್ವರಂ ಕೆಫೆ ಬ್ಲಾಸ್ಟ್ ಸೇರಿ ಹಲವು ಪ್ರಕರಣಗಳಲ್ಲಿ ನಾಸೀರ್ ಕೈವಾಡವಿದೆ ಎಂದು ಎನ್‌ಐಎ ಮೂಲಗಳು ತಿಳಿಸಿದೆ. ಈ ಹಿಂದೆ ಜೈಲಿನಲ್ಲಿದ್ದುಕೊಂಡೇ ಇಸ್ಲಾಂ ಧರ್ಮಕ್ಕೆ ಕೈದಿಗಳನ್ನು ಮತಾಂತರಿಸಿದ್ದ ಆರೋಪವೂ ಇವನ ಮೇಲಿದೆ. ಕೊಲೆ ಪ್ರಕರಣಗಳಲ್ಲಿ ಜೈಲಿನ ಒಳಗಿದ್ದ ಯುವಕರ ಮೈಂಡ್ ವಾಶ್ ಮಾಡಿದ್ದ ಇವನು ಜೈಲಿನಲ್ಲಿ ಜುನೈದ್, ಮೊಹಮ್ಮದ್ ಹರ್ಷದ್ ಖಾನ್, ಸುಹೈಲ್, ಫೈಜಲ್, ಜಾಹಿದ್ ತಬ್ರೇಜ್, ಮುದಾಸಿರ್ ಎಂಬ 6 ಜನ ಯುವಕರ ತಂಡ ರೆಡಿ ಮಾಡಿದ್ದನು. ಆದರೆ, ಇವರು ಜೈಲಿನಿಂದ ಹೊರಗೆ ಬಂದ ನಂತರ 2023ರಲ್ಲಿ ಆರ್ ಟಿ ನಗರ, ಹೆಬ್ಬಾಳದಲ್ಲಿ ಜೀವಂತ ಗ್ರೆನೈಡ್ ಗಳು, ಪಿಸ್ತೂಲ್‌ಗಳು, ಸ್ಫೋಟಕ ವಸ್ತುಗಳ ಸಮೇತ ಸಿಕ್ಕಿಬಿದ್ದಿದ್ದರು. ಈ ಕೇಸಿನಲ್ಲಿ ಸಿಸಿಬಿ ಪೊಲೀಸರು 5 ಜನರನ್ನು ಬಂಧಿಸಿದ್ದರು. ಜುನೈದ್ ಕೊಲ್ಲಿ ರಾಷ್ಟ್ರಕ್ಕೆ ಪರಾರಿ ಆಗಿದ್ದಾನೆ.
ಬಿಗಿ ಭದ್ರತೆಯ ಜೈಲಿನಿಂದಲೇ ಸಂಚು
2023 ರಲ್ಲಿ ಸಿಸಿಬಿ ತನಿಖೆಯಿಂದ ಎನ್‌ಐಎ ಗೆ ಪ್ರಕರಣವನ್ನು ಒಪ್ಪಿಸಲಾಗಿತ್ತು . ಕೇಸಿನ ಪ್ರಮುಖ ಆರೋಪಿ ಮಹಮದ್ ಜುನೈದ್‌ಗಾಗಿ ಇನ್ನೂ ಹುಡುಕಾಟ ನಡೆಸಲಾಗುತ್ತಿದೆ. ಇವನು ದುಬೈನಲ್ಲಿ ಅಡಗಿಕೊಂಡಿದ್ದು ಇವನ ತಾಯಿ ಈಗ ಬಂಧಿತಳಾಗಿರುವ ಅನೀಸ್ ಫಾತಿಮಾ ಕೂಡ ಮಗನ ಕೃತ್ಯಕ್ಕೆ ಬೆಂಬಲಿಸಿದ್ದಳು ಎಂಬ ಆರೋಪ ಇದೆ. ಜೈಲಿನಲ್ಲಿದ್ದವರ ಮೂಲಕ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿರುವವರನ್ನ ಬಳಸಿ ವಿಧ್ವಂಸಕ ಕೃತ್ಯ ನಡೆಸುವುದು ನಸೀರ್ ಪ್ಲಾನ್ ಆಗಿತ್ತು. . ಈ ಬಗ್ಗೆ ಮಾಹಿತಿ ಪಡೆದ ಎನ್‌ಐಎ ತಂಡವು ದಾಳಿ ನಡೆಸಿದೆ. ಸದ್ಯ ಮೂವರನ್ನ ಬಂಧಿಸಿರುವ ಎನ್ಐಎ, ಬಂಧಿತರ ಬಳಿ ಒಂದಷ್ಟು ಹಣ, ಇವರು ಪರಸ್ಪರ ಸಂಪರ್ಕಕ್ಕೆ ಬಳಸುವ ವಾಕಿಟಾಕಿ ಸೇರಿ ಹಲವು ವಸ್ತುಗಳು ವಶಕ್ಕೆ ಪಡೆದುಕೊಂಡಿದೆ.
ರಾಜ್ಯದ ಅತ್ಯಂತ ದೊಡ್ಡ ಜೈಲು ಆಗಿರುವ ಪರಪ್ಪನ ಅಗ್ರಹಾರದಲ್ಲಿ 4200 ಕೈದಿಗಳನ್ನು ಇರಿಸಲು ಸ್ಥಳಾವಕಾಶ ಇದ್ದು ಪ್ರಸ್ತುತ 5000 ದ ವರೆಗೆ ಕೈದಿಗಳನ್ನು ಇರಿಸಲಾಗಿದೆ. ಇದರಲ್ಲಿ 3500 ರಷ್ಟು ವಿಚಾರಣಾಧೀನ ಕೈದಿಗಳು , 1000 ದಷ್ಟು ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಹಾಗೂ 250 ಮಹಿಳಾ ಕೈದಿಗಳೂ ಇದ್ದಾರೆ. ಕೈದಿಗಳು ಜೈಲಿನೊಳಗಿದ್ದೇ ತಮ್ಮ ಕೃತ್ಯ ಮುಂದುವರಿಸುತ್ತಾರೆ ಎಂದರೆ ಜೈಲುಗಳ ಅವಶ್ಯಕತೆ ಆದರೂ ಏಕೆ ಎಂಬ ಪ್ರಶ್ನೆ ಮೂಡುತ್ತದೆ.