ಇತ್ತೀಚಿನ ಸುದ್ದಿ
ಕೊಡಗಿನಲ್ಲಿ ಬಂದೂಕು ಸೌಲಭ್ಯ ದುರುಪಯೋಗ: ಲೈಸೆನ್ಸ್ಗಾಗಿ ನಕಲಿ ದಾಖಲೆ ಸೃಷ್ಟಿ; ಒಂದೇ ಜಾಗದ ಹೆಸರಿನಲ್ಲಿ ಇಬ್ಬರಿಗೆ ಪರವಾನಗಿ!
10/07/2025, 10:02

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗು ಜಿಲ್ಲೆಯಲ್ಲಿ ಜಮ್ಮ ಜಾಗದ ಹೆಸರಿನಲ್ಲಿ ಬಂದೂಕು ಪರವಾನಗಿ ಪಡೆಯುವ ಅಕ್ರಮ ಪ್ರಕರಣ ಬೆಳಕಿಗೆ ಬಂದಿದೆ. ಜಮ್ಮ ಜಾಗದ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಂದೂಕು ಪರವಾನಗಿ ಪಡೆದಿರುವುದು ಪತ್ತೆಯಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಇಂತಹ ಹೆಚ್ಚಿನ ಪ್ರಕರಣಗಳು ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಬೇರೊಬ್ಬರ ಹೆಸರಿನಲ್ಲಿರುವ ಜಮ್ಮ ಜಾಗ ತಮ್ಮದೆಂದು ನಕಲಿ ದಾಖಲೆಗಳನ್ನು ನೀಡಿ ಬಂದೂಕು ಪರವಾನಗಿ (Gun License) ಪಡೆದಿರುವುದು ಪೊಲೀಸರ ತಪಾಸಣೆ ವೇಳೆ ಬಯಲಾಗಿದೆ. ಇತ್ತೀಚೆಗೆ ಭಾಗಮಂಡಲ ಪೊಲೀಸರು ಬಂದೂಕು ಪರವಾನಗಿ ನವೀಕರಣ ಪರಿಶೀಲಿಸುವ ಸಂದರ್ಭದಲ್ಲಿ ಈ ಅಕ್ರಮ ಬೆಳಕಿಗೆ ಬಂದಿದೆ.
ಭಾಗಮಂಡಲದ ಬಾಲಕೃಷ್ಣ ಎಂಬುವರು ಜಮ್ಮ ಜಾಗದ ಆಧಾರದ ಮೇಲೆ ಬಂದೂಕು ಪರವಾನಗಿ ಹೊಂದಿದ್ದಾರೆ. ಆದರೆ, ಇವರಿಗೆ ಅರಿವಿಲ್ಲದೆ ಮತ್ತೊಬ್ಬ ಬಾಲಕೃಷ್ಣ ಎಂಬುವರು ಆ ಜಮ್ಮ ಜಾಗ ತಮ್ಮದೆಂದು ನಕಲಿ ದಾಖಲೆಗಳನ್ನು ನೀಡಿ ಬಂದೂಕು ಖರೀದಿಸಿ, ಪರವಾನಗಿ ಪಡೆದಿದ್ದಾರೆ. ಒಂದೇ ಜಮ್ಮ ಜಾಗದ ಹೆಸರಲ್ಲಿ ಇಬ್ಬರು ಬಂದೂಕು ಪರವಾನಿಗಿ ಪಡೆದಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಎಷ್ಟು ಜನ ಇದೇ ರೀತಿ ಅಕ್ರಮವಾಗಿ ಬಂದೂಕು ಪರವಾನಿಗೆ ಪಡೆದಿದ್ದಾರೆ ಎಂಬುವುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಇನ್ನು, ಜಿಲ್ಲಾಡಳಿತ ಪರಿಶಿಲಿಸದೆ ಹೇಗೆ ಬಂದೂಕು ಪರವಾನಿಗಿ ನೀಡಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.