ಇತ್ತೀಚಿನ ಸುದ್ದಿ
ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಯವರ ಚಾತುರ್ಮಾಸ್ಯ ನಾಳೆಯಿಂದ: ಧಾನ್ಯಲಕ್ಷಿ ಪೂಜೆ, ಮೃತ್ತಿಕೆ ಸಂಗ್ರಹ ಸಂಪನ್ನ
09/07/2025, 21:17

ಗೋಕರ್ಣ(reporterkarnataka.com): ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ 32ನೇ ಚಾತುರ್ಮಾಸ್ಯ ಅಶೋಕೆಯ ಸೇವಾಸೌಧ- ಗುರುದೃಷ್ಟಿ ಆವರಣದಲ್ಲಿ ಜುಲೈ 10 ಗುರುವಾರ ಆರಂಭವಾಗಲಿದ್ದು, ಪೂರ್ವಭಾವಿಯಾಗಿ ಬುಧವಾರ ಮೃತ್ತಿಕಾ ಸಂಗ್ರಹ, ಧಾನ್ಯಲಕ್ಷ್ಮಿ ಪೂಜೆ ಶ್ರೀಗಳ ಸ್ವಾಗತ ಕಾರ್ಯಕ್ರಮ ನೆರವೇರಿತು.
ವಿಶ್ವಾವಸು ಸಂವತ್ಸರದ ಚಾತುರ್ಮಾಸ್ಯವನ್ನು ಶ್ರೀಗಳು ಸ್ವಭಾಷಾ ಚಾತುರ್ಮಾಸ್ಯವನ್ನಾಗಿ ಆಚರಿಸಲಾಗುತ್ತಿದ್ದು, ಶ್ರೀಗಳ ವ್ರತಾರಂಭದ ಮುನ್ನಾ ದಿನ ಪುರಾತನ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಚಾತುರ್ಮಾಸ್ಯ ನಿರ್ವಿಘ್ನವಾಗಿ ಮತ್ತು ಪರಿಪೂರ್ಣವಾಗಿ ನಡೆಯುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ನಂತರ ವಿದ್ಯಾನಂದ ಆವರಣದಲ್ಲಿ ಧಾನ್ಯಲಕ್ಷ್ಮಿ ಪೂಜೆ ನೆರವೇರಿತು. ಚಾತುರ್ಮಾಸ್ಯಕ್ಕಾಗಿ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಕಳುಹಿಸಿಕೊಟ್ಟಿರುವ ಸುವಸ್ತುಗಳನ್ನು ಪೂಜಿಸಿ ಚಾತುರ್ಮಾಸ್ಯದ ಎಲ್ಲ ದಿನ ನಡೆಯುವ ಅನ್ನ ಸಂತರ್ಪಣೆಗೆ ಚಾಲನೆ ನೀಡಲಾಯಿತು. ಚಾತುರ್ಮಾಸ್ಯ ಅವಧಿಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಶಿಷ್ಯಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಧಾನ್ಯಲಕ್ಷ್ಮಿ ಪೂಜೆಯ ಬಳಿಕ ಶ್ರೀಗಳು ಮೂಲಮಠ ಪರಿಸರಕ್ಕೆ ತೆರಳಿ ಸಾಂಪ್ರದಾಯಿಕ ಮೃತ್ತಿಕೆ ಸಂಗ್ರಹಿಸಿದರು. ಮೃತ್ತಿಕೆಯೊಂದಿಗೆ ಆಗಮಿಸಿದ ಪರಮಪೂಜ್ಯರನ್ನು ಅಶೋಕೆಯ ಯಾನಶಾಲೆ ಆವರಣಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು.
ದೇಶದಲ್ಲಿ ಸ್ವಭಾಷಾಭಿಮಾನ ಹಾಗೂ ರಾಷ್ಟ್ರಪ್ರಜ್ಞೆ ಉದ್ದೀಪಿಸಲು ಮತ್ತು ದೇಶದ ಸಂಸ್ಕøತಿ-ಪರಂಪರೆಯನ್ನು ಉಳಿಸುವ ಉದ್ದೇಶದಲ್ಲಿ ಸ್ವಭಾಷೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಚಾತುರ್ಮಾಸ್ಯವನ್ನು ಆಚರಿಸುತ್ತಿರುವುದು ಇದೇ ಮೊದಲು.
ಡಿ.ಡಿ.ಶರ್ಮಾ, ಸತ್ಯನಾರಾಯಣ ಶರ್ಮಾ, ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ನಿಯೋಜಿತ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪ್ಪು, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಪ್ರಧಾನ ಸಂಯೋಜಕ ಮಂಜುನಾಥ ಸುವರ್ಣಗದ್ದೆ, ಸೇವಾಬಿಂದುಗಳಾದ ಶ್ರೀಕಾಂತ್ ಪಂಡಿತ್, ಜಿ.ಕೆ.ಹೆಗಡೆ ಗೋಳಗೋಡು, ಅರವಿಂದ ಧರ್ಬೆ, ಸುಬ್ರಾಯ ಭಟ್, ಆರ್.ಜಿ.ಹೆಗಡೆ, ಗಣೇಶ್ ಭಟ್, ಸ್ವಾತಿ ಭಾಗ್ವತ್, ಜಿ.ವಿ.ಹೆಗಡೆ, ಲಲಿತಾ ಹೆಬ್ಬಾರ್, ರಾಜೀವ್ ಹೆಗಡೆ ಶ್ರೀಕಾರ್ಯದರ್ಶಿ ಮಧು ಜಿ.ಕೆ, ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ ಮತ್ತಿತರರು ಉಪಸ್ಥಿತರಿದ್ದರು.