ಇತ್ತೀಚಿನ ಸುದ್ದಿ
Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28 ಮಂದಿಗೆ ಗಾಯ
02/07/2025, 21:56

ಸುರತ್ಕಲ್(reporterkarnataka.com): ಮಂಗಳೂರು ನಗರದ ಸುರತ್ಕಲ್ ಸಮೀಪದ ಮಧ್ಯ ವಾಲ್ಮೀಕಿ ವಸತಿ ಶಾಲೆ ಬಳಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹೈಸ್ಕೂಲ್, ಪಿಯುಸಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರು ಸೇರಿ 28 ಮಂದಿ ಗಾಯಗೊಂಡಿದ್ದಾರೆ.
ಬೆಳಿಗ್ಗೆ 9 ಗಂಟೆ ಸುಮಾರಿಗೆ ಎರಡು ಖಾಸಗಿ ಬಸ್ಸುಗಳು ಪರಸ್ಪರ ಡಿಕ್ಕಿ ಹೊಡೆದವು. ಘಟನೆಯ ದೃಶ್ಯ ಒಂದು ಬಸ್ಸಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಂಗಳೂರಿನ ಸ್ಟೇಟ್ ಬ್ಯಾಂಕ್ ಕಡೆಯಿಂದ ಚೇಳಾಯರಿಗೆ ಹೊರಟಿದ್ದ ‘ನಂದನ್’ ಬಸ್ಸು ಬಂದು ಎದುರಿನಿಂದ ಬಂದ ಇತರ ಬಸ್ಸಿಗೆ ಢಿಕ್ಕಿಯಾಗಿ ಅಪಘಾತ ಉಂಟಾಗಿದೆ. ಬಸ್ಸುಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಅದೃಷ್ಟವಶಾತ್ ಇಬ್ಬರೂ ಬಸ್ಸುಗಳ ಚಾಲಕರು ಗಂಭೀರ ಗಾಯಗಳಿಲ್ಲದೇ ಪಾರಾಗಿದ್ದಾರೆ. ಸಣ್ಣ ಪುಟ್ಟ ಗಾಯಗಳೊಂದಿಗೆ ಶಾಜಿ ಮತ್ತು ಮುಹಮ್ಮದ್ ಮುರ್ಶಿದ್ ಎಂಬ ಚಾಲಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಇಲೆಕ್ಟ್’ ಬಸ್ಸು ಚೇಳಾರಿನಿಂದ ಬಜಪೆ ಕಡೆಗೆ ತೆರಳುತ್ತಿತ್ತು. ಎರಡೂ ಬಸ್ಸುಗಳಲ್ಲೂ ಸುಮಾರು 30ರಷ್ಟು ಪ್ರಯಾಣಿಕರು ಇದ್ದರು.
ಅಪಘಾತಕ್ಕೆ ಒಂದು ಬಸ್ಸಿನ ಸ್ಟೀರಿಂಗ್ ಜಾಮ್ ಆಗಿದ್ದು ಕಾರಣವಾಗಿರಬಹುದು ಎಂದು ಚಾಲಕರು ತಿಳಿಸಿದ್ದಾರೆ. ಘಟನೆಯಲ್ಲಿ 11 ವಿದ್ಯಾರ್ಥಿಗಳು, 5 ಶಿಕ್ಷಕಿಯರು ಸೇರಿ ಒಟ್ಟು 28 ಮಂದಿ ಗಾಯಗೊಂಡಿದ್ದಾರೆ. 2-3 ಮಂದಿಗೆ ಮುಖದ ಭಾಗದಲ್ಲಿ ಗಂಭೀರ ಗಾಯವಾಗಿದೆ. ಒಂದು ಮಗುವಿಗೆ ತೀವ್ರವಾಗಿ ಗಾಯವಾಗಿದೆ ಎಂದು ಸುರತ್ಕಲ್ ಸಂಚಾರಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಘಟನೆಯ ಪರಿಣಾಮ ಸ್ಥಳದಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಅಸ್ತವ್ಯಸ್ತ ಸ್ಥಿತಿ ನಿರ್ಮಾಣವಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.