4:52 PM Wednesday30 - July 2025
ಬ್ರೇಕಿಂಗ್ ನ್ಯೂಸ್
USA | ಡ್ರೈವರ್ ಇಲ್ಲದ ಕಾರಿನಲ್ಲಿ ಪ್ರಯಾಣಿಸಿದ ಸ್ಪೀಕರ್ ಯು.ಟಿ. ಖಾದರ್!: ಇದು… Bangaluru | ಪತ್ರಿಕಾ ಸಂಪಾದಕರ ಕೈಕಟ್ಟಿ ಹಾಕಲಾಗುತ್ತಿದೆ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ… Mandya | ಒಂದೇ ದಿನ 1146 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ… ಬಾಳೆಬೈಲು – ಕುರುವಳ್ಳಿ ಬೈಪಾಸ್ ರಸ್ತೆಯಲ್ಲಿ ಕುಸಿಯುತ್ತಿರುವ ಗುಡ್ಡ: ಬ್ಯಾರಿಕೆಡ್ ಹಾಕಿರುವ ಪೊಲೀಸರು Shivamogga | ತೀರ್ಥಹಳ್ಳಿ: ಬೆಜ್ಜವಳ್ಳಿ ಸಮೀಪ ಸ್ಕೂಟಿಗೆ ಹಿಂಭಾಗದಿಂದ ಬಸ್ ಡಿಕ್ಕಿ; ಸವಾರ… ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಒಂಟಿ ಸಲಗ ಪ್ರತ್ಯಕ್ಷ: ಪ್ರಯಾಣಿಕರಲ್ಲಿ ಭೀತಿ ಗದಗ -ಬಂಕಾಪುರ ರಾಷ್ಟ್ರೀಯ ಹೆದ್ದಾರಿಗೆ ಗಡ್ಕರಿ ಭರವಸೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Koppa | ಬೃಹತ್ ಮರ ರಸ್ತೆಗೆ ಪತನ: ಜಯಪುರ- ಬಸರೀಕಟ್ಟೆ,- ಕಳಸ- ಹೊರನಾಡು… ಕೊಡಗಿನಲ್ಲಿ ಭಾರೀ ಮಳೆ: ತುಂಬಿ ತುಳುಕುತ್ತಿರುವ ಕಾವೇರಿ, ಕನ್ನಿಕೆ, ಸುಜ್ಜ್ಯತಿ ನದಿಗಳು; ತ್ರಿವೇಣಿ… ಕೊಡಗು: ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಬೈರೇ ಗೌಡ ಭೇಟಿ; ಪರಿಹಾರ…

ಇತ್ತೀಚಿನ ಸುದ್ದಿ

ಐಟಿ, ಇಡಿಯನ್ನು ಬಿಜೆಪಿ ತನ್ನ ಮೋರ್ಚಾ ಮಾಡಿಕೊಂಡಿದೆ: ಅರಣ್ಯ ಸಚಿವ ಈಶ್ವರ ಖಂಡ್ರೆ

11/06/2025, 21:19

ಬೆಂಗಳೂರು(reporterkarnataka.com): ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯ ಅಂಕಿ ಅಂಶಗಳ ಪರಾಮರ್ಶೆಗಾಗಿ ಮರು ಸಮೀಕ್ಷೆ ನಡೆಸುವ ನಿರ್ಧಾರವನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ವಾಗತಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಅವರು, ಈ ವರದಿ 10 ವರ್ಷಗಳಷ್ಟು ಹಳೆಯದಾಗಿತ್ತು, ನಂತರ ಸಾಕಷ್ಟು ಬದಲಾವಣೆ ಆಗಿದೆ ಎಂಬುದು ಜನರ ಅಭಿಪ್ರಾಯವಾಗಿತ್ತು. ಇದಕ್ಕೆ ಅನುಗುಣವಾಗಿ ನ್ಯೂನತೆಗಳನ್ನು ಸರಿಪಡಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಹೀಗಾಗಿ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಒದಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈಗ ಪ್ರತಿಪಕ್ಷಗಳು ಸರ್ಕಾರದ ನಿರ್ಧಾರ ಟೀಕಿಸುತ್ತಿವೆ. ಬಿಜೆಪಿ 5 ವರ್ಷ ಅಧಿಕಾರದಲ್ಲಿತ್ತು. ಆಗ ಏಕೆ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ ಎಂದು ಈಶ್ವರ ಖಂಡ್ರೆ ಪ್ರಶ್ನಿಸಿದರು.

*ಸ್ವಾಯತ್ತ ಸಂಸ್ಥೆಗಳ ದುರುಪಯೋಗ:*
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಇ.ಡಿ., ಐ.ಟಿ., ಸಿಬಿಐನಂತಹ ಸ್ವಾಯತ್ತ ಸಂಸ್ಥೆಗಳನ್ನು ರಾಜಕೀಯ ದುರುದ್ದೇಶಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಜಗಜ್ಜಾಹೀರಾಗಿದೆ. ನ್ಯಾಯಾಲಯಗಳು ಕೂಡ ಹಲವು ಬಾರಿ ಎಚ್ಚರಿಕೆ ನೀಡಿವೆ ಎಂದರು.
ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿಯು ತನ್ನ ಒಂದು ಮೋರ್ಚಾದಂತೆ ವರ್ತಿಸುವಂತೆ ಮಾಡಿದೆ. ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.

*ಗೋಕುಲ್ ಅಮಾನತು ಸಮರ್ಥನೆ:*
ಎಚ್ಎಂಟಿ ವಶದಲ್ಲಿರುವ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಅಂದಿನ ಅರಣ್ಯ ಸಚಿವರ ಮತ್ತು ಸಚಿವ ಸಂಪುಟದ ಅನುಮತಿ ಇಲ್ಲದೆ ಅರ್ಜಿ ಸಲ್ಲಿಸಿರುವ ಐ.ಎಫ್.ಎಸ್. ಅಧಿಕಾರಿ ಆರ್. ಗೋಕುಲ್ ಅಮಾನತನ್ನು ಈಶ್ವರ ಖಂಡ್ರೆ ಸಮರ್ಥಿಸಿಕೊಂಡರು.
15 ಸಾವಿರ ಕೋಟಿ ರೂ. ಬೆಲೆ ಬಾಳುವ ಅರಣ್ಯ ಭೂಮಿಯಲ್ಲಿ ಇಂದಿಗೂ 280 ಎಕರೆಯಷ್ಟು ಅರಣ್ಯವಿದೆ. ಆದರೆ ಇದು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಸುಪ್ರೀಂಕೋರ್ಟ್ ಗೆ ಸುಳ್ಳು ಪ್ರಮಾಣಪತ್ರ ನೀಡಿದ ಅಧಿಕಾರಿಗಳ ನಡೆ, ಕಾನೂನು ಬಾಹಿರವಾಗಿದ್ದು, ಇದು ಸರ್ಕಾರಕ್ಕೆ, 7 ಕೋಟಿ ಜನರಿಗೆ ಮಾಡಿದ ಅಪಚಾರ ಮತ್ತು ದ್ರೋಹ. ಹೀಗಾಗಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿದೆ. ಇದಕ್ಕೆ ಯಾರಾದರೂ ವಿರೋಧ ವ್ಯಕ್ತಪಡಿಸಿದರೆ, ಅದು ರಾಜ್ಯಕ್ಕೆ ಮಾಡುವ ದ್ರೋಹ ಎಂದರು.

*ಬನ್ನೇರುಘಟ್ಟದಲ್ಲಿ ಪ್ರಥಮ ಇ.ವಿ. ಸಫಾರಿ ಬಸ್:*
ವಾಹನಗಳಿಂದ ಹೆಚ್ಚುತ್ತಿರುವ ಇಂಗಾಲದ ಹೊರಹೊಮ್ಮುವಿಕೆ ತಡೆಯಲು ಇಲಾಖೆ ಪ್ರಯತ್ನಶೀಲವಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಬನ್ನೇರುಘಟ್ಟ ಸಫಾರಿಯಲ್ಲಿ ಹೊಗೆ ರಹಿತ ಇ.ವಿ. – ವಿದ್ಯುತ್ ಚಾಲಿತ ವಾಹನ ಬಳಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ನಾಳೆ ಈ ವಾಹನಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗುವುದು ಎಂದು ತಿಳಿಸಿದ ಅವರು, ನಾಳೆ ಸಚಿವ ಸಂಪುಟದ ಸಭೆ ಇದ್ದು, ಕೇರಳ ರಾಜ್ಯದ ಅರಣ್ಯ ಸಚಿವರು ಭೇಟಿಯಾಗಲು ಬರುತ್ತಿರುವ ಹಿನ್ನೆಲೆಯಲ್ಲಿ ಈ ವಾರಾಂತ್ಯದೊಳಗೆ ಇ.ವಿ. ಸಫಾರಿ ವಾಹನಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು