2:21 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

Mangaluru | ದ.ಕ. ಜಿಲ್ಲೆ: ಸಂಭಾವ್ಯ ಮಳೆ ಅನಾಹುತ ಪ್ರದೇಶಗಳನ್ನು ಗುರುತಿಸಲು ಜಿಲ್ಲಾಧಿಕಾರಿ ಸೂಚನೆ

11/06/2025, 12:19

ಮಂಗಳೂರು (reporterkarnataka.com): ದ.ಕ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪಗಳಿಂದ ಅಪಾಯದ ಸಾಧ್ಯತೆ ಇರುವ ಪ್ರದೇಶಗಳನ್ನು ಮುಂದಿನ ಎರಡು ದಿನಗಳಲ್ಲಿ ಗುರುತಿಸಿ ವರದಿ ನೀಡಲು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚಿಸಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭೂಕುಸಿತ, ನೀರು ಮುಳುಗಡೆ, ಸೇರಿದಂತೆ ತೀವ್ರ ಮಳೆಯಿಂದಾಗಿ ದುರಂತ ಘಟನೆಗಳು ನಡೆಯುವ ಸಾಧ್ಯತೆ ಇರುವ ಪ್ರದೇಶಗಳನ್ನು ಮೊದಲೇ ಗುರುತಿಸಬೇಕು. ರೆಡ್ ಅಲರ್ಟ್ ಅವಧಿಯಲ್ಲಿ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಅಪಾಯಗಳ ಬಗ್ಗೆ ಅಲ್ಲಿನ ನಿವಾಸಿಗಳಿಗೆ ನೋಟಿಸ್ ನೀಡಿ ತಿಳಿಸಬೇಕು. ಸಂಭಾವ್ಯ ಭೂಕುಸಿತ ಅನಾಹುತ ಸ್ಥಳಗಳನ್ನು ಗುರುತಿಸದೆ ಅನಾಹುತ ಸಂಭವಿಸಿದರೆ ಆಯಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ಸ್ಥಳೀಯ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಯೋಜನೆ ರಚಿಸಬೇಕು. ಸಂಬಂಧಪಟ್ಟ ತಹಶೀಲ್ದಾರ್ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಪರಿಶೀಲಿಸಬೇಕು ಎಂದು ಅವರು ತಿಳಿಸಿದರು.
ಪ್ರಾಕೃತಿಕ ದುರಂತದಲ್ಲಿ ನಡೆಯುವ ಜೀವಹಾನಿ ತಪ್ಪಿಸುವುದೇ ಮೊದಲ ಆದ್ಯತೆಯಾಗಿದೆ. ಪ್ರಮುಖವಾಗಿ ಜನವಸತಿ ಪ್ರದೇಶ ಮತ್ತು ಮನೆಗಳಲ್ಲಿ ವಾಸಿಸುವ ಸಾರ್ವಜನಿಕರ ರಕ್ಷಣೆ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಪ್ರತಿಯೊಂದು ಪ್ರದೇಶಕ್ಕೆ ಭೇಟಿ ನೀಡಿ ಸ್ಥೂಲವಾಗಿ ಪರಿಶೀಲಿಸಬೇಕು. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿ ಹಾಗೂ ನಗರ ಪಟ್ಟಣ ಪಂಚಾಯತ್‍ನ ಪ್ರತಿ ವಾರ್ಡು ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿ ವಿಪತ್ತು ನಿರ್ವಹಣೆ ಯೋಜನೆ ತಯಾರಿಸಬೇಕು ಎಂದು ಅವರು ಹೇಳಿದರು.
ಗುಡ್ಡ ಕಡಿದು ಮನೆ ನಿರ್ಮಿಸುವುದು ಅಪಾಯಕಾರಿಯಾಗಿದ್ದು ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಪ್ರಾಕೃತಿಕ ನೀರಿನ ಹರಿವನ್ನು ತಿರುಗಿಸುವುದು ಕೂಡ ಪ್ರಾಕೃತಿಕ ದುರಂತಗಳಿಗೆ ಕಾರಣವಾಗಬಲ್ಲದು ಎಂದು ಜಿಲ್ಲಾಧಿಕಾರಿ ಹೇಳಿದರು.
ಪ್ರತಿ ಶಾಲಾ ಕಟ್ಟಡಗಳು ಸುಸ್ಥಿತಿಯಲ್ಲಿರುವ ಬಗ್ಗೆ ಸಂಬಂಧಪಟ್ಟ ಮುಖ್ಯೋಪಾಧ್ಯಾಯರಿಂದ ವರದಿ ಪಡೆಯಬೇಕು. ಅಂಗನವಾಡಿ ಕಟ್ಟಡಗಳ ಕ್ಷಮತೆಯನ್ನು ಪರಿಶೀಲಿಸಬೇಕು ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಕೆತ್ತಿಕಲ್‍ನಲ್ಲಿ ಭೂಕುಸಿತ ತಡೆಯುವ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಕಾಮಗಾರಿಗೆ ಕೇಂದ್ರದಿಂದ ಅನುಮೋದನೆ ಸಿಕ್ಕಿದ್ದು ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಮಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತ ಇರುವ ಜನವಸತಿ ಪ್ರದೇಶಗಳಿಗೆ ವಿಮಾನ ನಿಲ್ದಾಣದಿಂದ ಮಳೆ ನೀರು ಹರಿದು ಹೋಗಿ ಸಮಸ್ಯೆಯಾಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಲು ಒಂದು ವರ್ಷ ಮೊದಲೇ ತಿಳಿಸಲಾಗಿದ್ದರೂ, ಕ್ರಮಕೈಗೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ನಾಳೆ ಮಧ್ಯಾಹ್ನದೊಳಗೆ ವರದಿ ನೀಡುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸೂಚಿಸಿದರು. ಈ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವರದಿ ನೀಡಬೇಕು. ತಪ್ಪಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ತೀವ್ರ ಗಾಳಿ ಮಳೆಗಳ ಸಂದರ್ಭದಲ್ಲಿ ಮೀನುಗಾರಿಕೆಗೆ ತೆರಳಿದ ದೋಣಿಗಳು ಎನ್.ಎಂ.ಪಿ.ಟಿ ಬಂದರು ಪ್ರವೇಶಿಸುವ ಕುರಿತು ಎನ್.ಎಂ.ಪಿ.ಎ ಮತ್ತು ಮೀನುಗಾರಿಕೆ ಇಲಾಖೆ ಜಂಟಿಯಾಗಿ ಸೂಕ್ತ ಕಾರ್ಯವಿಧಾನ ರೂಪಿಸುವಂತೆ ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ ಮಾತನಾಡಿ ಪ್ರಾಕೃತಿಕ ದುರಂತಗಳ ನಂತರ ಸಂತ್ರಸ್ತರನ್ನು ಸ್ಥಳಾಂತರಿಸುವ ಬದಲು, ರೆಡ್ ಅಲರ್ಟ್ ಸಮಯದಲ್ಲಿಯೇ ಸಂಭಾವ್ಯ ಅನಾಹುತಗಳ ಪ್ರದೇಶದಲ್ಲಿ ನಾಗರೀಕರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ಅಂತಹ ಸ್ಥಳಗಳ ಮನೆಗಳಿಗೆ ನೋಟಿಸ್ ಕೊಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ , ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ, ಉಪ ಪೊಲೀಸ್ ಆಯುಕ್ತ ಸಿದ್ದಾರ್ಥ್ ಗೋಯಲ್ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು