ಇತ್ತೀಚಿನ ಸುದ್ದಿ
ಜೆಪ್ಪುಮಹಾಕಾಳಿಪಡ್ಫು ಮೊಯ್ಲಿ ಕೆರೆಯಲ್ಲಿ ಕೃತಕ ನೆರೆ: ಸ್ಥಳೀಯ ಮನೆ ಕಂಪೌಂಡು ಕುಸಿತ; ಉಸ್ತುವಾರಿ ಸಚಿವರು, ಶಾಸಕರು ಎಚ್ಚೆತ್ತುಕೊಳ್ಳಲಿ
23/05/2025, 12:23

ಮಂಗಳೂರು(reporterkarnataka com): ಜೆಪ್ಪು ಮಹಾಕಾಳಿಪಡ್ಫು ಶೆಟ್ಟಿಬೆಟ್ಟು ಸಮೀಪ ರೈಲ್ವೆ ಅಂಡರ್ಪಾಸ್ ಕಾಮಗಾರಿ ಮತ್ತು ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದು, ಪ್ರಸ್ತುತ ಸುರಿಯುತ್ತಿರುವ ಅಲ್ಪ ಪ್ರಮಾಣದ ಮಳೆಗೆ ಸ್ಥಳೀಯ ಪರಿಸರದಲ್ಲಿ lನೀರು ನಿಂತು ವಿವಿಧ ರೀತಿಯ ಸಮಸ್ಯೆ ಉಂಟಾಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿರುವ ಈ ಪರಿಸರದಲ್ಲಿ ಈಗಾಗಲೇ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲದಿರುವುದು, ಅಂಡರ್ಪಾಸ್ಗಳ ನಿರ್ಮಾಣ ಸಂದರ್ಭ ಸರಾಗ ಮಳೆ ನೀರು ಹರಿಯುವ ವ್ಯವಸ್ಥೆ ಮಾಡದೇ ಇರುವುದು , ಕಾಮಗಾರಿಗೆ ಗುಂಡಿ ತೋಡಿ ಅದನ್ನು ಮುಚ್ಚದಿರುವುದು ಇತ್ಯಾದಿ ಕಾರಣಗಳಿಂದ ಸ್ಥಳೀಯ ಪರಿಸರದಲ್ಲಿ ಕೃತಕ ಬಾವಿ ನಿರ್ಮಾಣವಾಗಿದೆ.
ಸ್ಥಳೀಯ ಪುರಾತನ ಪ್ರಸಿದ್ಧ ಶೆಟ್ಟಿಬೆಟ್ಟು ಮೊಯ್ಲಿ ಕೆರೆಯೂ ಈ ಸಮಸ್ಯೆಯಿಂದ ತನ್ನ ಮೂಲ ಸ್ವರೂಪ ಕಳೆದುಕೊಂಡು ಮಲಿನ ಗೊಂಡಿದ್ದು, ಸ್ಮಾರ್ಟ್ ಸಿಟಿ ವತಿಯಿಂದ ಈ ಪರಿಸರದಲ್ಲಿ ಇನ್ನೊಂದು ಕೃತಕ ಕೆರೆ ನಿರ್ಮಾಣ ಆದಂತಿದೆ. ಈಗಾಗಲೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಂಡಿರುವ ಈ ಕೆರೆಯು ನಿರ್ವಹಣೆ ಕೊರತೆಯಿಂದ ತನ್ನ ಮೂಲ ಸ್ವರೂಪ ಕಳೆದು ಕೊಂಡಿದ್ದು, ಈ ಮಳೆಯ ಪರಿಣಾಮ ಇನ್ನಷ್ಟು ತನ್ನ ಮೂಲ ಸ್ವರೂಪ ಕಳೆದು ಕೊಂಡಿದೆ.
ಸ್ಥಳೀಯ ಪರಿಸರದ ಮನೆಯ ಸಮೀಪ ಕಾಮಗಾರಿಗಳಿಗೆ ತೋಡಿರುವ ಗುಂಡಿಗಳಿಂದ ನೀರು ನಿಂತು ಸ್ಥಳೀಯ ಮನೆಯ ತಳ ಫೌಂಡೇಶನ್ ಗೋಡೆಗೆ ಧಕ್ಕೆಯಾಗಿ ಮನೆ ಗೋಡೆ ಬೀಳುವ ಸ್ಥಿತಿ ಉಂಟಾಗಿದೆ. ಇನ್ನೆರಡು ದಿನಗಳಲ್ಲಿ ಸರಾಗ ಮಳೆ ಸುರಿದರೆ ಮನೆ ಕುಸಿದು ಬೀಳುವ ಸ್ಥಿತಿ ನಿರ್ಮಾಣವಾಗಿದೆ.
ಇದೇ ಪರಿಸರದ ಮನೆಯ ಕಾಂಪೌಂಡು ಕೂಡ ಬಿದ್ದು ಸಮಸ್ಯೆ ಸೃಷ್ಟಿಯಾಗಿದೆ.
ಒಂದೆಡೆ ಕಾಮಗಾರಿ ಕುಂಟುತ್ತಾ ಸಾಗಿರುವುದು, ಸ್ಥಳೀಯರ ಸಲಹೆ ಸೂಚನೆಗಳನ್ನು ಕಡೆಗಣಿಸಿ ಮಳೆ ನೀರು ಹರಿಯಲು ವ್ಯವಸ್ಥೆ ಮಾಡದೇ ತಮ್ಮ ಮೂಗಿನ ನೇರಕ್ಕೆ ಕಾಮಗಾರಿ ನಡೆಸುತ್ತಿರುವ ಪರಿಣಾಮ ಈ ಪರಿಸರದಲ್ಲಿ ಸಮಸ್ಯೆ ಸೃಷ್ಟಿಯಾಗಿದೆ.
ಈ ಪರಿಸ್ಥಿತಿಗೆ ಇಲಾಖಾ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಆಗಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಗಮನ ಹರಿಸ ಬೇಕು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ
ಈ ಅವ್ಯವಸ್ಥೆಯ ಪರಿಣಾಮ ಆಗುವ ಕೃತಕ ಅವ್ಯವಸ್ಥೆಗಳು ಮತ್ತು ಮುಂದೆ ನೀರು ನಿಂತು ಎದುರಾಗುವ ಡೆಂಗ್ಯೂ ಇನ್ನಿತರ ಸಾಂಕ್ರಾಮಿಕ ರೋಗಗಳಿಂದ ಜನರಿಗೆ ಎದುರಾಗಲಿರುವ ಸಂಕಷ್ಟಕ್ಕೆ ಶೀಘ್ರ ಮುಕ್ತಿ ಕಾಣಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.