ಇತ್ತೀಚಿನ ಸುದ್ದಿ
ಬೆಂಗಳೂರಿನಲ್ಲಾದ ಮಳೆ ಹಾನಿಗೆ 25,000 ರೂ. ನಿಂದ 1 ಲಕ್ಷ ರೂ. ವರೆಗೆ ಪರಿಹಾರ ನೀಡಿ: ಪ್ರತಿಪಕ್ಷದ ನಾಯಕ ಆರ್. ಅಶೋಕ್
21/05/2025, 23:30

ಬೆಂಗಳೂರು(reporterkarnataka.com):a ಜನರ ಮೇಲೆ ತೆರಿಗೆ ಭಾರ ಹೊರೆಸಿರುವ ಕಾಂಗ್ರೆಸ್ ಸರ್ಕಾರಕ್ಕೆ ʼದಿವಾಳಿ ಮಾಡಲ್ ಆಫ್ ಕರ್ನಾಟಕʼ ಎಂಬ ಬಿರುದು ನೀಡುತ್ತಿದ್ದೇವೆ. ಕಾಂಗ್ರೆಸ್ ನಾಯಕರು ಜನರ ಸಾವಿನ ಮೇಲೆ ಸಾಧನೆಯ ಸಮಾವೇಶ ನಡೆಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಆರ್ಮಿ ಜನರಲ್ ಆಸಿಫ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಬಿರುದು ನೀಡಿದಂತೆಯೇ, ನಾವೆಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ʼದಿವಾಳಿ ಮಾಡಲ್ ಆಫ್ ಕರ್ನಾಟಕʼ ಎಂಬ ಬಿರುದು ನೀಡುತ್ತಿದ್ದೇವೆ. ಜನರು ತೆರಿಗೆ ಭಾರವನ್ನು ಹೊತ್ತಿರುವಾಗ ಕಾಂಗ್ರೆಸ್ ಸಮಾವೇಶ ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ಲೂಟಿಯಾಗಿದೆ. ಮುಡಾದಲ್ಲಿ 14 ಸೈಟುಗಳನ್ನು ಸಿಎಂ ಸಿದ್ದರಾಮಯ್ಯ ಲೂಟಿ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಸತ್ತಿದ್ದಾರೆ. 2 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಎಲ್ಲ ಕಾರಣಕ್ಕೆ ಸಮಾವೇಶ ಮಾಡಲಾಗಿದೆಯೇ? ಎಂದು ಪ್ರಶ್ನಿಸಿದರು.
ವಕ್ಫ್ ಮಂಡಳಿಯಿಂದ ರೈತರ ಜಮೀನು, ದೇವಾಲಯದ ಭೂಮಿ ಕಬಳಿಸಲಾಗಿದೆ. ಕೆಪಿಎಸ್‌ಸಿಯಿಂದ ನಡೆದ ಪರೀಕ್ಷೆಯಲ್ಲಾದ ತಪ್ಪಿನಿಂದ 2 ಲಕ್ಷ ಅಭ್ಯರ್ಥಿಗಳ ಜೀವನಕ್ಕೆ ಕೊಡಲಿ ಏಟು ಬಿದ್ದಿದೆ. ಹುಬ್ಬಳ್ಳಿಯಲ್ಲಿ ಲವ್ ಜಿಹಾದ್‌ನಿಂದ ನೇಹಾ ಹತ್ಯೆಯಾಗಿದೆ. ನಾಗಮಂಗಲದಲ್ಲಿ ಕೋಮು ಗಲಭೆ ನಡೆದಾಗ ಗಣೇಶನನ್ನೇ ಜೈಲಿಗೆ ಹಾಕಿದ್ದರು. ಮಳೆ ಬಂದು ಬೆಂಗಳೂರಿನಲ್ಲಿ ಐದು ಜನರು ಮೃತಪಟ್ಟಿದ್ದಾರೆ. ರಾಜಧಾನಿಯನ್ನು ತೇಲುತ್ತಿರುವ ಬೆಂಗಳೂರು ಮಾಡಿದ್ದಾರೆ. ಹಾಲಿನ ದರ ಹೆಚ್ಚಳ ಮಾಡುವುದರ ಜೊತೆಗೆ ಸುಮಾರು 700 ಕೋಟಿ ರೂ. ಪ್ರೋತ್ಸಾಹಧನ ನೀಡಿಲ್ಲ. ಇವೆಲ್ಲ ಸಾಧನೆಗಳಿಗಾಗಿ ಸರ್ಕಾರ ಸಮಾವೇಶ ಮಾಡಿದೆ ಎಂದು ದೂರಿದರು.
ಅವೈಜ್ಞಾನಿಕ ಗ್ಯಾರಂಟಿಗಳಿಗಾಗಿ 60,000 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಇದಕ್ಕಾಗಿ ಸಾಲ ಮಾಡಲಾಗಿದೆ. ಈ ನಡುವೆ ವಿದ್ಯುತ್ ಶುಲ್ಕ ಹೆಚ್ಚಿಸಲಾಗಿದೆ. ಕಾನೂನು ಸುವ್ಯವಸ್ಥೆಯನ್ನು ಯಾರೂ ಕೇಳುವವರೇ ಇಲ್ಲ. ಗೃಹಸಚಿವರನ್ನು ಪ್ರಶ್ನಿಸಿದರೆ ಇದು ಆಕಸ್ಮಿಕ ಘಟನೆ, ಆರೋಪಿಯು ಮಾನಸಿಕ ಅಸ್ವಸ್ಥ ಎನ್ನುತ್ತಾರೆ. ಮಲ್ಲಿಕಾರ್ಜುನ ಖರ್ಗೆಯನ್ನು ಪಾಕಿಸ್ತಾನವನ್ನು ʼನಮ್ಮ ಪಾಕಿಸ್ತಾನʼ ಎಂದು ಹೇಳುತ್ತಾರೆ. ಭಯೋತ್ಪಾದನಾ ಕೃತ್ಯವನ್ನು ಸಣ್ಣದು ಎಂದು ಹೇಳುತ್ತಾರೆ. ಇಂತಹ ಕಾಂಗ್ರೆಸ್ ನಾಯಕರ ಬಂಡವಾಳ ಜನರ ಮುಂದೆ ಬಯಲಾಗಿದೆ ಎಂದರು.
*ಎಟಿಎಂ ಸರ್ಕಾರ:*
ಕಾಂಗ್ರೆಸ್ ಜನರನ್ನು ಲೂಟಿ ಮಾಡಿ ಎಟಿಎಂ ಮಾಡಿ ಕೇಂದ್ರಕ್ಕೆ ಕಳುಹಿಸುತ್ತಿದೆ. ಬೆಂಗಳೂರಿನಲ್ಲಿ ಎಷ್ಟು ಕಾಮಗಾರಿ ಮಾಡಲಾಗಿದೆ, ಎಷ್ಟು ಅನುದಾನ ನೀಡಲಾಗಿದೆ ಎಂದು ತಿಳಿಸಲಿ. ಬಿಜೆಪಿ ಅವಧಿಯಲ್ಲಿ 1,600 ಕೋಟಿ ರೂ. ನೀಡಿ ಕಾಮಗಾರಿಗೆ ಟೆಂಡರ್ ಆಗಿತ್ತು. ಅದನ್ನು ರದ್ದು ಮಾಡಲಾಗಿದೆ. 54,000 ಕೋಟಿ ರೂ. ನೀಡಲಾಗುವುದು ಎಂದು ಘೋಷಣೆ ಮಾಡಿದ್ದರೂ, ಆ ಹಣ ಬಂದೇ ಇಲ್ಲ. ರಸ್ತೆಗಳಿಗೆ 7,000 ಕೋಟಿ ರೂ. ಎಂದು ಘೋಷಿಸಿ, ಅದನ್ನು ಸುರಂಗ ಯೋಜನೆಗೆ ಬಳಸಿದ್ದಾರೆ. ಮಳೆಯಿಂದಾಗಿ ರಸ್ತೆಗಳಲ್ಲಿ ಸುರಂಗ ಈಗಾಗಲೇ ನಿರ್ಮಾಣವಾಗಿದೆ. ಬ್ರ್ಯಾಂಡ್ ಬೆಂಗಳೂರು ಎಂದು ಹೇಳಿ ಅದನ್ನು ಮಾಡದೆ, ಈಗ ಗ್ರೇಟರ್ ಬೆಂಗಳೂರು ಎನ್ನುತ್ತಿದ್ದಾರೆ. ಆದರೆ ಅದನ್ನೂ ಸರಿಯಾಗಿ ಮಾಡಿಲ್ಲ. ನಮಗೆ ನಾಡಪ್ರಭು ಕೆಂಪೇಗೌಡರ ಸುಸಜ್ಜಿತ ನಗರವಿದ್ದರೆ ಸಾಕು ಎಂದರು.
ಬೆಂಗಳೂರಿನ ಪರಿಹಾರ ಕಾರ್ಯಾಚರಣೆಗೆ 5,000 ಕೋಟಿ ರೂ. ಬಿಡುಗಡೆ ಮಾಡಬೇಕಿದೆ. ವಿಶ್ವಬ್ಯಾಂಕ್‌ನಿಂದ ಹಣ ಪಡೆಯುವ ಪ್ರಸ್ತಾವ ನಮ್ಮ ಅವಧಿಯಲ್ಲೇ ಚರ್ಚೆಯಾಗಿತ್ತು. ಮಳೆಹಾನಿಯಿಂದ ಮನೆ ಕಳೆದುಕೊಂಡವರಿಗೆ 25,000 ರೂ. ನಿಂದ 1 ಲಕ್ಷ ರೂ. ವರೆಗೆ ಪರಿಹಾರ ನೀಡಲಿ. ಕೇವಲ ಏಳೆಂಟು ಸಾವಿರ ರೂ. ಪರಿಹಾರ ಬೇಕಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದು ಹತ್ತು ವರ್ಷ ಕಳೆದಿದೆ. ಮೋದಿ ಸರ್ಕಾರ ರೈಲ್ವೆಗೆ, ಕುಡಿಯುವ ನೀರಿಗೆ, ಹೆದ್ದಾರಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂದು ನಾವು ತಿಳಿಸುತ್ತೇವೆ. ಮನಮೋಹನ್ ಸಿಂಗ್ ಎಷ್ಟು ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಲಿ. ತೆರಿಗೆ ಪಾವತಿಸುವುದು ಮಾನದಂಡ ಆಗುವುದಿಲ್ಲ. ಮೈಸೂರಿನ ಜನರು, ಬೆಂಗಳೂರಿನ ಜನರು ʼನಮ್ಮ ತೆರಿಗೆ ನಮ್ಮ ಹಕ್ಕುʼ ಎಂದರೆ ಏನು ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದರು.
*ಚಿನ್ನದ ಸ್ಮಗ್ಲಿಂಗ್:*
ರನ್ಯಾ ರಾವ್ ಚಿನ್ನದ ಕಳ್ಳ ಸಾಗಾಣಿಕೆಗೆ ಸಂಬಂಧಿಸಿದಂತೆ ಸಿದ್ಧಾರ್ಥ ಎಜುಕೇಶನ್ ಸಂಸ್ಥೆಯನ್ನು ತನಿಖೆಗೆ ಒಳಪಡಿಸಲಾಗಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಎಲ್ಲರ ಮೇಲೂ ಕ್ರಮ ಕೈಗೊಳ್ಳಬೇಕು. ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣದಲ್ಲೇ ಕಾಂಗ್ರೆಸ್ ನಾಯಕರು ಭಯಕ್ಕೊಳಗಾಗಲಿಲ್ಲ. ತಪ್ಪು ಮಾಡಿರುವುದಕ್ಕೆ ಭಯ ಪಡುವಂತೆ ಮಾಡಬೇಕಿದೆ ಎಂದರು.