ಇತ್ತೀಚಿನ ಸುದ್ದಿ
ಮೂಡಿಗೆರೆ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕರಡಿ ದಾಳಿ; ಇಬ್ಬರಿಗೆ ಗಂಭೀರ ಗಾಯ
21/05/2025, 21:16

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬರಡಿ ಗ್ರಾಮದಲ್ಲಿ ಕರಡಿಗಳ ದಾಳಿಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಬೆಳಿಗ್ಗೆ ಸುಮಾರು 10:30 ಗಂಟೆ ವೇಳೆಗೆ ಕುಂಬರಡಿ ಗ್ರಾಮದಲ್ಲಿ ವಿನಯ್ ಗೌಡ (40) ಹಾಗೂ ಗಿಡ್ಡಯ್ಯ ಎಂಬವರ ಮೇಲೆ ದಾಳಿ ನಡೆಸಿದೆ. ಕರಡಿ ದಾಳಿಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿನಯ್ ಗೌಡ ಹಾಗೂ ಅವರೊಂದಿಗೆ ಕೆಲಸ ಮಾಡಲು ಬಂದಿದ್ದ ಗಿಡ್ಡಯ್ಯ ಎಂಬವರು ತೋಟದಲ್ಲಿ ಗೊಬ್ಬರ ಹಾಕುತ್ತಿರುವಾಗ, ಅಚಾನಕವಾಗಿ 2 ಕರಡಿಗಳು ದಾಳಿ ನಡೆಸಿದ್ದು, ಅವರ ತಲೆ, ಬೆನ್ನು ಹಾಗೂ ಕೈಕಾಲುಗಳಿಗೆ ತೀವ್ರ ಗಾಯವಾಗಿರುತ್ತದೆ.
ಗಾಯಾಳುಗಳನ್ನು ತಕ್ಷಣವೇ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೋಟದ ಪ್ರದೇಶದಲ್ಲಿ ದಟ್ಟ ಮಂಜು ಕವಿದ ವಾತಾವರಣವಿದ್ದ ಕಾರಣ ಕರಡಿ ಇರುವುದು ಗೊತ್ತಾಗಲಿಲ್ಲ.
ಸ್ಥಳೀಯರು ಕರಡಿ ಮರಿ ಹತ್ತಿರುವ ಶಂಕೆ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ