ಇತ್ತೀಚಿನ ಸುದ್ದಿ
ಮಂಗಳೂರು ಸಮೀಪ ಗುಂಪು ಹಲ್ಲೆಯಿಂದ ಹತ್ಯೆಗೀಡಾದ ವ್ಯಕ್ತಿಯ ಗುರುತು ಪತ್ತೆ: ಮೃತದೇಹ ವಯನಾಡಿಗೆ ರವಾನೆ
30/04/2025, 22:58

ಮಂಗಳೂರು(reporterkarnataka.com): ನಗರದ ಹೊರವಲಯದ ಕುಡುಪು ಸಮೀಪ ಗುಂಪು ಹಲ್ಲೆಗೊಳಗಾಗಿ ಸಾವನ್ನಪ್ಪಿದ ವ್ಯಕ್ತಿಯನ್ನು ಕೇರಳದ ವಯನಾಡು ಪುಳುಪಳ್ಳಿ ನಿವಾಸಿ ಮೊಹಮ್ಮದ್ ಅಶ್ರಫ್ (36) ಎಂದು ಗುರುತಿಸಲಾಗಿದ್ದು, ಮೃತದೇಹವನ್ನು ತಾಯ್ನಾಡಿಗೆ ಕಳುಹಿಸಲಾಗಿದೆ.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ವಯನಾಡು ಶಾಸಕ ಟಿ. ಸಿದ್ದೀಕ್ ಅವರನ್ನು ಸಂಪರ್ಕಿಸಿದ್ದು, ರಾತ್ರಿ ಹೊತ್ತಿನಲ್ಲೇ ಮೃತನ ಸಹೋದರ ಅಬ್ದುಲ್ ಜಬ್ಬಾರ್ ಹಾಗೂ ಕುಟುಂಬಸ್ಥರು ಮಂಗಳೂರಿಗೆ ತಲುಪಿ ಮೃತ ದೇಹದ ಗುರುತು ಪತ್ತೆ ಹಚ್ಚಿದ್ದಾರೆ. ಬಳಿಕ ಮೃತದೇಹವನ್ನು ಮಂಗಳೂರು ಬಂದರಿನ ಜೀನತ್ ಬಕ್ಷ್ ಜುಮಾ ಮಸೀದಿಯಲ್ಲಿ ಸ್ನಾನ ಮಾಡಿಸಿ, ಮಯ್ಯತ್ತ್ ನಮಾಜಿನ ವಿಧಿ ವಿಧಾನಗಳ ಪೂರ್ತಿಗೊಳಿಸಿ ನಂತರ ಬುಧವಾರ ಮುಂಜಾನೆ 5 ಗಂಟೆಗೆ ಪೊಲೀಸ್ ಜೀಪಿನ ಬೆಂಗಾಲಿನೊಂದಿಗೆ ಕೇರಳಕ್ಕೆ ಕೊಂಡೊಯ್ಯಲಾಯಿತು.
ಸ್ಪೀಕರ್ ಯು. ಟಿ. ಖಾದರ್ ಅವರ ನಿರ್ದೇಶನದಂತೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹಲ್ ಹಮೀದ್ ಕೆ.ಕೆ, ಮಾಜಿ ಮೇಯರ್ ಅಶ್ರಫ್ ಕೆ., ಸುಹೈಲ್ ಕಂದಕ್, ಸುನಿಲ್ ಬಜಲಕೇರಿ, ಹರ್ಷಾದ್ ವರ್ಕಾಡಿ, ಲಾರೆನ್ಸ್ ಡಿ’ಸೋಜ, ವಾಹಿದ್ ಕುದ್ರೋಳಿ ಮುಂತಾದವರು ಮುಂಜಾನೆವರೆಗೂ ಸ್ಥಳದಲ್ಲಿದ್ದು ಪ್ರಕ್ರಿಯೆಗಳಿಗೆ ನೆರವಾಗಿದ್ದಾರೆ.