ಇತ್ತೀಚಿನ ಸುದ್ದಿ
Mangaluru | ಗುಂಪು ದಾಳಿಗೆ ಯುವಕ ಸಾವು ಪ್ರಕರಣ: 15 ಮಂದಿ ಬಂಧನ; ಇನ್ನಷ್ಟು ಆರೋಪಿಗಳ ಪತ್ತೆಗೆ ಶೋಧ
29/04/2025, 16:24

ಮಂಗಳೂರು(reporterkarnataka.com): ನಗರದ ಹೊರವಲಯದ ಕುಡುಪು ಸಮೀಪ ಉತ್ತರ ಪ್ರದೇಶದ ಮೂಲಕ ಕೂಲಿ ಕಾರ್ಮಿಕ ಯುವಕನನ್ನು ಗುಂಪೊಂದು ಹೊಡೆದು ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯನ್ನು ಬಂಧಿಸಲಾಗಿದೆ.
ಬಂಧಿತರನ್ನು ಸಚಿನ್ ಟಿ, ದೇವದಾಸ್, ಮಂಜುನಾಥ್, ಸಾಯಿದೀಪ್, ನಿತೀಶ್ ಕುಮಾರ್, ದೀಕ್ಷಿತ್ ಕುಮಾರ್, ಸಂದೀಪ್, ವಿವಿಯನ್ ಆಳ್ವಾರೀಸ್, ಶ್ರೀದತ್ತ, ರಾಹುಲ್, ಪ್ರದೀಪ್ ಕುಮಾರ್, ಮನೀಶ್ ಶೆಟ್ಟಿ, ಧನುಷ್, ದೀಕ್ಷಿತ್ ಹಾಗೂ ಕಿಶೋರ್ ಕುಮಾರ್ ಎಂದು ತಿಳಿದು ಬಂದಿದೆ. ಆರೋಪಿಗಳಲ್ಲಿ ಹೆಚ್ಚಿನವರು ಯುವಕರಾಗಿದ್ದು, ಒಂದಿಬ್ಬರು ನಡುವಯಸ್ಕರೂ ಇದ್ದಾರೆ. ಬಂಧಿತ ಆರೋಪಿಗಳಲ್ಲಿ ಹೆಚ್ಚಿನವರು ಕುಡುಪು ಪರಿಸರದವರಾಗಿದ್ದಾರೆ.
ಹತ್ಯೆ ಪ್ರಕರಣದಲ್ಲಿ ಸುಮಾರು 25 ಮಂದಿ ಭಾಗಿಯಾಗಿ ಉಳಿದ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.
ಏಪ್ರಿಲ್ 27ರಂದು ಸಂಜೆ ವೇಳೆ ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಶ್ವಾನದಳ, ಬೆರಳಚ್ಚು ತಜ್ಞರ ಜತೆ ಆಗಮಿಸಿದ್ದರು. ಮೃತದೇಹದ ಬೆನ್ನು ಭಾಗಕ್ಕೆ ಬಿದ್ದ ಬಲವಾದ ಏಟು ಮತ್ತು ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗದ ಹಿನ್ನೆಲೆಯಲ್ಲಿ ವ್ಯಕ್ತಿಯ ಸಾವು ಸಂಭವಿಸಿದೆ ಎಂದು ಪೋಸ್ಟ್ ಮಾರ್ಟಂ ವರದಿ ಹೇಳಿದೆ. ಘಟನಾ ಸ್ಥಳದ ಅಕ್ಕಪಕ್ಕದ ಸಿಸಿಟಿವಿ ಪೂಟೇಜಿನ ಪರಿಶೀಲನೆ ನಡೆಯುತ್ತಿದೆ. ಧರ್ಮದ ಆಧಾರದಲ್ಲಿ ಗುಂಪೊಂದು ಥಳಿಸಿ ಈ ಹೀನಕೃತ್ಯ ಎಸಗಿದೆ ಎನ್ನಲಾಗಿದೆ.