ಇತ್ತೀಚಿನ ಸುದ್ದಿ
UGCET- 25 | 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ: ಕ್ಯೂಆರ್ ಕೋಡ್, ಮಾದರಿ ಓಎಂಆರ್ ಶೀಟ್ ಈ ಬಾರಿಯ ವಿಶೇಷ
07/04/2025, 11:24

ಬೆಂಗಳೂರು(reporterkarnataka.com): ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಇದೇ 16 ಮತ್ತು 17ರಂದು ನಡೆಸಲು ಉದ್ದೇಶಿಸಿರುವ 2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (ಯುಜಿಸಿಇಟಿ) ಪ್ರವೇಶ ಪತ್ರವನ್ನು ಭಾನುವಾರ ಬಿಡುಗಡೆ ಮಾಡಿದೆ.
ಅಭ್ಯರ್ಥಿಗಳು, ಕೆಇಎ ವೆಬ್ ಸೈಟ್ ನಲ್ಲಿ ಯುಜಿಸಿಇಟಿ-25 ಪ್ರವೇಶ ಪತ್ರ ಎನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿ ತಮ್ಮ ಲಾಗಿನ್ ಐಡಿ ಸಂಖ್ಯೆ, ಹೆಸರು ದಾಖಲಿಸುವುದರ ಮೂಲಕ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಓಟಿಪಿ ಮತ್ತು ಮುಖಚಹರೆ ಆಧಾರಿತ ಲಾಗಿನ್ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಈ ಸಲದ ಪ್ರವೇಶ ಪತ್ರದಲ್ಲಿ ಪ್ರಮುಖವಾಗಿ ಕ್ಯೂಆರ್ ಕೋಡ್ ಇದೆ. ಜತೆಗೆ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎಂದು ಮಾದರಿ ಓಎಂಆರ್ ಶೀಟ್ ಹಾಗೂ ಮಾರ್ಗಸೂಚಿ ಪಟ್ಟಿ- ಹೀಗೆ ಒಟ್ಟು ಎರಡು ಪುಟಗಳಿದ್ದು ಅವುಗಳನ್ನು ಡೌನ್‌ಲೋಡ್ ಮಾಡಿಕೊಂಡು ಓದಿಕೊಳ್ಳಬೇಕು. ಮಾದರಿ ಓಎಂಆರ್ ಶೀಟ್ ಅನ್ನೂ ವಿದ್ಯಾರ್ಥಿಗಳು ಅಭ್ಯಾಸಕ್ಕೆ ಬಳಸಬೇಕು. ಆ ಮೂಲಕ ಪರೀಕ್ಷೆ ಸಂದರ್ಭದಲ್ಲಿ ಆಗುವ ತಪ್ಪುಗಳನ್ನು ತಪ್ಪಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಎಂಜಿನಿಯರಿಂಗ್ ಸೇರಿದಂತೆ ಕೆಇಎ ನಡೆಸುವ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶ ಪರೀಕ್ಷೆಯನ್ನು 3,30,875 ಅಭ್ಯರ್ಥಿಗಳು ಈ ಬಾರಿ ತೆಗೆದುಕೊಂಡಿದ್ದಾರೆ. ಇಷ್ಟೂ ಮಂದಿ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಏ.15ರಂದು ನಡೆಯುವ ಕನ್ನಡ ಭಾಷಾ ಪರೀಕ್ಷೆ ಗೂ ಇದೇ ಪ್ರವೇಶ ಪತ್ರ ಅನ್ವಯ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.