1:36 AM Monday31 - March 2025
ಬ್ರೇಕಿಂಗ್ ನ್ಯೂಸ್
ಕೂಡ್ಲಿಗಿ: ರಂಜಾನ್ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಭಾಗಿ ಭಾಗಿ Kolara | ಶ್ರೀನಿವಾಸಪುರದಲ್ಲಿ ಸಂಭ್ರಮ- ಸಡಗರದಲ್ಲಿ ಈದ್-ಉಲ್-ಫಿತರ್ ಆಚರಣೆ: ಸಾಮೂಹಿಕ ಪ್ರಾರ್ಥನೆ PDO | ಮಾದರಿ ಗ್ರಾಮ ಪಂಚಾಯತಿ ನಿರ್ಮಾಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ… Bangalore | ಸಬಲೀಕರಣ ಜತೆಗೆ ಮಹಿಳಾ ಸುರಕ್ಷತೆ: ‘ಬಿ.ಸೇಫ್’ ಸಮೀಕ್ಷಾ ವರದಿ ಬಿಡುಗಡೆ Bangalore | ಬೇಡಿಕೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ನಿವೃತ್ತರ ಒಕ್ಕೂಟಗಳ… MSIL | ಸರಕಾರಿ, ಖಾಸಗಿ ಉತ್ಪನ್ನಗಳ ಮಾರಾಟ, ಖರೀದಿಗೆ ನೆರವಾಗಲಿದೆ ಇ ಪೋರ್ಟಲ್‌ Chikkamagaluru | ಬಾಲ ಹಿಡಿದು ಎತ್ತಿದ ಉರಗ ತಜ್ಞರು: ನುಂಗಿದ್ದ 10 ಮೊಟ್ಟೆಗಳನ್ನು… Speaker Talking | ವಿಧಾನ ಸೌಧಕ್ಕೆ ವರ್ಣರಂಜಿತ ದೀಪಾಲಂಕಾರ; ಯಾವಾಗ ಉದ್ಘಾಟನೆ?; ಸ್ಪೀಕರ್… ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆ: ಹಾಲು ದರ ಏರಿಕೆಗೆ ಕೇಂದ್ರ… ಕೋಲಾರ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿ; ತೇರಹಳ್ಳಿ…

ಇತ್ತೀಚಿನ ಸುದ್ದಿ

ನಮ್ಮ ಭಾರತೀಯ ಸಂಸ್ಕೃತಿ, ಆಯುರ್ವೇದ ದೇಶದ ಆಸ್ತಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

26/03/2025, 11:32

ಬೆಂಗಳೂರು(reporterkarnataka.com): ನಮ್ಮ ಭಾರತೀಯ ಸಂಸ್ಕೃತಿ ಹಾಗೂ ಆಯುರ್ವೇದ ದೇಶದ ಆಸ್ತಿ. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಬೆಂಗಳೂರಿನ ಧನ್ವಂತರಿ ರಸ್ತೆಯಲ್ಲಿರುವ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆತ್ರೇಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಪುರುಷ ವಿದ್ಯಾರ್ಥಿನಿಲಯ ಮತ್ತು ಹೈಟೆಕ್ ಪಂಚಕರ್ಮ ಕೊಠಡಿಗಳ ಲೋಕಾರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಉಪ ಮುಖ್ಯಮಂತ್ರಿಗಳು ಆಯುರ್ವೇದಕ್ಕೆ ಸುಮಾರು 5000 ವರ್ಷಗಳ ಇತಿಹಾಸವಿದೆ. ಆಯುರ್ವೇದವು ಪ್ರಾಚೀನ ಚಿಕಿತ್ಸೆಯ ಪದ್ಧತಿಯಾಗಿದ್ದು ವಿಶ್ವದೆಲ್ಲೆಡೆ ಮನ್ನಣೆ ಇದೆ. ನಮ್ಮ ದೇಶದ ಯೋಗ, ಆಯುರ್ವೇದ, ಆಧ್ಯಾತ್ಮಿಕತೆಗೆ ವಿದೇಶದಲ್ಲಿ ಗೌರವವಿದೆ ಎಂದು ತಿಳಿಸಿದರು.
ದೇಹವನ್ನು ದೇವಾಲಯ ರೂಪದಲ್ಲಿ ನಾವು ನೋಡುತ್ತೇವೆ. ಆಸ್ತಿ ಸಂಪಾದಿಸಬಹುದು. ಆದರೆ ಆರೋಗ್ಯ ಸಂಪಾದಿಸುವುದು ಕಷ್ಟ. ಆಸ್ತಿ ಇದ್ದರೂ ಆರೋಗ್ಯವಿಲ್ಲದಿದ್ದರೆ ಪ್ರಯೋಜನವಿಲ್ಲ. 1967ನೇ ಇಸವಿಯಿಂದ ಜಯಚಾಮರಾಜೇಂದ್ರ ಆಯುರ್ವೇದ ಆಸ್ಪತ್ರೆಯು ನಿರಂತರವಾಗಿ ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಿಗೆ ಆಯುರ್ವೇದ ಚಿಕಿತ್ಸೆಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಭಾರತದಲ್ಲಿ ಹೆಚ್ಚು ಆಯುರ್ವೇದ ಕಾಲೇಜುಗಳಿದ್ದು, ನಮ್ಮ ರಾಜ್ಯದಲ್ಲಿ ಆಯುರ್ವೇದ ಕಾಲೇಜು ಇರುವುದು ಹೆಗ್ಗಳಿಕೆಯಾಗಿದೆ. ಆಯುರ್ವೇದದಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನ ಪಡೆದಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಸಾರ್ವಜನಿಕರು ಉತ್ತಮ ಆರೋಗ್ಯವನ್ನು ಕಾಪಾಡುವ ದಿಸೆಯಲ್ಲಿ ಸಿರಿಧಾನ್ಯಗಳನ್ನು ಬಳಸುತ್ತಿದ್ದಾರೆ. ವಿವಿಧ ಮೇಳಗಳಲ್ಲಿ ಭಾಗವಹಿಸುತ್ತಿದ್ದಾರೆ.
ನಮ್ಮ ಆಯುರ್ವೇದ ಪದ್ದತಿಯನ್ನು ಉಳಿಸಿ, ಬೆಳೆಸಿ ಸೇವೆಯನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಅಧಿಕಾರ ವಹಿಸಿದ ಮೇಲೆ ಇಲಾಖೆಗೆ ಚೈತನ್ಯ ತುಂಬಿದ್ದಾರೆ ಎಂದು ಶ್ಲಾಘಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ಪ್ರಸ್ತುತ ಕ್ಯಾನ್ಸರ್, ಕಿಡ್ನಿ, ಹೃದಯ ಸಂಬಧಿಸಿದ ಕಾಯಿಲೆಗಳು ಹೆಚ್ಚಾಗಿದ್ದು, ಜೀವನಶೈಲಿಯಲ್ಲಿ ಬದಲಾವಣೆ ತರಬೇಕು. ಆಯುರ್ವೇದದ ಮೂಲ ತತ್ವವೆಂದರೆ ದೇಹ, ಮನಸ್ಸು ಮತ್ತು ಪ್ರಜ್ಞೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ ಅನಾರೋಗ್ಯವನ್ನು ತಡೆಗಟ್ಟಬಹುದು. ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆಯು ಮೂಲಕ ಸಮತೋಲನ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.
ರಾಜ್ಯ ಸರ್ಕಾರವು ಈಗಾಗಲೇ ಆಯುರ್ವೇದ ಪದ್ಧತಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿ, ಆಯುರ್ವೇದ ಪದ್ದತಿಯನ್ನು ವಿಶ್ವಮಟ್ಟದಲ್ಲಿ ಬೆಳೆಸಲು ಸಾಕಷ್ಟು ಪ್ರೋತ್ಸಾಹವನ್ನು ನೀಡುತ್ತಿದೆ.
ಸರ್ಕಾರಿ ಆಯುರ್ವೇದ ಕಾಲೇಜು ಬೆಂಗಳೂರು ಇಲ್ಲಿ 675 ಲಕ್ಷ ರೂ ಗಳ ವೆಚ್ಚದಲ್ಲಿ ಮೂರು ಮಹಡಿಗಳ 30 ಕೊಠಡಿಗಳ ಪುರುಷರ ವಿದ್ಯಾರ್ಥಿನಿಲಯ ನಿರ್ಮಾಣವಾಗಿದೆ. ಇದರಲ್ಲಿ 150 ವಿದ್ಯಾರ್ಥಿಗಳಿಗೆ ವಾಸಿಸಲು ಹಾಗೂ ಆಯುರ್ವೇದ ಅಧ್ಯಯನ ನಡೆಸಲು ಸೌಕರ್ಯ ಕಲ್ಪಿಸಲಾಗಿದೆ. ಜಯಚಾಮರಾಜೇಂದ್ರ ಆಯುರ್ವೇದ ಆಸ್ಪತ್ರೆಯಲ್ಲಿ ಈಗಾಗಲೇ ಒಳರೋಗಿ ಮತ್ತು ಹೊರರೋಗಿ ವಿಭಾಗ, ವಿಶೇಷ-ಅರೆವಿಶೇಷ ಹಾಗೂ ಜನರಲ್ ವಾರ್ಡ್ ಗಳಿಂದ ಕೂಡಿದ 350 ಹಾಸಿಗೆಗಳ ಆಸ್ಪತೆಯು ಕಾರ್ಯನಿರ್ವಹಿಸುತ್ತಿದ್ದು, ಜನರ ಬೇಡಿಕೆ‌ ಅನುಗುಣವಾಗಿ ಅತ್ಯಾಧುನಿಕ ಸೌಕರ್ಯವುಳ್ಳ ಸುಸಜ್ಜಿತ 18 ಹೈಟೆಕ್ ಪಂಚಕರ್ಮ ಕೊಠಡಿಗಳನ್ನು ನ್ಯಾಮ್ ಮತ್ತು ರಾಜ್ಯ ಸರ್ಕಾರ ನೆರವಿನಿಂದ ಅಭಿವೃದ್ಧಿ ಪಡಿಸಿ, ಸುಮಾರು 296.63 ಲಕ್ಷ ರೂ ಗಳಲ್ಲಿ ಸಜ್ಜುಗೊಳಿಸಲಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಆಯುಷ್ ಇಲಾಖೆಯ ಆಯುಕ್ತ ವಿಪಿನ್ ಸಿಂಗ್, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಚಾರ್ಯರು ಡಾ. ಸುರೇಖ. ಎಸ್. ಮೆದಿಕೇರಿ ಸೇರಿದಂತೆ ಹಿರಿಯ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು