ಇತ್ತೀಚಿನ ಸುದ್ದಿ
ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ: ಚಿತ್ತಾರಿಯ ಗಿರೀಶ್ ಪಿ. ಎಂ. ಸಾಧನೆಗೆ ಸನ್ಮಾನ
18/03/2025, 11:56

ಕಾಸರಗೋಡು(reporterkarnataka.com): ವಿದ್ಯಾರ್ಥಿಗಳಿಗೆ, ಕ್ರೀಡಾಪಟುಗಳಿಗೆ, ಕಲಾವಿದರುಗಳಿಗೆ ವಿವಿಧ ಪರೀಕ್ಷೆಗಳಲ್ಲಿ, ಸ್ಪರ್ಧೆಗಳಲ್ಲಿ ಉನ್ನತ ಶ್ರೇಣಿ ಯಲ್ಲಿ ಉತ್ತೀರ್ಣರಾದಾಗ ಸಂಘ ಸಂಸ್ಥೆಗಳು, ಸಾರ್ವಜನಿಕರು ಅಭಿನಂದಿಸಿ ಬೆನ್ನು ತಟ್ಟಿದಾಗ, ಅದು ಉತ್ತೀರ್ಣರಾದವರೀಗೆ ಮಾತ್ರವಲ್ಲ ಉಳಿದವರೀಗೂ ಪ್ರೇರಣೆಯಾಗುತ್ತದೆ ಎಂದು ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಜಿಲ್ಲಾ ಸಂಘ ಉಪಾಧ್ಯಕ್ಷೆ ಉಶಾಕಿರಣ್ ಹೇಳಿದರು.
ಅವರು ಕಾಸರಗೋಡು ಕನ್ನಡ ಭವನದಲ್ಲಿ “ಮಂಗಳೂರು ವಿಶ್ವವಿದ್ಯಾಲಯ 2023-24 ನೇ ಸಾಲಿನ ಸ್ನಾತಕೋತ್ತರ ಪರೀಕ್ಷೆಯಲ್ಲಿ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಷಯದಲ್ಲಿ ಪ್ರಥಮ ಸ್ಥಾನ ಚಿನ್ನದ ಪದಕದೊಂದಿಗೆ ಪಡೆದ ಕಾಸರಗೋಡು ಜಿಲ್ಲೆಯ ಚಿತ್ತಾರಿಯ ಗಿರೀಶ್ ಪಿ. ಎಂ. ಅವರ ಸಾಧನೆಗೆ ನೀಡಿದ ಅಭಿನಂದನಾ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಭವನದಲ್ಲಿ ನಡೆದ ಈ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಮರಾಜ ಕ್ಷತ್ರಿಯ ಕೂಡ್ಲು ಉಪಸಂಘ ಅಧ್ಯಕ್ಷ ಸತೀಶ್ ಕೂಡ್ಲು, ವಿಶ್ವ ರಾಮಕ್ಷತ್ರಿಯ ಮಹಾಸಂಘ ಸಂಘಟನಾ ಕಾರ್ಯದರ್ಶಿ ಸಂಧ್ಯಾರಾಣಿ ಟೀಚರ್, ಎಡನೀರು ಹೈಯರ್ ಸೆಕೆಂಡರಿ ಅಧ್ಯಾಪಕ ಪ್ರವೀಣ್ ಶೆಟ್ಟಿ ಮಾಸ್ಟರ್, ಅಭಿನಂದನಾ ಮಾತುಗಳನ್ನಾಡಿದರು. ಕನ್ನಡ ಭವನ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಹಾಗೂ ಅತಿಥಿಗಳು ಶಾಲು ಹೊದಿಸಿ, ಹಾರ ತೊಡಿಸಿ, ಅಭಿನಂದನ ಪತ್ರ, ಸ್ಮರಣಿಕೆ ನೀಡಿ ಗಿರೀಶ್ ಪಿ ಎಂ ಅವರನ್ನು ಅಭಿನಂದಿಸಿದರು. ಕನ್ನಡ ಭವನದ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೋಟೆಕಣಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸಂಧ್ಯಾ ರಾಣಿ ಟೀಚರ್ ವಂದಿಸಿದರು.
ಅಭಿನಂದನೆ ಸ್ವೀಕರಿಸಿದ ಗಿರೀಶ್ ಪಿ. ಎಂ. ಹರ್ಷ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.