ಇತ್ತೀಚಿನ ಸುದ್ದಿ
Tourist Safety | ಪ್ರವಾಸಿಗರ ಸುರಕ್ಷತೆಗೆ ಎಲ್ಲ ರೀತಿಯ ಕ್ರಮ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ
18/03/2025, 00:15

ಬೆಂಗಳೂರು(reporterkarnataka.com):ಪ್ರವಾಸಿಗರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನ ಪರಿಷತ್ ನಲ್ಲಿ ಇಂದು ತಿಳಿಸಿದರು.
ನಿಯಮ 330ರಡಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ್ ಅವರು ಗಂಗಾವತಿಯ ಸಣಾಪೂರ ಕೆರೆ ಸಮೀಪ ನಡೆದ ವಿದೇಶಿ ಮಹಿಳೆ ಹಾಗೂ ರೆಸಾರ್ಟ್ ಒಡತಿಯ ಮೇಲಿನ ಅತ್ಯಾಚಾರ, ವಿದೇಶಿ ಪ್ರಜೆಗಳ ಮೇಲಿನ ಹಲ್ಲೆ ಪ್ರಕರಣ ಕುರಿತ ಪ್ರಸ್ತಾಪಕ್ಕೆ ಉತ್ತರಿಸಿದ ಗೃಹ ಸಚಿವರು, ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ಕ್ರಿಮಿನಲ್ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದರು.
ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಆನೆಗುಂದಿ, ಸಣಾಪೂರ, ಬಸಾಪೂರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ರೆಸಾರ್ಟ್ ಹಾಗೂ ಹೋಮ್ ಸ್ಟೇ ಮಾಲೀಕರೊಂದಿಗೆ ಗಂಗಾವತಿ ಡಿಎಸ್ಪಿ ಕಚೇರಿಯಲ್ಲಿ ಸಭೆ ನಡೆಸಿದ್ದು, ಪ್ರವಾಸಿಗರ ಮಾಹಿತಿಯನ್ನು ಕಡ್ಡಾಯವಾಗಿ ದಾಖಲು ಮಾಡುವುದು, ಸೂಕ್ತ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಸುವುದು ಸೇರಿದಂತೆ ವಿದೇಶಿ ಪ್ರವಾಸಿಗರ ಆಗಮನದ ಮಾಹಿತಿಯನ್ನು ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸುವಂತೆ ಸೂಚಿಸಲಾಗಿದೆ. ಹೆಚ್ಚಿನ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯಿಂದ ಹೆಚ್ಚುವರಿಯಾಗಿ ಹೆದ್ದಾರಿ ಗಸ್ತು ವಾಹನ ನಿಯೋಜಿಸಿದ್ದು,
ಇನ್ಸ್ ಸ್ಪೆಕ್ಟರ್ ದರ್ಜೆಯ ಅಧಿಕಾರಿಯನ್ನು ಮೇಲುಸ್ತುವಾರಿಗಾಗಿ ನೇಮಿಸಲಾಗಿದೆ ಎಂದವರು ತಿಳಿಸಿದರು.