ಇತ್ತೀಚಿನ ಸುದ್ದಿ
Govt Hospital | ಶ್ರೀನಿವಾಸಪುರ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ: ಸ್ತ್ರೀರೋಗ ತಜ್ಞೆಯೂ ಇಲ್ಲ
17/03/2025, 14:37

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ಶ್ರೀನಿವಾಸಪುರ ಪಟ್ಟಣದ 100 ಹಾಸಿಗೆಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 5 ವರ್ಷಗಳಿಂದ ಕಿವಿ, ಮೂಗು, ಗಂಟಲು (ಇಎನ್‌ಟಿ) ತಜ್ಞರ ಕೊರತೆ ಉಂಟಾಗಿದೆ. ಈ ನಡುವೆ, ಸ್ತ್ರೀರೋಗ ತಜ್ಞೆ ಡಾ. ಗೌಸಿಯಾ ಬಾನು ರಾಜೀನಾಮೆ ನೀಡಿದ ಕಾರಣ, ಮಹಿಳಾ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಲಭ್ಯವಿಲ್ಲ.
ಶ್ರೀನಿವಾಸಪುರ ಹಾಗೂ ಸುತ್ತಮುತ್ತಲಿನ 300ಕ್ಕೂ ಹೆಚ್ಚು ಹಳ್ಳಿಗಳ ಜನತೆ ಈ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಬಡ ರೋಗಿಗಳು ತುರ್ತು ಚಿಕಿತ್ಸೆಗಾಗಿ, ಖಾಸಗಿ ಆಸ್ಪತ್ರೆಗಳು, ಕೋಲಾರ , ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಆಸ್ಪತ್ರೆಗಳು ಅಥವಾ ಆಂಧ್ರಪ್ರದೇಶದ ಮದನಪಲ್ಲಿಗೆ ತೆರಳುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ಜನರು ದೂರ ಪ್ರಯಾಣ, ಹೆಚ್ಚಿದ ವೆಚ್ಚ, ಮತ್ತು ಚಿಕಿತ್ಸೆಗಾಗಿ ನಿರೀಕ್ಷಿಸುವ ಸಮಸ್ಯೆ ಎದುರಿಸುತ್ತಿದ್ದಾರೆ.
ಸರ್ಕಾರ ಈ ಸಮಸ್ಯೆಗೆ ತಕ್ಷಣ ಸ್ಪಂದಿಸಿ, ಅಗತ್ಯ ತಜ್ಞ ವೈದ್ಯರನ್ನು ನೇಮಕ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತ್ವರಿತ ಕ್ರಮ ಕೈಗೊಂಡು, ತಾಲ್ಲೂಕು ಮಟ್ಟದಲ್ಲಿ ವೈದ್ಯರ ನೇಮಕಾತಿ ಖಾಯಂಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.