ಇತ್ತೀಚಿನ ಸುದ್ದಿ
HDK v!s DKS | 135 ಸೀಟು ಕೊಟ್ಟಿರುವುದು ನಟ್ಟು ಬೋಲ್ಟ್ ರಿಪೇರಿ ಮಾಡೋಕೆ ಅಲ್ಲ: ಡಿಕೆಶಿ ಹೇಳಿಕೆಗೆ ಕುಮಾರಸ್ವಾಮಿ ಟಾಂಗ್
02/03/2025, 22:26

ಬೆಂಗಳೂರು(reporterkarnataka.com): ನಟ್ಟು ಬೋಲ್ಟ್ ರಿಪೇರಿ ಮಾಡಲು ಬಹಳ ಜನ ಇದ್ದಾರೆ. ರಾಜ್ಯದ ಜನತೆ ಇವರಿಗೆ 135 ಸೀಟು ಕೊಟ್ಟಿರುವುದು ರಿಪೇರಿ ಮಾಡುವುದಕ್ಕಲ್ಲ, ರಾಜ್ಯದ ಜನರ ಸಮಸ್ಯೆ ಆಲಿಸಲಿಕ್ಕೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟರು.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಡಿ.ಕೆ. ಶಿವಕುಮಾರ್ ಅವರು ಬಹುಶಃ ಭೂಮಿ ಮೇಲಿಲ್ಲ ಅನಿಸುತ್ತದೆ. ಅಧಿಕಾರದ ಅಮಲು ಹಾಗೆ ಮಾತನಾಡಿಸುತ್ತಿದೆ. ಅವರ ಬಗ್ಗೆ ಮಾತನಾಡುವುದಕ್ಕಿಂತ ಮೌನವಾಗಿರುವುದೇ ಒಳ್ಳೆಯದು ಎಂದು ಸಚಿವರು ವ್ಯಂಗ್ಯವಾಡಿದರು.
ಡಿ.ಕೆ. ಶಿವಕುಮಾರ್ ಹಿಂದುತ್ವದ ಜಪ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು; ಅದು ಅವರವರ ಭಾವಕ್ಕೆ ಬಿಟ್ಟದ್ದು. ನಾನು ಟೀಕೆ ಮಾಡಲು ಹೋಗಲ್ಲ. ಡಾ. ಬಿ.ಆರ್.ಅಂಬೇಡ್ಕರ್ ಅವರೇ ಅವರವರ ಭಾವನೆಗೆ ಅವಕಾಶ ನೀಡಿದ್ದಾರೆ. ಇದರಲ್ಲಿ ವಿಶ್ಲೇಷಣೆ ಮಾಡುವುದಕ್ಕೆ ಏನಿದೆ? ಎಂದು ಪ್ರಶ್ನಿಸಿದರು.
*ನಾನೇ ರಾಜಕೀಯಕ್ಕೆ ಬರುತ್ತೇನೆ ಅಂದುಕೊಂಡಿರಲಿಲ್ಲ:*
ರಾಜಕಾರಣಿಗಳ ಮಕ್ಕಳು ಚಲನಚಿತ್ರ ಕ್ಷೇತ್ರದಲ್ಲಿ ಪ್ಲ್ಯಾಪ್ ಆಗಿ ಈಗ ರಾಜಕಾರಣಕ್ಕೆ ಬಂದಿದ್ದಾರೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಮಾತನಾಡಿದ ಸಚಿವರು, ಜೀವನದಲ್ಲಿ ಅನೇಕ ಬಾರಿ ಸೋಲು, ಗೆಲುವು ಇರುತ್ತದೆ. ಕೆಲವು ಬಾರಿ ಬದಲಾವಣೆ ಆಗುತ್ತದೆ. ನಾನೇ ಒಂದು ಕಾಲದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಇದ್ದೆ. ಸಿನಿಮಾ ಹಂಚಿಕೆದಾರನಾಗಿದ್ದೆ. ಯಾವುದೇ ಸಂದರ್ಭದಲ್ಲಿಯೂ ರಾಜಕೀಯಕ್ಕೆ ಬರುತ್ತೇನೆ ಎಂದುಕೊಂಡಿರಲಿಲ್ಲ. ನಾನೇ ಅಚಾನಕ್ಕಾಗಿ ರಾಜಕೀಯಕ್ಕೆ ಬಂದೆ. ಏಳು ಬೀಳು ಎನ್ನುವುದು ಎಲ್ಲರಿಗೂ ಇರುತ್ತದೆ. ಅವರ ಹೇಳಿಕೆಗೆ ಅಷ್ಟೇನೂ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂದು ತಿಳಿಸಿದರು.
ವಿಧಾನ ಮಂಡಲ ಅಧಿವೇಶನ ವಿಚಾರಕ್ಕೆ ಪ್ರತಿಕ್ರಿಯೆಸಿದ ಸಚಿವರು; ಈಗಿನ ಸರ್ಕಾರದಲ್ಲಿ ಏನೇ ಚರ್ಚೆ ಮಾಡಿದರೂ ಉಪಯೋಗವಿಲ್ಲ. ಕಲ್ಯಾಣ ಕರ್ನಾಟಕಕ್ಕೆ ₹5000 ಕೋಟಿ ಕೊಡುತ್ತೇವೆ, ಕ್ರಿಯಾ ಯೋಜನೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದರು. ಮತ್ತೊಂದು ಬಜೆಟ್ ಬಂದಿದೆ. ಹಳೆಯ ಬಜೆಟ್ ಘೋಷಣೆಗಳಿಗೆ ದಿಕ್ಕಿಲ್ಲ. ಕಲ್ಯಾಣ ಕರ್ನಾಟಕಕ್ಕೆ ಎಷ್ಟು ಕೊಟ್ಟರು? ರಾಜ್ಯದಲ್ಲಿ ಇರುವ ಸಮಸ್ಯೆಗಳಿಗಿಂತ ರಾಜಕೀಯ ಹೇಳಿಕೆಗಳಿಗೆ ಮಹತ್ವ ಹೆಚ್ಚು ಮಹತ್ವ ಕೊಡುತ್ತಿದ್ದಾರೆ. ಜನರ ಕಷ್ಟ ಬಗೆಹರಿವುದಕ್ಕೆ ಸರ್ಕಾರ ಗಮನ ಕೊಡುತ್ತಿಲ್ಲ ಎಂದು ಕೇಂದ್ರ ಕಳವಳ ವ್ಯಕ್ತಪಡಿಸಿದರು.
*ಕ್ಷೇತ್ರ ಮರು ವಿಂಗಡಣೆ ಬಗ್ಗೆ ಈಗಲೇ ಚರ್ಚೆ ಅನಗತ್ಯ:*
ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆ ಬಗ್ಗೆ ಈಗಲೇ ಚರ್ಚೆ ಮಾಡುವ ಅಗತ್ಯ ಇಲ್ಲ. ಇನ್ನು ಸಮಯಾವಕಾಶ ಇದೆ. ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ರಾಜ್ಯಕ್ಕೆ ಅನ್ಯಾಯ ಆಗಬಾರದು. ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ನವರೇ ಆಡಳಿತ ಮಾಡಿಕೊಂಡು ಬಂದಿದ್ದಾರೆ. ಎಲ್ಲಾ ಸೀಟುಗಳೂ ಕಾಂಗ್ರೆಸ್ ಪಕ್ಷಕ್ಕೇ ಇದ್ದವು. ಈಗ ಅವರು ನಿರಂತರವಾಗಿ ಸೋಲುತ್ತಿದ್ದಾರೆ. ಹೀಗಾಗಿ ತಪ್ಪು ಹುಡುಕುತ್ತಿದ್ದಾರೆ. ಯಾವ ಆಧಾರದ ಮೇಲೆ ಕ್ಷೇತ್ರ ವಿಂಗಡಣೆ ಆಗಲಿದೆ ಎಂದು ನೋಡೋಣ ಎಂದು ಅವರು ಹೇಳಿದರು.