ಇತ್ತೀಚಿನ ಸುದ್ದಿ
Missing | ಫರಂಗಿಪೇಟೆ: ಅಪ್ರಾಪ್ತ ವಯಸ್ಸಿನ ಪಿಯು ವಿದ್ಯಾರ್ಥಿ ನಾಪತ್ತೆ ಪ್ರಕರಣ: ಪೊಲೀಸ್ ಹೊರ ಠಾಣೆಗೆ ಗ್ರಾಮಸ್ಥರ ಮುತ್ತಿಗೆ
27/02/2025, 21:34

ಬಂಟ್ವಾಳ(reporterkarnataka.com): ಇಲ್ಲಿಗೆ ಸಮೀಪದ ಫರಂಗಿಪೇಟೆ ಬಳಿಯ ಕಿದೆಬೆಟ್ಟುವಿನ ಪಿಯುಸಿ ವಿದ್ಯಾರ್ಥಿ ನಾಪತ್ತೆಯಾದ ಪ್ರಕರಣ ಸಂಬಂಧಿಸಿದಂತೆ ಸ್ಥಳೀಯ ಗ್ರಾಮಸ್ಥರು ಪೊಲೀಸ್ ಹೊರ ಠಾಣೆಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪದ್ಮನಾಭ ಎಂಬವರ ಪುತ್ರ ದಿಗಂತ್ ನಾಪತ್ತೆಯಾಗಿ ದಿನ ಕಳೆದರೂ ಆತನ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಗದಿರುವ ಕಾರಣ ಸ್ಥಳೀಯ ಗ್ರಾಮಸ್ಥರು ಫರಂಗಿಪೇಟೆಯಲ್ಲಿರುವ ಪೊಲೀಸ್ ಹೊರ ಠಾಣೆಗೆ ಗುರುವಾರ ಬೆಳಿಗ್ಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಮುಂದಿನ 24 ಗಂಟೆಯ ಒಳಗಾಗಿ ಬಾಲಕನನ್ನು ಪತ್ತೆ ಮಾಡಬೇಕು, ತಪ್ಪಿದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸುತ್ತೇವೆ, ಶನಿವಾರ ಫರಂಗಿಪೇಟೆ ಬಂದ್ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಅಡಿಷನಲ್ ಎಸ್ಪಿ ರಾಜೇಂದ್ರ ಅವರ ಜೊತೆ ಪ್ರತಿಭಟನಕಾರರು ಮಾತುಕತೆ ನಡೆಸಿದರು. ಬಳಿಕ ಫರಂಗಿಪೇಟೆಯ ಆಂಜನೇಯ ದೇವಸ್ಥಾನದಲ್ಲಿ ಗ್ರಾಮಸ್ಥರು ಸಭೆ ನಡೆಸಿ ಮಾ.1 ರಂದು ಶನಿವಾರ ಬೆಳಗ್ಗಿನಿಂದ ಫರಂಗಿಪೇಟೆಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಗೊಳಿಸಿ ಪ್ರತಿಭಟನೆ ಮಾಡಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ.
ಈ ಸಂದರ್ಭ ಪ್ರಮುಖರಾದ ಉಮೇಶ್ ಶೆಟ್ಟಿ ಬರ್ಕೆ, ಪ್ರಸಾದ್ ಕುಮಾರ್, ಮನೋಜ್ ಆಚಾರ್ಯ ನಾಣ್ಯ, ಪದ್ಮನಾಭ ಶೆಟ್ಟಿ ಕಿದೆಬೆಟ್ಟು, ಧನರಾಜ್, ಚಂದ್ರಶೇಖರ ಗಾಂಭೀರ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರಿನ ಕಪಿತಾನಿಯೋ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ಅಪ್ರಾಪ್ತ ಬಾಲಕ ದಿಗಂತ್ ಫೆ.25ರಿಂದ ನಾಪತ್ತೆಯಾಗಿದ್ದಾನೆ. ಅಂದು
ಸಂಜೆ ಆಂಜನೇಯ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಬಳಿಕ ನಾಪತ್ತೆಯಾಗಿದ್ದ. ಹುಡುಕಾಟ ನಡೆಸಿದಾಗ ಆತನ ಚಪ್ಪಲಿಗಳು ಹಾಗೂ ಮೊಬೈಲ್ ಮನೆ ಸಮೀಪದ ರೈಲ್ವೇ ಹಳಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.