ಇತ್ತೀಚಿನ ಸುದ್ದಿ
Lokayukta | ಮುಡಾ ಹಗರಣದಲ್ಲಿ ಸಿಎಂಗೆ ಕ್ಲೀನ್ ಚಿಟ್ ನಿರೀಕ್ಷಿತ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ
20/02/2025, 21:20

ಹುಬ್ಬಳ್ಳಿ(reporterkarnataka.com): ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಕ್ಲೀನ್ ಚಿಟ್ ನಿರೀಕ್ಷಿತ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಹಗರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿದಾಗಲೇ ಇದನ್ನು ಹೇಳಿದ್ದೆವು ಎಂದರು.
ಲೋಕಾಯುಕ್ತ ನ್ಯಾಯಾಧೀಶರ ಮೇಲೆ ನಮಗೆ ವಿಶ್ವಾಸ, ಗೌರವವಿದೆ. ಆದರೆ, ಲೋಕಾಯುಕ್ತದಲ್ಲಿ ಹೆಚ್ಚುವರಿ ಎಸ್ಪಿ, ಡಿವೈಎಸ್ಪಿ ಹಂತದ ಅಧಿಕಾರಿಗಳ ಪೋಸ್ಟಿಂಗ್ ಸಿಎಂ ಕೈಯಲ್ಲೇ ಇರುವುದು. ಹಾಗಾಗಿ ತಮ್ಮ ತನಿಖೆಗೆ ಅನುಕೂಲ ಆಗುವವರನ್ನು ನಿಯೋಜಿಸಿಕೊಂಡಿದ್ದಾರೆ ಎಂದು ಸಚಿವ ಜೋಶಿ ಗಂಭೀರ ಆರೋಪ ಮಾಡಿದರು.
ಲೋಕಾಯುಕ್ತ ತನಿಖಾ ಅಧಿಕಾರಿಗಳು ಸಿಎಂಗೆ ಅನುಕೂಲ ಆದಾಗ ವಿಚಾರಣೆಗೆ ಕರೆದಿದ್ದಾರೆ. ರಾತ್ರಿ ವೇಳೆ ಅಧಿಕಾರಿಗಳು ಭೇಟಿ ಆಗಿದ್ದಾರೆ ಎಂದರು.
*ಶುದ್ಧರು ಅನ್ನೋದಾದ್ರೆ ಸಿಬಿಐಗೆ ವಹಿಸಲಿ:* ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅಷ್ಟೊಂದು ಶುದ್ಧ ಹಸ್ತರು ಎಂದಾದರೆ ಸಿಬಿಐ ತನಿಖೆಗೇ ವಹಿಸಲಿ ಎಂದು ಒತ್ತಾಯಿಸಿದ ಜೋಶಿ ಹಿಂದೂ ಇದನ್ನೇ ಹೇಳಿದ್ದೇವೆ. ಆದರೆ, ಸಿಎಂ ಅದನ್ನು ಮಾಡುತ್ತಿಲ್ಲ ಎಂದು ದೂರಿದರು.
ಮುಡಾ ಹಗರಣದಲ್ಲಿ ಪಾರದರ್ಶಕ, ನಿಷ್ಪಕ್ಷಪಾತ ತನಿಖೆ ನಡೆಯಬೇಕಾದರೆ ಸಿಬಿಐ ತನಿಖೆಯೇ ಸೂಕ್ತ. ಸಿದ್ದರಾಮಯ್ಯ ಅವರಿಗೆ ಸಿಬಿಐ ಮೇಲೆ ನಂಬಿಕೆ ಇಲ್ಲದಿದ್ದರೆ ಹೈಕೋರ್ಟ್ ಮಾನಿಟರಿಂಗ್ ಮೂಲಕ ತನಿಖೆಯಾಗಲಿ ಎಂದು ಸಚಿವ ಜೋಶಿ ಹೇಳಿದರು.
*ಪ್ರಯಾಗರಾಜ್ ಮಾಲಿನ್ಯ ಶುದ್ಧವಿದೆ:* ಮಹಾಕುಂಭ ಜರುಗುತ್ತಿರುವ ಪ್ರಯಾಗರಾಜ್ ಅಲ್ಲಿ ಮಾಲಿನ್ಯ ಶುಭ್ರವಾಗೇ ಇದೆ. ನಾನು ಕೂಡ ಶ್ರೀಸಾಮಾನ್ಯ ಜನರ ಮಧ್ಯೆಯೇ ತೀರ್ಥಸ್ನಾನ ಮಾಡಿ ಬಂದಿದ್ದೇನೆ. ಅಷ್ಟೊಂದು ವಿಶಾಲ ಮೇಳದಲ್ಲಿ ಎಲ್ಲೋ ಒಂದು ಕಡೆ ಸ್ವಲ್ಪ ವ್ಯತ್ಯಾಸವಾಗಿದ್ದರೆ ಯೋಗಿ ಆದಿತ್ಯನಾಥ್ ಅವರು ಕ್ರಮ ಕೈಗೊಳ್ಳುವುದಾಗಿ ವಿಧಾನಸಭೆಯಲ್ಲಿ ಉತ್ತರಿಸಿದ್ದಾರೆ ಎಂದು ಜೋಶಿ ಪ್ರತಿಕ್ರಿಯಿಸಿದರು.