ಇತ್ತೀಚಿನ ಸುದ್ದಿ
ಮಹಾಶಿವರಾತ್ರಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಆರಂಭ;! ಜಿಲ್ಲಾ ಹಾಗೂ ತಾಲೂಕಿ ಆಡಳಿತದಿಂದ ನಿರ್ಲಕ್ಷ್ಯ
20/02/2025, 17:52

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಹಾಶಿವರಾತ್ರಿಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ. ಈ ಬಾರಿ ಫೆಬ್ರವರಿ 26ರಂದು ಮಹಾಶಿವರಾತ್ರಿ ನಡೆಯಲಿರುವುದರಿಂದ ಈಗಾಗಲೇ ಹಲವಾರು ಭಕ್ತರ ತಂಡಗಳು ತಮ್ಮ ಪಾದಯಾತ್ರೆಯನ್ನು ಆರಂಭಿಸಿವೆ.
ಬೆಂಗಳೂರಿನಿಂದ ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು ಚಾರ್ಮಾಡಿ ಹಾಗೂ ಕಕ್ಕಿಂಜೆ ಮಾರ್ಗವಾಗಿ ನಡೆದುಕೊಂಡು ಹೋಗಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ಸಮರ್ಪಕ ಸೂಚನಾ ಫಲಕಗಳ ಕೊರತೆ
ಪ್ರತಿವರ್ಷ ಸಾವಿರಾರು ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರೂ, ಈ ಬಾರಿ ಕೂಡ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ತಯಾರಾಗದ ಸ್ಥಿತಿಯಲ್ಲಿದೆ. ಪಾದಯಾತ್ರೆ ಆರಂಭವಾದರೂ ಮೂಡಿಗೆರೆ ಹ್ಯಾಂಡ್ ಪೋಸ್ಟ್ ಮತ್ತು ಘಾಟಿ ಪ್ರದೇಶದಾದ್ಯಂತ ಯಾವುದೇ ಸೂಚನಾ ಫಲಕಗಳು ಹಾಕಲಾಗಿಲ್ಲ. ಪಾದಯಾತ್ರಿಕರಿಗೆ ಮಾರ್ಗದರ್ಶನ ನೀಡಲು ಹಾಗೂ ಅವರ ಅನುಕೂಲಕ್ಕಾಗಿ ಅಗತ್ಯ ಮಾಹಿತಿ ಫಲಕಗಳ ವ್ಯವಸ್ಥೆ ಮಾಡಲು ಆಡಳಿತ ಗಂಭೀರ ಕ್ರಮ ಕೈಗೊಳ್ಳಬೇಕು.
ಭಕ್ತರಿಗೆ ಪಾನೀಯ ಮತ್ತು ತುರ್ತು ಚಿಕಿತ್ಸಾ ವ್ಯವಸ್ಥೆ
ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದ ಮುಂದಿನ ದಿನಗಳಲ್ಲಿ ಪಾದಯಾತ್ರಿಗಳಿಗೆ ಪಾನೀಯ ಮತ್ತು ಉಚಿತ ಸೇವೆಗಳಿಗಾಗಿ ಕೌಂಟರ್‌ಗಳನ್ನು ತೆರೆಯಲು ನಿರ್ಧಾರ ಮಾಡಲಾಗಿದೆ. ಶ್ರೀಮಂತ-ಬಡವ ಭೇದವಿಲ್ಲದೆ ಜನರು ಈ ಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ. ಧರ್ಮಸ್ಥಳದ ದೇವಸ್ಥಾನದ ಮಹಾದ್ವಾರದ ಎದುರುಗಡೆ ಉಚಿತ ಪಾನೀಯ ವ್ಯವಸ್ಥೆ, ಸೂಚನೆ ನೀಡಲು ವಿಚಾರಣೆ ಕಚೇರಿ ಹಾಗೂ ಇತರ ವ್ಯವಸ್ಥೆಗಳು ಇರಲಿವೆ.
ಪಾದಯಾತ್ರೆಯ ದಾರಿಯಲ್ಲಿ ತುರ್ತು ಆರೋಗ್ಯ ಸೇವೆಗಳನ್ನು ಒದಗಿಸಲು ಕೊಟ್ಟಿಗೆಹಾರ, ಬಣಕಲ್, ಬಿದ್ರಹಳ್ಳಿ ಪ್ರದೇಶಗಳಲ್ಲಿ ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯಲು ನಿರ್ಧಾರ ಮಾಡಬೇಕು. ಪಾದಯಾತ್ರಿಕರ ಅನುಕೂಲಕ್ಕಾಗಿ ಸ್ಥಳೀಯ ಸಂಘ-ಸಂಸ್ಥೆಗಳ ಜೊತೆಗೆ ವೈಯಕ್ತಿಕರು ಕೂಡ ಉಚಿತ ಮಜ್ಜಿಗೆ, ಶರಬತ್ತು, ನೀರು ಹಾಗೂ ಆಹಾರದ ವ್ಯವಸ್ಥೆ ಮಾಡುತ್ತಿದ್ದಾರೆ.
ಪರಿಸರ ಸ್ವಚ್ಛತೆ ಹಾಗೂ ಸುರಕ್ಷತೆ ಅವಶ್ಯಕ
ಸಂಖ್ಯೆಯ ಹೆಚ್ಚಳದ ಕಾರಣ ಪಾದಯಾತ್ರಿಗಳು ಚಾರ್ಮಾಡಿಯಿಂದ ಧರ್ಮಸ್ಥಳದವರೆಗೆ ಪ್ರಯಾಣಿಸುವಾಗ ಸ್ವಚ್ಛತೆ ಕಾಪಾಡುವುದು ಅತ್ಯಂತ ಅಗತ್ಯ. ಊಟದ ತಟ್ಟೆಗಳು, ಪ್ಲಾಸ್ಟಿಕ್ ಕವರ್‌ಗಳು ರಸ್ತೆಯುದ್ದಕ್ಕೂ ಬಿದ್ದರೆ ಪರಿಸರ ಮಾಲಿನ್ಯ ಹೆಚ್ಚಾಗಲಿದೆ. ಇದನ್ನು ತಡೆಗಟ್ಟಲು ಪಾಲ್ಗೊಳ್ಳುವ ಭಕ್ತರು ಹಾಗೂ ಸಂಘ-ಸಂಸ್ಥೆಗಳು ಜವಾಬ್ದಾರಿ ವಹಿಸಬೇಕು.
ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ತೀವ್ರವಾಗಿರುವ ಕಾರಣ ಪಾದಯಾತ್ರಿಕರು ಎಚ್ಚರಿಕೆಯಿಂದ ಹಾದು ಹೋಗಬೇಕು. ತಾಲ್ಲೂಕು ಆಡಳಿತ ಪ್ರತಿ ಗ್ರಾಮ ಪಂಚಾಯಿತಿಯ ಕಸದ ವಾಹನಗಳನ್ನು ಬಳಸಿಕೊಂಡು ಕೊಟ್ಟಿಗೆಹಾರ, ಬಣಕಲ್ ಹಾಗೂ ಚಾರ್ಮಾಡಿ ಘಾಟಿನಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಕ್ರಮ ವಹಿಸಬೇಕು.
ಪಾದಯಾತ್ರಿಕರ ಸುರಕ್ಷತೆಗಾಗಿ ಕಠಿಣ ಕ್ರಮ ಅಗತ್ಯ
ಸಾವಿರಾರು ಭಕ್ತರು ಕೊಟ್ಟಿಗೆಹಾರದಲ್ಲಿ ವಿಶ್ರಾಂತಿ ಪಡೆಯುತ್ತಿರುವುದರಿಂದ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಮನ್ವಯಗೊಂಡು ಸೂಕ್ತ ನಿರ್ವಹಣಾ ವ್ಯವಸ್ಥೆ ಮಾಡಬೇಕಾಗಿದೆ.
ಪಾದಯಾತ್ರೆಯು ಶ್ರದ್ಧಾ, ಭಕ್ತಿಯಿಂದ ಕೂಡಿದ ಪರಂಪರೆ. ಇದರ ಯಶಸ್ವಿ ನಿರ್ವಹಣೆಗೆ ಆಡಳಿತ ತಕ್ಷಣ ಎಚ್ಚರಿಕೆ ವಹಿಸಿ, ಅಗತ್ಯ ತಯಾರಿ ನಡೆಸಬೇಕು ಎಂಬುದು ಭಕ್ತಾದಿಗಳ ಮನವಿ.