ಇತ್ತೀಚಿನ ಸುದ್ದಿ
Cultural Festival | ಹುಬ್ಬಳ್ಳಿ: ಫೆ.20, 21ರಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ; ಗಾಯಕ ಕೈಲಾಶ ಖೇರ್ ತಂಡದಿಂದ ಗಾನ ಸುಧೆ
19/02/2025, 23:41

ಹುಬ್ಬಳ್ಳಿ(reporterkarnataka.com): ಧಾರವಾಡ ಸಂಸದ, ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಪ್ರಭಾವಿ ರಾಜಕಾರಣಿ, ಅಪ್ಪಟ ಭಾರತೀಯ ಸಂಸ್ಕೃತಿ ಮತ್ತು ದೇಸಿ ಕ್ರೀಡೆಯ ಅಭಿಮಾನಿ, ಪ್ರೇಮಿ.ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸತತ 5ನೇ ಬಾರಿ ಗೆಲುವು ಸಾಧಿಸಿ ಹೊಸ ಇತಿಹಾಸ ಬರೆದಿರುವ ಸಚಿವರು ಸ್ವಕ್ಷೇತ್ರದಲ್ಲಿ ಯಾವತ್ತೂ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ರೂವಾರಿ ಆಗಿದ್ದಾರೆ. ಅನೇಕ ವರ್ಷಗಳಿಂದ ಆಯೋಜಿಸುತ್ತಾ ಬಂದಿರುವ “ಸಂಸದರ ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವ”ವೇ ಇದಕ್ಕೆ ನಿದರ್ಶನ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಚಿವರು ಪ್ರತಿ ವರ್ಷವೂ ಈ ಮಹೋತ್ಸವ ಆಯೋಜಿಸಿ ಪ್ರೇರೇಪಿಸುತ್ತಿದ್ದಾರೆ. ಅಂತೆಯೇ ಈ ಬಾರಿಯೂ ಫೆ.20, 21ರಂದು “ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವ” ಜರುಗುತ್ತಿದೆ.
“ಸಂಸದರ ಸಾಂಸ್ಕೃತಿಕ ಮಹೋತ್ಸವ-25″ರ ಆಕರ್ಷಣೆಯಾಗಿ ಫೆ. 20ರಿಂದ ಎರಡು ದಿನಗಳ ಕಾಲ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಮೆರುಗು ತರಲಿದೆ.
ಸತತ ಆರನೇ ಬಾರಿ ಮಹೋತ್ಸವಕ್ಕೆ ಮೆರುಗು ನೀಡುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಹುಬ್ಬಳ್ಳಿ ಹೊರವಲಯದ ಕುಸಗಲ್ಲ ರಸ್ತೆ ಬಳಿ ಇರುವ ಆಕ್ಸ್‌ಫರ್ಡ್ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಬೆಳಗ್ಗೆ 11 ಗಂಟೆಗೆ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಲಿದ್ದಾರೆ. ವಿವಿಧ ದೇಶಗಳ ಗಾಳಿಪಟ ಕಲಿಗಳು ಕಲರ್ ಕಲರ್ ಅತ್ಯಾಕರ್ಷಕ ವಿನ್ಯಾಸದ ಗಾಳಿಪಟಗಳನ್ನು ಹಾರಿಸಿ ಆಕರ್ಷಿಸಲಿದ್ದಾರೆ.
ಇದಕ್ಕೂ ಮುನ್ನ ಬೆಳಗ್ಗೆ 10 ಗಂಟೆಗೆ ದೇಸಿ ಕ್ರೀಡಾಕೂಟ ಉದ್ಘಾಟನೆ ಮತ್ತು ಆಹ್ವಾನಿತ ಪೈಲ್ವಾನರ ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆ ಇದ್ದು, ಶಾಸಕ ಅರವಿಂದ ಬೆಲ್ಲದ್ ಚಾಲನೆ ನೀಡುವರು.
ಅಲ್ಲದೇ, ಬೆಳಗ್ಗೆ 11 ಗಂಟೆಗೆ ಡ್ರಾಯಿಂಗ್, ಗಾಳಿಪಟ ತಯಾರಿಕೆ ಸ್ಪರ್ಧೆ, ಗ್ರೂಪ್ ಡ್ಯಾನ್ಸ್, ಯೋಗ, ದೇಸಿ ಕ್ರೀಡೆ ಹಾಗೂ ಮಹಿಳೆಯರಿಗೆ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ.
*ಪದ್ಮಶ್ರೀ ಪುರಸ್ಕೃತ ಗಾಯಕ ಕೈಲಾಶ ಖೇರ್ ತಂಡದಿಂದ ಗಾನ ಸುಧೆ:* ಫೆ.20ರಂದು ಸಂಗೀತ ಪ್ರಿಯರಿಗೆ ವೈವಿಧ್ಯಮಯ “ಸಂಗೀತ ಸಂಜೆ” ರಸದೌತಣವಿದ್ದು, ಬಾಲಪ್ರತಿಭೆ ಹುಬ್ಬಳ್ಳಿಯ ಗಾನ ಕೋಗಿಲೆ ಎಂದೇ ಖ್ಯಾತಿಯಾದ ಮಹನ್ಯಾ ಪಾಟೀಲ ಹಾಡು ಹಾಡಿ ಮನರಂಜಿಸಲಿದ್ದಾಳೆ. ಇದಕ್ಕೂ ಮುನ್ನ ಕಾಶ್ಮೀರಿ ಭಾರತೀಯ ಪಾಪ್-ರಾಕ್ ಸಂಗೀತಗಾರ, ಫಿಲ್ಮಫೇರ್ ಪ್ರಶಸ್ತಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂಗೀತ ಮಾಂತ್ರಿಕ ಗಾಯಕ ಕೈಲಾಶ ಖೇರ್ ತಂಡದಿಂದ ಗಾನ ಸುಧೆ ಇದೆ.
ಸಂಜೆ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಕೇಂದ್ರ ಸಚಿವ ಪ್ರಲ್ಪಾದ ಜೋಶಿ ಚಾಲನೆ ನೀಡಲಿದ್ದಾರೆ. ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಎಂ.ಆರ್. ಪಾಟೀಲ್, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಎಸ್.ವಿ.ಸಂಕನೂರ, ಮಹಾನಗರ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ, ಉಪಮೇಯರ್ ದುರ್ಗಮ್ಮ ಬಿಜವಾಡ ಹಾಗೂ ಪಾಲಿಕೆ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
*21ರಂದು ರಘು ದೀಕ್ಷಿತ್ ತಂಡದಿಂದ ಸಂಗೀತ ರಸದೌತಣ:*
ಶುಕ್ರವಾರ, ಫೆ.21ರಂದು ಸಂಜೆ ಶಿಶುನಾಳ ಶರೀಫರ ಹಾಡುಗಳಿಗೆ ಆಧುನಿಕ ಸಂಗೀತದ ನವ ಸ್ಪರ್ಶ ನೀಡಿರುವ ಗಾಯಕ, ಸಂಗೀತ ನಿರ್ದೇಶಕ, ಗೀತೆ ರಚನೆಗಾರ, ಹೊಸ ತಲೆಮಾರಿನ ವಿಶಿಷ್ಟ ಸಂಗೀತ ಸಂಯೋಜಕ ಗಾಯಕ, ಇಂಡಿಪಾಪ್ ಧಾಟಿಯಲ್ಲಿ ಯುವಜನರನ್ನು ಆಕರ್ಷಿಸುತ್ತಿರುವ ರಘು ದೀಕ್ಷಿತ್ ಮತ್ತು ತಂಡದಿಂದ ಸಂಗೀತ ರಸದೌತಣವಿದೆ.
*ಸ್ಥಳೀಯ ಪ್ರತಿಭೆಗಳಿಗೂ ಇದೆ ಅವಕಾಶ:* ಎರಡೂ ದಿನಗಳ ಈ ಸಂಸದರ ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಎಲ್ಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕೆಂದು ಸಚಿವ ಪ್ರಲ್ಹಾದ ಜೋಶಿ ಕೋರಿದ್ದಾರೆ.