ಇತ್ತೀಚಿನ ಸುದ್ದಿ
ಜಿದ್ದಾ ವಿಮಾನ ನಿಲ್ದಾಣ: ಊರಿಗೆ ಬರಲು ಏರ್ ಪೋರ್ಟ್ ಆಗಮಿಸಿದ ಬೆಳ್ತಂಗಡಿ ನಿವಾಸಿ ಹೃದಯಾಘಾತಕ್ಕೆ ಬಲಿ
14/02/2025, 13:18

ಜಿದ್ದಾ(reporterkarnataka.com): ಊರಿಗೆ ಮರಳಲು ಜಿದ್ದಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬೆಳ್ತಂಗಡಿಯ ಸಂಜಯನಗರ ನಿವಾಸಿ
ಹಿದಾಯತ್ ಅವರು ಜಿದ್ದಾ ವಿಮಾನ ನಿಲ್ದಾಣದಲ್ಲೇ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ದಾರುಣ ಘಟನೆ ಗುರುವಾರ ರಾತ್ರಿ ನಡೆದಿದೆ.
ಜಿದ್ದಾದಿಂದ ರಾತ್ರಿ 10:30ರ ವಿಮಾನದಲ್ಲಿ ಹೊರಟು ಹಿದಾಯತ್ ಅವರು ಶುಕ್ರವಾರ ಬೆಳಗಿನ ಜಾವ ಮಂಗಳೂರು ವಿಮಾನ ನಿಲ್ದಾಣ
ತಲುಪುವವರಿದ್ದರು. ಈ ಹಿನ್ನೆಲೆಯಲ್ಲಿ ಹಿದಾಯತ್ ತನ್ನ ಸ್ನೇಹಿತ ರಫೀಕ್ ಎಂಬವರಿಗೆ ಕರೆ ಮಾಡಿ ಶುಕ್ರವಾರ ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತನ್ನ ಕಾರನ್ನು ತರಲು ಹೇಳಿದ್ದರು. ಆದರೆ ಹಿದಾಯತ್ ಅವರು ಊರಿಗೆ ಬರಲು ಗುರುವಾರ ರಾತ್ರಿ ಜಿದ್ದಾ ವಿಮಾನ ನಿಲ್ದಾಣಕ್ಕೆ ಕಾರಲ್ಲಿ ಬಂದು ತಲುಪಿದ್ದಂತೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ತಕ್ಷಣ ಅವರನ್ನು ಅಲ್ಲಿನ ವಿಮಾನ ನಿಲ್ದಾಣದ ಪಕ್ಕದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಉತ್ತಮ ಗಾಯಕರಾಗಿದ್ದ ಅವರು ಉದ್ಯೋಗ ನಿಮಿತ್ತ ಅವರು ಬಹರೈನ್ ಗೆ ತೆರಳಿದ್ದರು. ಬಳಿಕ ಸೌದಿ ಅರೇಬಿಯಾಕ್ಕೆ ತೆರಳಿದ್ದು ಕಾರ್ಗೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಮೃತರು ತಂದೆ , ತಾಯಿ, ಪತ್ನಿ ಹಾಗೂ ಒಂದು ಗಂಡು,ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.