ಇತ್ತೀಚಿನ ಸುದ್ದಿ
ಮಂಗಳೂರು: ನೇಶನಲ್ ಈಜು ಚಾಂಪಿಯನ್ 35 ವರ್ಷಗಳಿಂದಲೂ ಸ್ವಿಮ್ಮಿಂಗ್ ಪೂಲ್ ಲೈಫ್ ಗಾರ್ಡ್!
13/02/2025, 15:54
![](https://reporterkarnataka.com/wp-content/uploads/2025/02/IMG-20250213-WA0006-1024x653.jpg)
ಮನೋಜ್ ಕೆ.ಬೆಂಗ್ರೆ ಮಂಗಳೂರು
info.reporterkarnataka@gmail.com
ಕರ್ನಾಟಕ ರಾಜ್ಯಕ್ಕೆ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಪ್ರಪ್ರಥಮವಾಗಿ ಬಂಗಾರದ ಪದಕ ಗೆದ್ದುಕೊಟ್ಟಿರುವ ಮಂಗಳೂರು ಬೆಂಗ್ರೆಯ ಪುಂಡಲೀಕ ಖಾರ್ವಿಯವರು ‘ಈಜು ಪಟ್ಟು’ಗಳ ಆಗರ. ಈಗ ವಯಸ್ಸು 65 ಆದರೂ ಸ್ವಿಮ್ಮಿಂಗ್ ಪೂಲ್ ನಲ್ಲಿ ಲೈಫ್ ಗಾರ್ಡ್ ಆಗಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ ಈ ನೇಶನಲ್ ಈಜು ಚಾಂಪಿಯನ್. ಜೊತೆಗೆ ಮಾಸ್ಟರ್ಸ್ ಈಜು ಸ್ಪರ್ಧೆಗಳಲ್ಲಿಯೂ ನಿರಂತರ ಭಾಗವಹಿಸುತ್ತಾ ಪದಕ ಬಾಚುತ್ತಿದ್ದಾರೆ ಈ ಈಜು ಮೇಷ್ಟ್ರು!
*ಕರುನಾಡಿಗೆ ಮೊತ್ತ ಮೊದಲ ಸ್ವರ್ಣ:* ಹೊಸದಿಲ್ಲಿಯಲ್ಲಿ 1976ರ ಮೇ ತಿಂಗಳಿನಲ್ಲಿ ನಡೆದ ಅಖಿಲ ಭಾರತ ಗ್ರಾಮೀಣ ಈಜು ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಪುಂಡಲೀಕ ಖಾರ್ವಿ, 100 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ ಚಿನ್ನ ಗೆದ್ದಿದ್ದರು. ಇದು ಈ ವಿಭಾಗದಲ್ಲಿ ಕರ್ನಾಟಕ ಗೆದ್ದ ಚೊಚ್ಚಲ ಸ್ವರ್ಣ ಪದಕವೂ ಆಗಿತ್ತು.
ಈ ಸ್ಪರ್ಧೆಯಲ್ಲಿ ಆಗ 14ರ ಪೋರನಾಗಿದ್ದ ಪುಂಡಲೀಕ, 200 ಮೀಟರ್ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಬೆಳ್ಳಿ ಪದಕ, 400 ಮೀಟರ್ ವೈಯಕ್ತಿಕ ಮಿಡ್ಲೇಯಲ್ಲಿ ಬೆಳ್ಳಿ ಹಾಗೂ 400 ಮೀಟರ್ ಫ್ರೀ ಸ್ಟೈಲ್ ರಿಲೇಯಲ್ಲಿ ಕಂಚಿನ ಪದಕ ಗೆದ್ದು ವೈಯಕ್ತಿಕ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
ಒಂದು ಬಾರಿ ರಾಷ್ಟ್ರೀಯ ಚಾಂಪಿಯನ್ ಮತ್ತು 3 ಬಾರಿ ರಾಜ್ಯ ಚಾಂಪಿಯನ್ ಆಗಿಯೂ ಅಂದು ಮಿಂಚಿದ್ದರು.
*ನೂರಾರು ಪದಕಗಳ ಸರದಾರ:* ಪುಂಡಲೀಕ ಖಾರ್ವಿ ಸ್ಪರ್ಧಾತ್ಮಕ ಈಜು ಜಗತ್ತಿಗೆ ಕಾಲಿರಿಸಿ, 50 ವರ್ಷಗಳೇ ಕಳೆದಿದ್ದು, ಅವರು ಈ ಅವಧಿಯಲ್ಲಿ 100ಕ್ಕೂ ಅಧಿಕ ಪದಕಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ ಮಾಸ್ಟರ್ಸ್ ಈಜು ಚಾಂಪಿಯನ್‌ಷಿಪ್ ಗಳಲ್ಲಿ ಜಯಿಸಿದ ಪದಕಗಳೂ ಸೇರಿವೆ.
*ಜೀವ ರಕ್ಷಣೆಯೇ ಜೀವನ:* ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದಲ್ಲಿ 35 ವರ್ಷಗಳಿಂದಲೂ ಜೀವ ರಕ್ಷಕರಾಗಿ ಹಾಗೂ ತರಬೇತಿದಾರರಾಗಿ ತಾತ್ಕಾಲಿಕ ನೆಲೆಯಲ್ಲಿ ಪುಂಡಲೀಕ ಖಾರ್ವಿ ದುಡಿಯುತ್ತಿದ್ದಾರೆ.
ಪತ್ನಿ ಸುಮನಾ ಖಾರ್ವಿ ಹಾಗೂ ಮಗಳು ಸುಪ್ರೀತಾ ಖಾರ್ವಿ ಅವರೂ ರಾಜ್ಯ ಮತ್ತು ರಾಷ್ಟ್ರೀಯ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ, ಪದಕಗಳನ್ನು ಗೆಲ್ಲುತ್ತಿದ್ದು, ಇಡೀ ಕುಟುಂಬವೇ “ಈಜು ಪ್ರೀತಿ-ಖುಷಿ” ಯಲ್ಲಿ ತೇಲಾಡುತ್ತಿದೆ.
ಬೆಂಗ್ರೆ ವಿದ್ಯಾರ್ಥಿ ಸಂಘ ಹಾಗೂ ಬೆಂಗ್ರೆ ಶ್ರೀ ವೀರ ಹನುಮಾನ್ ವ್ಯಾಯಾಮ ಶಾಲೆಯ ಸದಸ್ಯರಾಗಿರುವ ಪುಂಡಲೀಕ ಖಾರ್ವಿ ತಾಲೀಮು- ಕಸರತ್ತುಗಳಲ್ಲಿ ನಿಪುಣರೂ ಹೌದು.
*ಸರಕಾರ ಕೃಪಾ ದೃಷ್ಟಿ ಬೀರಲಿ:* ಈಜು ಕ್ರೀಡೆಯಲ್ಲಿ ಕನ್ನಡ ನಾಡಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ ಕಡಲ ತಡಿಯ ಈ ಬಡ ಈಜುಗಾರನ ಸಾಧನೆಯನ್ನು ಗುರುತಿಸಿ ಮಾನ್ಯ ಮುಖ್ಯಮಂತ್ರಿಗಳು, ಸಂಬಂಧಿಸಿದ ಸಚಿವರು, ಶಾಸಕರು, ಜನಪ್ರತಿನಿಧಿಗಳು ಸೂಕ್ತ ನೆರವು, ಪುರಸ್ಕಾರ ನೀಡಲು ಮುಂದಾಗಬೇಕಿದೆ.