ಇತ್ತೀಚಿನ ಸುದ್ದಿ
ಕೇಂದ್ರ ಬಿಜೆಪಿ ನಾಯಕರ ರಾಜಕೀಯದಿಂದ ರಾಯಚೂರು ಏಮ್ಸ್ ಅನಗತ್ಯ ವಿಳಂಬ: ಸಚಿವ ಭೋಸರಾಜು ಆರೋಪ
05/02/2025, 20:00
ಬೆಂಗಳೂರು(reporterkarnataka.com): ಕಳೆದ 1000 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ, ಅನೇಕ ಬಾರಿ ಮುಖ್ಯಮಂತ್ರಿಗಳು, ಮಂತ್ರಿಗಳು ಹಾಗೂ ಜನಪ್ರತಿನಿಧಿಗಳು ಮನವಿ ಮಾಡಿದರೂ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿಲ್ಲ. ಅಲ್ಲದೇ, ಎನ್‌ಹೆಚ್‌ಎಂ ಹಾಗೂ ಪಿಎಂ – ಅಭಿಮ್ ಯೋಜನೆಯ ಅಡಿಯಲ್ಲಿ ಆರೋಗ್ಯ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುವಂತೆ ಪತ್ರ ಬರೆಯುವ ಮೂಲಕ ಕೇಂದ್ರ ಸರಕಾರದ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಹೇಳಿದರು.
ಇಂದು ಬೆಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟೀಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗಕ್ಕೆ ನಿರಂತರವಾಗಿ ಅನ್ಯಾಯವೆಸಗುತ್ತಿರುವ ಬಿಜೆಪಿ ಕೇಂದ್ರ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
ರಾಯಚೂರಿನ ಮೇಲೆ ಕೇಂದ್ರ ಸರಕಾರದಿಂದ ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಗಧಾಪ್ರಹಾರ ನಡೆಸಲಾಗುತ್ತಿದೆ. ಸಂವಿಧಾನದ ಆಶಯದಂತೆ ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿ ರಾಜ್ಯಕ್ಕೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಒದಗಿಸುವುದು ಕೇಂದ್ರ ಸರಕಾರದ ಆದ್ಯ ಕರ್ತವ್ಯ. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಒಕ್ಕೂಟ ವ್ಯವಸ್ಥೆಯೇ ತಲೆಕೆಳಗಾಗಿದೆ. ಕೇಂದ್ರ ಸರಕಾರ ರಾಜ್ಯಗಳ ಮನವಿಗಳಿಗೆ ಸರಿಯಾಗಿ ಸ್ಪಂದಿಸದೇ ಸಂವಿಧಾನದ ಆಶಯಗಳ ವಿರುದ್ದ ಕೆಲಸ ಮಾಡುತ್ತಿದೆ.
2003 ರಲ್ಲಿ ಜಾರಿಯಾದ PMSSY ಪ್ರಧಾನ ಮಂತ್ರಿ ಸ್ವಸ್ಥ್ಯ ಸುರಕ್ಷಾ ಯೋಜನೆ, ಆರೋಗ್ಯ ಕ್ಷೇತ್ರದಲ್ಲಿ ಪ್ರಾದೇಶಿಕ ಅಸಮತೋಲನೆ ನಿವಾರಿಸುವ ನಿಟ್ಟಿನಲ್ಲಿ ಜಾರಿಯಾದ ಯೋಜನೆ. ದೇಶದ ವಿವಿಧ ಭಾಗಗಳಲ್ಲಿ ಏಮ್ಸ್ ಆಸ್ಪತ್ರೆಗಳನ್ನು ಪ್ರಾರಂಭಿಸುವುದು ಈ ಯೋಜನೆಯ ಪ್ರಮುಖ ಉದ್ದೇಶಗಳಲ್ಲಿ ಒಂದು. ಈ ಯೋಜನೆಯ ಅಡಿಯಲ್ಲಿ ಈಗಾಗಲೇ ದೇಶದ 22 ರಾಜ್ಯಗಳಲ್ಲಿ ಕೇಂದ್ರ ಸರಕಾರ ಏಮ್ಸ್‌ಗಳನ್ನು ಮಂಜೂರುಗೊಳಿಸಿದೆ.
ಇದೇ ಯೋಜನೆ ಅಡಿಯಲ್ಲಿ ನಮ್ಮ ರಾಜ್ಯದ ರಾಯಚೂರಿಗೆ ಏಮ್ಸ್ ಮಂಜೂರುಗೊಳಿಸುವಂತೆ ಹಲವಾರು ಬಾರಿ ಮುಖ್ಯಮಂತ್ರಿಗಳು, ಮಂತ್ರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಮನವಿಗಳನ್ನು ಸಲ್ಲಿಸಿವೆ. ಹತ್ತಕ್ಕೂ ಹೆಚ್ಚು ಬಾರಿ ನಮ್ಮ ಸರಕಾರ ಕೇಂದ್ರ ಸರಕಾರಕ್ಕೆ ವಿವಿಧ ಹಂತಗಳಲ್ಲಿ ಮನವಿ ಸಲ್ಲಿಸಿದೆ. 22 ಆಗಸ್ಟ್ 2023 ರಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ನನ್ನ ನೇತೃತ್ವದ ನಿಯೋಗ ಕೇಂದ್ರ ಆರೋಗ್ಯ ಸಚಿವರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ಆ ನಂತರ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸಂಧರ್ಭದಲ್ಲಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೂ ಪತ್ರ ಬರೆದು ಮನವಿ ಸಲ್ಲಿಸಿದ್ದರು. ಆದರೂ, ಕರ್ನಾಟಕ ರಾಜ್ಯ ಅದರಲ್ಲೂ ಹಿಂದುಳಿದ ಜಿಲ್ಲೆಯಾಗಿರುವ ಭಾರತೀಯ ಸಂವಿಧಾನ ಆರ್ಟಿಕಲ್ 371 ಜೆ ಅಡಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವ ಪ್ರಸ್ತಾವನೆಗೆ ಕೇಂದ್ರ ವಿತ್ತ ಮಂತ್ರಾಲಯ ಒಪ್ಪಿಗೆಯನ್ನು ನೀಡಲು ಹಿಂಜರಿದಿದೆ.
ಈ ವಿಷಯವನ್ನ ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರ ಆರೋಗ್ಯ ಸಚಿವರಾಗಿರುವ ಜಗತ್ ಪ್ರಕಾಶ್ ನಡ್ಡಾ ಅವರು 14 ನೇ ಜನವರಿ 2025 ರಂದು ಸಿಎಂ ಸಿದ್ದರಾಮಯ್ಯನವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಹಾಗೆಯೇ, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರವನ್ನು ತಿಳಿಸದೇ, ಎನ್‌ಹೆಚ್‌ಎಂ NHM ಅಡಿಯಲ್ಲಿ ನೀಡಲಾಗುತ್ತಿರುವ ಅನುದಾನದದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಚಿಕಿತ್ಸಾ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ .
ಕೇಂದ್ರ ಸರಕಾರದ ಹಲವಾರು ಕಾರ್ಯಕ್ರಮಗಳನ್ನು ಈ ಯೋಜನೆಯ ಅಡಿಯಲ್ಲಿ ಅನುಷ್ಠಾನಗೊಳಿಸಬೇಕಾಗಿದೆ. ಅಲ್ಲದೇ, ಕೇವಲ ಇಷ್ಟೇ ಅನುದಾನದಲ್ಲಿ ನಾವು ರಾಜ್ಯದ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವುದರ ಜೊತೆಯಲ್ಲೇ ಐಮ್ಸ್‌ನಂತಹ ಸಂಸ್ಥೆಯನ್ನು ರಾಯಚೂರಿನಲ್ಲಿ ಸ್ಥಾಪಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.
PMSSY ಅಡಿಯಲ್ಲಿ ಇತರ ರಾಜ್ಯಗಳಿಗೆ ಈಗಾಗಲೇ 22 ಏಮ್ಸ್‌ಗಳನ್ನು ಮಂಜೂರು ಮಾಡಿರುವ ಕೇಂದ್ರ ಸರಕಾರ, NHM ಮತ್ತು PM-ABHIM ಯೋಜನೆಗಳ ಅಡಿಯಲ್ಲಿ ಪರ್ಯಾಯ ಆರೋಗ್ಯ ಚಿಕಿತ್ಸಾ ಕಾರ್ಯಕ್ರಮಗಳನ್ನು ಯೋಜಿಸುವಂತೆ ಕರ್ನಾಟಕ ರಾಜ್ಯವನ್ನು ಕೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಕರ್ನಾಟಕದ ಬಗ್ಗೆ ಈ ಮಲತಾಯಿ ವರ್ತನೆ ಏಕೆ? ಏಮ್ಸ್ ಕೇವಲ ಆಸ್ಪತ್ರೆಯಲ್ಲ – ಇದು ಪ್ರಮುಖ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯಾಗಿದೆ ಮತ್ತು ರಾಯಚೂರು ಏಮ್ಸ್ ಪಡೆಯಲು ಎಲ್ಲಾ ರೀತಿಯಲ್ಲೂ ಅರ್ಹವಾಗಿದೆ. ಕನ್ನಡಿಗರ ಕಡೆಗಿನ ಈ ತಾರತಮ್ಯ ಸರಿಯಲ್ಲ. ಇತರೆ ರಾಜ್ಯಗಳಲ್ಲಿ ಮಂಜೂರು ಮಾಡಿರುವ ರೀತಿಯಲ್ಲಿಯೇ ರಾಜ್ಯದ ರಾಯಚೂರಿಗೂ ಏಮ್ಸ್ ಮಂಜೂರುಗೊಳಿಸುವಂತೆ ಆಗ್ರಹಿಸಿದರು.
ಅದರಲ್ಲೂ ಕೇಂದ್ರ ಸರಕಾರದ ಮಂತ್ರಿಗಳಾಗಿರುವ ನಮ್ಮ ರಾಜ್ಯದ ಮುಖಂಡರುಗಳು ಕೇವಲ ರಾಜಕೀಯ ಮಾಡಲು ಹೆಚ್ಚಿನ ಗಮನ ನೀಡುತ್ತಿದ್ದಾರೆಯೇ ಹೊರತು, ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆಯಾದ ರಾಯಚೂರಿಗೆ ಏಮ್ಸ್ ತರುವಂತಹ ಯಾವುದೇ ಜವಾಬ್ದಾರಿ ಇವರಿಗೆ ಇಷ್ಟವಿಲ್ಲ. ಕಲ್ಯಾಣ ಕರ್ನಾಟಕ ಭಾಗದ ಐದು ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡಿರುವ ಬಿಜೆಪಿ, ಅಲ್ಲಿನ ಜನರ ಮೇಲೆ ಸೇಡು ತೀರಿಸಿಕೊಳ್ಳುವಂತೆ ಭಾಸವಾಗುತ್ತಿದೆ. ಕೇಂದ್ರ ಸರಕಾರ ಶೀಘ್ರ ಏಮ್ಸ್ ಮಂಜೂರು ಮಾಡದೇ ಇದ್ದಲ್ಲಿ ಕರ್ನಾಟಕ ರಾಜ್ಯದ ಜನರು ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು, ದೀಪಕ್ ತಿಮಯ್ಯ, ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
#kpccpresident#kpccoffice#ministerbosaraju#karnatakacm#cmsiddaramaia#karnatakagovt