ಇತ್ತೀಚಿನ ಸುದ್ದಿ
ರೈತರ ಖಾತೆಗೆ 48 ತಾಸಲ್ಲೇ ಬೆಂಬಲ ಬೆಲೆ ನೇರ ಜಮೆ; ಸಂಸತ್ ನಲ್ಲಿ ಆಹಾರ, ಗ್ರಾಹಕ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ
04/02/2025, 22:32
ನವದೆಹಲಿ(reporterkarnataka.com): ರೈತರ ಖಾತೆಗೆ 48 ಗಂಟೆಗಳಲ್ಲೇ ಬೆಂಬಲ ಬೆಲೆ ಖರೀದಿ ಹಣ ನೇರ ಜಮೆಯಾಗುತ್ತದೆ. ವಿಳಂಬವಾಗುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸಂಸತ್ ಅಧಿವೇಶನದಲ್ಲಿ ಇಂದು ಬಿಹಾರದ ಸಂಸದ ಉಪೇಂದ್ರ ಕುಶ್ವಾ ಅವರ ಪ್ರಶ್ನೆಗೆ ಉತ್ತರಿಸಿ, ರೈತರಿಂದ ಬೆಂಬಲ ಬೆಲೆಯಲ್ಲಿ ಧಾನ್ಯ ಖರೀದಿಸಿದ ಮೇಲೆ ಅಷ್ಟೇ ತ್ವರಿತವಾಗಿ ಅವರ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದೆ. ಇದರಲ್ಲಿ ಯಾವುದೇ ರೀತಿ ಲೋಪವಾಗುತ್ತಿಲ್ಲ ಎಂದು ಹೇಳಿದರು.
ಬೆಂಬಲ ಬೆಲೆಯಲ್ಲಿ ಧಾನ್ಯ ಖರೀದಿ DCP ಮತ್ತು Non DCP ಎರಡು ರೀತಿಯ ವ್ಯವಸ್ಥೆಯಲ್ಲಿ ನಡೆಯುತ್ತಿದೆ. Non DCP ವ್ಯವಸ್ಥೆಯುಳ್ಳ ರಾಜ್ಯಗಳಲ್ಲಿ ಸಹ ತಕ್ಷಣವೇ ರೈತರ ಖಾತೆಗೆ ಹಣ ಜಮೆ ಮಾಡಲು ಆಯಾ ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದರು.
ರೈತರಿಗೆ ತೊಂದರೆ ಆಗಬಾರದು ಎಂಬುದು ಪ್ರಧಾನಮಂತ್ರಿ ಮೋದಿಜಿ ಅವರ ಆಶಯವಾಗಿದೆ. ಅದರಂತೆ ಕೇಂದ್ರ ಸರ್ಕಾರ FCI ಮತ್ತು ಇತರೆ ಏಜೆನ್ಸಿ, ರಾಜ್ಯ ಸರ್ಕಾರಗಳ ಮೂಲಕ ಗೋಧಿ ಸೇರಿದಂತೆ ಬೆಂಬಲ ಬೆಲೆಯಲ್ಲಿ ಧಾನ್ಯ ಖರೀದಿ ಮಾಡುತ್ತಿದೆ. ಅಷ್ಟೇ ತ್ವರಿತವಾಗಿ ರೈತರ ಖಾತೆಗೆ ನೇರ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ರೈತರ ಸಬಲೀಕರಣ ನಮ್ಮ ಸರ್ಕಾರದ ಬದ್ಧತೆಯಾಗಿದ್ದು, ಬೆಲೆ ಕುಸಿತದ ವೇಳೆ ಬೆಂಬಲ ಬೆಲೆಯಲ್ಲಿ ಧಾನ್ಯ ಖರೀದಿಸಿ ರೈತರಿಗೆ ಆರ್ಥಿಕ ಚೈತನ್ಯ ನೀಡುವ ಮೂಲಕ ಅವರ ಹಿತ ಕಾಪಾಡುವ ಕೆಲಸ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆದಿದೆ. ಇದರಲ್ಲೇನೂ ವ್ಯತ್ಯಾಸ, ಲೋಪವಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಬೆಂಬಲ ಬೆಲೆಯಲ್ಲಿ ಧಾನ್ಯ ಖರೀದಿ ಮತ್ತು ರೈತರ ಖಾತೆಗೆ ನೇರ ಹಣ ವರ್ಗಾವಣೆಯಲ್ಲಿ ಮಧ್ಯವರ್ತಿಗಳಿಗೆ ಅವಕಾಶವೇ ಇಲ್ಲ. ಇಂಥ ಯಾವುದೇ ದೂರುಗಳು ಬಂದಿಲ್ಲ. ತಮ್ಮ ಗಮನಕ್ಕೆ ಬಂದರೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.