ಇತ್ತೀಚಿನ ಸುದ್ದಿ
ಜನವರಿ 17 ರಿಂದ ಕನಾ೯ಟಕ ಕ್ರೀಡಾಕೂಟ: 25 ವಿಭಾಗಗಳಲ್ಲಿ ಸ್ಪರ್ಧೆ; 3247 ಕ್ರೀಡಾಪಟುಗಳು ಭಾಗಿ
12/01/2025, 13:46
ಮಂಗಳೂರು( reporterkarnataka.com): ಜನವರಿ 17 ರಿಂದ 23ರವರೆಗೆ ನಡೆಯುವ ಕರ್ನಾಟಕ ಕ್ರೀಡಾಕೂಟದಲ್ಲಿ ಒಟ್ಟು 25 ವಿವಿಧ ಕ್ರೀಡೆಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ ತಿಳಿಸಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಕ್ರೀಡಾಕೂಟ -2025ರ ಅಂಗವಾಗಿ ವಿವಿಧ ಶಿಕ್ಷಣ ಸಂಸ್ಥೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
3247 ಕ್ರೀಡಾಪಟುಗಳು ಹಾಗೂ 599 ತಾಂತ್ರಿಕ ಅಧಿಕಾರಿಗಳು ಮತ್ತು ಸಂಘಟಕರ ತಂಡ ಸೇರಿದಂತೆ ಒಟ್ಟು 4250 ಜನ ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಜನವರಿ 17ರಂದು ಸಂಜೆ 5 ಗಂಟೆಗೆ ನಗರದ ಮಂಗಳ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರೀಡಾಕೂಟ – 2025 ರ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.
ಮಂಗಳೂರಿನಲ್ಲಿ ಬ್ಯಾಡ್ಮಿಂಟನ್ ಬಾಸ್ಕೆಟ್ ಬಾಲ್, ಪೆನ್ಸಿಂಗ್, ಫುಟ್ಬಾಲ್, ಹ್ಯಾಂಡ್ ಬಾಲ್, ಕೋಕೋ, ನೆಟ್ ಬಾಲ್, ಈಜು, ಟೇಕ್ವಾಂಡೋ, ವಾಲಿಬಾಲ್ , ವೈಟ್ ಲಿಫ್ಟಿಂಗ್ ಹಾಗೂ ವುಶು ಒಟ್ಟು 12 ಕ್ರೀಡೆಗಳನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಪ್ರತಿಯೊಂದು ಕ್ರೀಡೆಯಲ್ಲಿ ಪುರುಷರು ಮತ್ತು ಮಹಿಳಾ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ಕ್ರೀಡೆಯಲ್ಲಿ ಹಲವು ವಿಭಾಗಗಳಲ್ಲಿ ಒಟ್ಟು 631 ಚಿನ್ನದ ಪದಕ, 631 ಬೆಳ್ಳಿ ಪದಕ ಮತ್ತು 827 ಕಂಚಿನ ಪದಕಗಳಿಗಾಗಿ ಕ್ರೀಡಾಪಟುಗಳ ಸ್ಪರ್ಧೆ ನಡೆಯಲಿದೆ ಎಂದು ಅವರು ನುಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಜಿ., ಜಿ. ಪಂ. ಸಿಇಒ ಡಾ. ಆನಂದ್ ಕೆ., ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜಾಕಿಮ್ ಸ್ಟಾನಿ, ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಯು.ಎಚ್. ಉಮ್ಮರ್ ಉಪಸ್ಥಿತರಿದ್ದರು.