ಇತ್ತೀಚಿನ ಸುದ್ದಿ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ; 2024ರಲ್ಲಿ ದಾಖಲೆಯ 40 ದಶಲಕ್ಷ ತಲುಪಿದ ಪ್ಯಾಸೆಂಜರ್ ಸಂಖ್ಯೆ
10/01/2025, 21:30
*2024 ರ ಪ್ರಮುಖಾಂಶಗಳು:*
•ಬೆಂಗಳೂರು ವಿಮಾನ ನಿಲ್ದಾಣವು 2024 ರಲ್ಲಿ ಒಟ್ಟು 40.73 ದಶಲಕ್ಷ ಪ್ರಯಾಣಿಕರ ಸಂಖ್ಯೆಯನ್ನು ದಾಖಲಿಸಿದೆ.
•ಅಕ್ಟೋಬರ್ 20, 2024 ರಂದು ಒಂದೇ ದಿನದಲ್ಲಿ 126,532 ರ ದಾಖಲೆಯ ಪ್ರಯಾಣಿಕರು ಸಂಚರಿಸಿದ್ದಾರೆ. ಪ್ರತಿದಿನ ಸರಾಸರಿ 723 ವಿಮಾನಗಳ ಸಂಚಾರ ನಿರ್ವಹಣೆಯಾಗಿದೆ.
•ಬೆಂಗಳೂರು ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ, ವಾರ್ಷಿಕವಾಗಿ 21.1% ರಷ್ಟು
•11 ಹೊಸ ದೇಶೀಯ ಸ್ಥಳಗಳು ಮತ್ತು 4 ಅಂತಾರಾಷ್ಟ್ರೀಯ ಸ್ಥಳಗಳಿಗೆ ಬೆಂಗಳೂರಿನಿಂದ ಸಂಪರ್ಕ ಕಲ್ಪಿಸಲಾಗಿದೆ.
•ಈ ವರ್ಷದಲ್ಲಿ 496,227 ಮೆಟ್ರಿಕ್ ಟನ್ ಗಳ (MT) ದಾಖಲೆ ಸರಕು ಸಾಗಣೆ, ಕಾರ್ಗೋ ಟನ್‌ನಲ್ಲಿ ಗಮನಾರ್ಹ ಬೆಳವಣಿಗೆ, ವಾರ್ಷಿಕವಾಗಿ 17% ದಾಖಲೆ ನಿರ್ಮಾಣ.
•1,884 ಮೆಟ್ರಿಕ್ ಟನ್- ಒಂದೇ ದಿನದಲ್ಲಿ ದಾಖಲೆಯಾದ ಅತಿ ಹೆಚ್ಚು ಸರಕು ಸಾಗಣೆ.
ಬೆಂಗಳೂರು(reporterkarnataka.com): ಇಲ್ಲಿನ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2024 ರಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತು ಸರಕು ಸಾಗಣೆಯಲ್ಲಿ ದಾಖಲೆಯ ಬೆಳವಣಿಗೆ ಕಂಡಿದೆ. 2024 ರಲ್ಲಿ ಬರೋಬ್ಬರಿ 40 ದಶಲಕ್ಷ ಪ್ರಯಾಣಿಕರು ಪ್ರಯಾಣ ಬೆಳೆಸುವ ಮೂಲಕ ಜಾಗತಿಕವಾಗಿ ಅತಿ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದು ಎಂಬ ಸ್ಥಾನಮಾನವನ್ನು ಬೆಂಗಳೂರು ವಿಮಾನ ನಿಲ್ದಾಣವು ಇನ್ನಷ್ಟು ಬಲಪಡಿಸಿಕೊಂಡಿದೆ.
ಈ ಬೆಳವಣಿಗೆಯ ಮೂಲಕ ಬೆಂಗಳೂರು ವಿಮಾನ ನಿಲ್ದಾಣವು ದೈನಂದಿನ ವಿಮಾನಯಾನ ಸಂಚಾರ ನಿರ್ವಹಣೆಯಲ್ಲಿ (ಎಟಿಎಂ) ಗಮನಾರ್ಹ ಏರಿಕೆ ಕಂಡಿದೆ. ಜೊತೆಗೆ, ಹೊಸ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಿಗೂ ವಿಮಾನ ಹಾರಾಟವನ್ನು ಪ್ರಾರಂಭಿಸಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ವಾರ್ಷಿಕ ಸರಕು ಸಾಗಣೆಯು 496,227 ಮೆಟ್ರಿಕ್ ಟನ್ ತಲುಪುವ ಮೂಲಕ ಗರಿಷ್ಠ ದಾಖಲೆ ನಿರ್ಮಾಣವಾಗಿದೆ. ಇದು ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಭಾಗಗಳಲ್ಲಿ ತನ್ನ ಕಾರ್ಯಕ್ಷಮತೆಯನ್ನು ಎತ್ತಿ ಹಿಡಿದಿದೆ. ಈ ಬೃಹತ್ ಬೆಳವಣಿಗೆಯು ಬೆಂಗಳೂರಿನಿಂದ ವಾಯು ಮಾರ್ಗದ ಮೂಲಕ ಪ್ರಯಾಣಿಸುವವರಿಗೆ ಹಾಗೂ ವ್ಯಾಪಾರ ವಹಿವಾಟು ನಡೆಸುವವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೇಂದ್ರಬಿಂದು ಎಂಬ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದೆ.
*ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ:*
2023ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆಯು 37.2 ದಶಲಕ್ಷವಾಗಿತ್ತು. ಆದರೆ, 2024 ರಲ್ಲಿ 40.73 ದಶಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಬೆಳೆಸಿದ್ದಾರೆ. 2024ರ ಅಕ್ಟೋಬರ್ 20ರಂದು ಒಂದೇ ದಿನದಲ್ಲಿ 126,532 ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಮೂಲಕ ದಾಖಲೆ ನಿರ್ಮಾಣವಾಗಿದೆ. ಇದಷ್ಟೇ ಅಲ್ಲದೆ, ಅಕ್ಟೋಬರ್ 17, 2024ರಂದು ವಿಮಾನಯಾನ ಸಂಚಾರ ನಿರ್ವಹಣೆಯಲ್ಲಿ 782 ಎಟಿಎಂ ಮೂಲಕ ಗರಿಷ್ಠ ದಾಖಲೆ ನಿರ್ಮಾಣವಾಗಿದೆ. ಈವರೆಗೆ ಬೆಂಗಳೂರು ವಿಮಾನ ನಿಲ್ದಾಣದ ವಿಮಾನಯಾನ ಸಂಚಾರ ನಿರ್ವಹಣೆಯಲ್ಲಿ ವಾರ್ಷಿಕ ದೈನಂದಿನ ಸರಾಸರಿ 723 ಎಟಿಎಂ ದಾಖಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
*ಸಂಪರ್ಕ ಮತ್ತು ಹೊಸ ಮಾರ್ಗಗಳ ಪರಿಚಯ:*
ಡಿಸೆಂಬರ್ 31, 2024 ರ ಪ್ರಕಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 75 ದೇಶೀಯ ಮತ್ತು 30 ಅಂತಾರಾಷ್ಟ್ರೀಯ ಸ್ಥಳಗಳಿಗೆ ವಿಮಾನ ಸೇವೆಯನ್ನು ಒದಗಿಸಲಾಗುತ್ತಿದೆ. ಈ ಮೂಲಕ ಪ್ರಯಾಣಿಕರ ಮತ್ತು ಸರಕುಗಳ ಸಾಗಣೆಗೆ ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ಹೆಬ್ಬಾಗಿಲಾಗಿ ವಿಮಾನ ನಿಲ್ದಾಣವು ತನ್ನ ಸ್ಥಾನವನ್ನು ಮತ್ತಷ್ಟು ಬಲಗೊಳಿಸಿಕೊಂಡಿದೆ. ಜಾಗತಿಕ ವಿಮಾನಯಾನ ಜಾಲದಲ್ಲಿ ವರ್ಜಿನ್ ಅಟ್ಲಾಂಟಿಕ್, ಸಲಾಮ್ ಏರ್, ಮಾಂಟಾ ಏರ್ ಮತ್ತು ಫ್ಲೈ91 ನಂತಹ ಹೊಸ ವಿಮಾನಯಾನ ಸಂಸ್ಥೆಗಳೊಂದಿಗೆ ಬೆಂಗಳೂರು ವಿಮಾನ ನಿಲ್ದಾಣ ಸಹಯೋಗ ಸಾಧಿಸಿದೆ. 2024ರಲ್ಲಿ ದೈನಂದಿನ ಅಂತಾರಾಷ್ಟ್ರೀಯ ವಿಮಾನ ಸಂಚಾರಗಳ ಸಂಖ್ಯೆ ಸರಾಸರಿ 75 ಆಗಿತ್ತು, ಆದರೆ ಇದು 2023 ರಲ್ಲಿ ದಿನಕ್ಕೆ 62 ರಷ್ಟಿತ್ತು. ಈ ಮೂಲಕ ಅಂತಾರಾಷ್ಟ್ರೀಯ ವಿಮಾನಗಳ ಆವರ್ತನವು 21% ರಷ್ಟು ಹೆಚ್ಚಾಗಿರುವುದನ್ನು ಈ ದತ್ತಾಂಶ ಸೂಚಿಸುತ್ತದೆ.
2024 ರ ಅಂತ್ಯದ ವೇಳೆಗೆ, ಇಂಡಿಗೋ ಬೆಂಗಳೂರಿನಿಂದ 46 ಸಾಪ್ತಾಹಿಕ ನಿರ್ಗಮನ ವಿಮಾನಗಳನ್ನು ಸೇರ್ಪಡೆಗೊಳಿಸಿದೆ. ಇದು ಭಾರತದಿಂದ ನಿರ್ಗಮಿಸುವ ಒಟ್ಟು 240 ಹೆಚ್ಚುವರಿ ಸಾಪ್ತಾಹಿಕ ನಿರ್ಗಮನ ವಿಮಾನಗಳ ಮೂರನೇ ಒಂದು ಭಾಗವಾಗಿದೆ. ಈ ಮೂಲಕ, 2024 ರಲ್ಲಿ ಇಂಡಿಗೋ ಭಾರತದಲ್ಲಿ ಅತಿ ಹೆಚ್ಚು ವಿಮಾನಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೇರ್ಪಡೆಗೊಳಿಸಿದೆ.
ವಿಮಾನ ನಿಲ್ದಾಣದ ಪ್ರಮುಖ ದೇಶೀಯ ಮಾರ್ಗಗಳಲ್ಲಿ ದೆಹಲಿ (DEL), ಮುಂಬೈ (BOM), ಕೋಲ್ಕತ್ತಾ (CCU), ಹೈದರಾಬಾದ್ (HYD), ಮತ್ತು ಪುಣೆ (PNQ) ಸೇರಿವೆ. ಅಲ್ಲದೇ, ಹೊಸ ದೇಶಿಯ ಸ್ಥಳಗಳಿಗೆ ವಿಮಾನ ಸಂಪರ್ಕ ಆರಂಭಿಸಲಾಗಿದ್ದು, ಅಯೋಧ್ಯೆ (AYJ), ಐಜ್ವಾಲ್ (AJL), ದಿಯೋಘರ್ (DGH), ನಾಂದೇಡ್ (NDC), ಜಬಲ್ಪುರ್ (JLR), ದಿಬ್ರುಗಢ್ (DIB), ಮತ್ತು ಸಿಂಧುದುರ್ಗದಂತಹ (SDW) ಸ್ಥಳಗಳನ್ನು ಇವು ಒಳಗೊಂಡಿವೆ.
ದುಬೈ (DXB), ಸಿಂಗಾಪುರ (SIN), ಅಬುಧಾಬಿ (AUH), ದೋಹಾ (DOH), ಮತ್ತು ಲಂಡನ್ ಹೀಥ್ರೂ (LHR) ಅಂತಾರಾಷ್ಟ್ರೀಯ ಸ್ಥಳಗಳಿಗೆ ವಿಮಾನ ಸಂಪರ್ಕದ ಜೊತೆಗೆ, ಕೆಲವು ಹೊಸ ಅಂತಾರಾಷ್ಟ್ರೀಯ ಸ್ಥಳಗಳಿಗೆ ವಿಮಾನ ಸಂಪರ್ಕ ಕಲ್ಪಿಸಲಾಗಿದೆ. ಡೆನ್‌ಪಾಸರ್ (DPS), ಮಾರಿಷಸ್ (MRU), ಲಂಕಾವಿಗೆ (LGK), ಮಾಲ್ಡೀವ್ಸ್ ನ ಧಾಲುಗಳಿಗೆ (DDD) ಅಂತಾರಾಷ್ಟ್ರೀಯವಾಗಿ ಬೆಂಗಳೂರಿನಿಂದ ಹೊಸದಾಗಿ ವಿಮಾನ ಸಂಪರ್ಕ ಆರಂಭಿಸಲಾಗಿದೆ. ಇದು ಬೆಂಗಳೂರು ವಿಮಾನ ನಿಲ್ದಾಣದ ಸಂಪರ್ಕವನ್ನು ಹೆಚ್ಚಿಸಲು ಮತ್ತು ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ನಡೆಸುತ್ತಿರುವ ಪ್ರಾಮಾಣಿಕ ಪ್ರಯತ್ನವಾಗಿದೆ.
*ಕಾರ್ಗೋ ವ್ಯಾಪಾರದಲ್ಲಿ ಮೈಲಿಗಲ್ಲು:*
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸರಕು ಸಾಗಣೆಯಲ್ಲೂ ಗಮನಾರ್ಹ ಬೆಳವಣಿಗೆ ಕಂಡಿದೆ. 2024 ರಲ್ಲಿ 496,227 ಮೆಟ್ರಿಕ್ ಟನ್ ಸರಕನ್ನು ಸಾಗಿಸಲು ಅನುವು ಮಾಡಿಕೊಡಲಾಗಿದೆ. 2023ಕ್ಕೆ ಹೋಲಿಸಿದರೆ, ಇದು 17% ರಷ್ಟು ಹೆಚ್ಚಳವಾಗಿದೆ. ಇನ್ನು, ಅಂತಾರಾಷ್ಟ್ರೀಯ ಸರಕು ಸಾಗಣೆಯಲ್ಲೂ 23% ರಷ್ಟು ಬೆಳವಣಿಗೆ ಕಂಡಿದ್ದು, ಒಟ್ಟು 313,981 ಮೆಟ್ರಿಕ್ ಟನ್ ಕೊಳೆತುಹೋಗುವ ಪದಾರ್ಥಗಳು, ಬಿಡಿ ಭಾಗಗಳು, ಎಂಜಿನಿಯರಿಂಗ್ ಸರಕು ಮತ್ತು ಇ-ಕಾಮರ್ಸ್ ಸಾಗಣೆಗೆ ಬೇಡಿಕೆ ಹೆಚ್ಚಾಗಿದೆ. ದೇಶೀಯವಾಗಿ ಸರಕುಗಳ ಸಾಗಣೆ ಪ್ರಮಾಣವು ಸಹ 9% ರಷ್ಟು ಹೆಚ್ಚಾಗಿದ್ದು, 182,246 ಮೆಟ್ರಿಕ್ ಟನ್ ತಲುಪಿದೆ. ಕೊಳೆತುಹೋಗುವ ಸರಕುಗಳು ಮತ್ತು ಇ-ಕಾಮರ್ಸ್ ಚಟುವಟಿಕೆಯನ್ನು ಮತ್ತಷ್ಟು ವಿಸ್ತರಿಸಲಾಗಿದೆ.
ಜುಲೈ 11, 2024ರಂದು 1,884 ಮೆಟ್ರಿಕ್ ಟನ್ ಸರಕು ಸಾಗಣೆ ಮಾಡುವ ಮೂಲಕ ಒಂದೇ ದಿನ ಅತಿ ಹೆಚ್ಚು ಸರಕು ಸಾಗಣೆ ಪ್ರಮಾಣ ದಾಖಲಾಗಿದೆ. ಕಾರ್ಗೋ ಬೆಳವಣಿಗೆಯನ್ನು ಪ್ರೇರೇಪಿಸುವ ಪ್ರಮುಖ ಸರಕುಗಳಾದ ಕೊಳೆತು ಹೋಗುವ ಕೃಷಿ ಸರಕುಗಳು, ಸಿದ್ಧ ಉಡುಪುಗಳು, ಔಷಧ, ಯಂತ್ರೋಪಕರಣಗಳ ಭಾಗಗಳು, ಹಾಗೂ ಇತರೆ ಬಿಡಿಭಾಗಗಳ ಸಾಗಣೆ ಸೇವೆಯನ್ನು ಬೆಂಗಳೂರು ವಿಮಾನ ನಿಲ್ದಾಣವು ಒದಗಿಸಿದೆ.
2024 ರಲ್ಲಿ ಬೆಂಗಳೂರು ವಿಮಾನ ನಿಲ್ದಾಣವು 10.8 ದಶಲಕ್ಷ ಗುಲಾಬಿಗಳನ್ನು ಸಾಗಣೆ ಮಾಡಿದ್ದು, 2023 ಕ್ಕೆ ಹೋಲಿಸಿದರೆ 14% ರಷ್ಟು ಬೆಳವಣಿಗೆ ಕಂಡಿದೆ. ಅದೇ ರೀತಿ, 822 ಮೆಟ್ರಿಕ್ ಟನ್ ಮಾವಿನ ಹಣ್ಣು ಬೆಂಗಳೂರು ವಿಮಾನ ನಿಲ್ದಾಣದಿಂದ ರಫ್ತಾಗಿದ್ದು, 2023ಕ್ಕೆ ಹೋಲಿಸಿದರೆ 20% ಹೆಚ್ಚಳವನ್ನು ಕಂಡಿದೆ. ಇನ್ನು, ಕೊತ್ತಂಬರಿ ಸಾಗಣೆಯಲ್ಲೂ 53% ಬೆಳವಣಿಗೆ ದಾಖಲಾಗಿದೆ.
ಪ್ರಸ್ತುತ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗ ಎರಡರಲ್ಲೂ ಕಾರ್ಯನಿರ್ವಹಿಸುವ 12 ಸರಕು ವಿಮಾನಯಾನ ಸಂಸ್ಥೆಗಳ ಸೇವೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲಭ್ಯವಿದೆ. ಪ್ರಮುಖ ರಫ್ತು ಮಾರ್ಗಗಳಲ್ಲಿ ಸಿಂಗಾಪುರ (SIN), ಲಂಡನ್ (LHR), ಫ್ರಾಂಕ್‌ಫರ್ಟ್ (FRA), ಚಿಕಾಗೊ (ORD), ಮತ್ತು ಮಸ್ಕಟ್ (MCT) ಒಳಗೊಂಡಿವೆ. ಅಗ್ರ ಆಮದು ಮಾರ್ಗಗಳಲ್ಲಿ ಶೆನ್‌ಜೆನ್ (SZX), ಸಿಂಗಾಪುರ (SIN), ಶಾಂಘೈ (PVG) ಹಾಂಗ್ ಕಾಂಗ್ (HKG), ಮತ್ತು ಫ್ರಾಂಕ್‌ಫರ್ಟ್ (FRA) ಸೇರಿವೆ.
ಒಟ್ಟಾರೆ, 2024ರಲ್ಲಿ ಬೆಂಗಳೂರು ವಿಮಾನ ನಿಲ್ದಾಣವು ಪ್ರಯಾಣಿಕರು ಹಾಗೂ ಸರಕು ಸಾಗಣೆಯಲ್ಲಿ ಉತ್ತಮ ಬೆಳವಣಿಗೆ ಕಂಡಿದೆ. ವಿಮಾನ ನಿಲ್ದಾಣವು ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ಆದ್ಯತೆಯ ಹೆಬ್ಬಾಗಿಲಾಗಿ ಬದ್ಧತೆಯನ್ನು ಸಾಬೀತುಪಡಿಸಿದೆ. ವಿಸ್ತರಣೆ, ಕಾರ್ಯಾಚರಣೆಯ ಉತ್ಕೃಷ್ಟತೆ ಮತ್ತು ಪ್ರಯಾಣಿಕ-ಕೇಂದ್ರಿತ ಮನೋಭಾವದೊಂದಿಗೆ ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಬೆಳವಣಿಗೆ ಕಾಣುವ ಭರವಸೆ ನೀಡಿದೆ.