5:51 AM Wednesday8 - January 2025
ಬ್ರೇಕಿಂಗ್ ನ್ಯೂಸ್
ದೇಶದ ವೈವಿಧ್ಯತೆ, ಸೌಹಾರ್ದತೆ ಉಳಿಸಿಕೊಳ್ಳುವ ಮೂಲಕ ಆಂತರಿಕವಾಗಿ ಸಶಕ್ತವಾಗಬೇಕಿದೆ: ಧರ್ಮಸ್ಥಳದಲ್ಲಿ ಉಪ ರಾಷ್ಟ್ರಪತಿ… 60% ಕಮೀಷನ್; ನಿಮ್ಮ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಸಿಎಂಗೆ ಕೇಂದ್ರ ಸಚಿವ… ಇದು 60 ಪರ್ಸೆಂಟ್‌ ಕಮಿಷನ್‌ ಸರ್ಕಾರ, ಗುತ್ತಿಗೆದಾರರಿಗೆ ನೀಡಲು ಹಣವಿಲ್ಲ: ಪ್ರತಿಪಕ್ಷ ನಾಯಕ… ಹಣ ಕೈಯಲ್ಲಿದ್ದರೂ ಸ್ಕಾಲರ್ ಶಿಪ್ ವಿತರಣೆಯಲ್ಲಿ ನಿರ್ಲಕ್ಷ್ಯ: ಅಧಿಕಾರಿಗಳ ಚಳಿ ಬಿಡಿಸಿದ ಸಿಎಂ… ಅರಣ್ಯ ಒತ್ತುವರಿ, ಕಳ್ಳಬೇಟೆ ತಡೆಗೆ ಗರುಡಾಕ್ಷಿ ಅಸ್ತ್ರ: ಆನ್ಲೈನ್ ಎಫ್ಐಆರ್ ವ್ಯವಸ್ಥೆಗೆ ಚಾಲನೆ ರಾಜ್ಯದಲ್ಲಿ ಎಚ್ ಎಂಪಿವಿ ಸೋಂಕು: ಜನರಲ್ಲಿ ಆತಂಕ ಬೇಡ, ಎಚ್ಚರ ಇರಲಿ; ಆರೋಗ್ಯ… ತೀರ್ಥಹಳ್ಳಿಯ ಕಿತ್ತನಗದ್ದೆ ನಾಡ್ತಿಯ ಹೊಳೆಯಲ್ಲಿ ಮರಳು ಮಾಫಿಯ ಜಾಲ ಪತ್ತೆ ಎಲ್ಲ ಎಸ್ಕಾಂ ಸಿಬ್ಬಂದಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ: ಇಂಧನ ಸಚಿವ… ಊಟದಲ್ಲಿ ರಾಜಕೀಯ ಬೆರೆಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್ ಮೂಡಿಗೆರೆ: ಹುಲಿ ದಾಳಿಗೆ ಬಾಣಂತಿ ಹಸು ಬಲಿ; ಕರುವಿನ ಆಕ್ರಂಧನ

ಇತ್ತೀಚಿನ ಸುದ್ದಿ

ರಾಜ್ಯದ 6 ಮಂದಿ ನಕ್ಸಲರು ಶೀಘ್ರವೇ ಮುಖ್ಯವಾಹಿನಿಗೆ?: ಸರಕಾರದಿಂದ ಪ್ರಕ್ರಿಯೆ ಚುರುಕು

05/01/2025, 19:14

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಕಾಡಿನಲ್ಲಿ ಉಳಿದಿರುವ ನಕ್ಸಲರನ್ನು ಮರಳಿ ಮುಖ್ಯವಾಹಿನಿಗೆ ತರುವ ಪ್ರಕ್ರಿಯೆ ಆರಂಭವಾಗಿದ್ದು, ಮುಂಡಗಾರು ಲತಾ ಸೇರಿ 6 ಜನ ಶೀಘ್ರವೇ ಮುಖ್ಯವಾಹಿನಿಗೆ ಬರಲಿದ್ದಾರೆ.
ಮುಂಡಗಾರು ಲತಾ, ಸುಂದರಿ ಕುಲ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ಕೆ.ವಸಂತ, ಟಿ.ಎನ್.ಜೀಶ್ ಮುಖ್ಯ ವಾಹಿನಿಗೆ ಬರಲು ಒಪ್ಪಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಗುಪ್ತಚರ ಇಲಾಖೆ ಅಧಿಕಾರಿಗಳ ಜತೆ ನಕ್ಸಲ್ ಶರಣಾಗತಿ ಸಮಿತಿ, ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು  ಮೇಲಿಂದ ಮೇಲೆ ಸಭೆಗಳನ್ನು ನಡೆಸಿವೆ. ಒಂದೆರಡು ದಿನಗಳಲ್ಲೇ ನಕ್ಸಲರು ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆಗಳು ಅಂತಿಮಗೊಳ್ಳುವ ಸಾಧ್ಯತೆ ಇದೆ. ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆಗಳು ಘನತೆಯುತವಾಗಿ ನಡೆಯಬೇಕು. ಅವರ ಆತ್ಮಗೌರವಕ್ಕೆ ಧಕ್ಕೆಯಾಗಬಾರದು. ಹೋರಾಟದ ಮಾರ್ಗ ಬದಲಿಸಿ ಪ್ರಜಾತಾಂತ್ರಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ತಡೆಯಾಗಬಾರದು ಎಂಬ ಮನವಿಯನ್ನು ಸರ್ಕಾರವೂ ಒಪ್ಪಿದೆ.
ಮುಖ್ಯವಾಹಿನಿಗೆ ಬಂದ ಬಳಿಕ ಜೈಲಿನಲ್ಲಿ ಕೊಳೆಯುವ ಸ್ಥಿತಿ ಇರಬಾರದು. ಸಂಬಂಧ ಇಲ್ಲದಿದ್ದರೂ ಹಲವು ಪ್ರಕರಣಗಳಲ್ಲಿ ಅವರ ಹೆಸರು ಸೇರ್ಪಡೆಯಾಗಿದ್ದು, ಅವುಗಳಿಂದ ಮುಕ್ತಿ ಸಿಗಬೇಕು. ಮುಖ್ಯವಾಹಿನಿಗೆ ಬಂದ ಬಳಿಕ ಬೇಗನೆ ಜಾಮೀನಿನ ಮೇಲೆ ಹೊರಗೆ ಬರಲು ಸಹಕರಿಸಬೇಕು ಎಂಬ ಮನವಿಗೂ ಸರ್ಕಾರ ಸ್ಪಂದಿಸಿದೆ. ಕಾನೂನು ಸೇವಾ ಪ್ರಾಧಿಕಾರದಿಂದ ನೆರವು ಕೊಡಿಸುವ ಭರವಸೆಯನ್ನೂ ನೀಡಿದೆ ಎಂದೂ ಮೂಲಗಳು ಹೇಳಿವೆ.
ಎಲ್ಲಾ ಮೊಕದ್ದಮೆಗಳನ್ನು ವಿಶೇಷ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಲು ಸಹಕಾರ ನೀಡಲಾಗುವುದು. ಪ್ರವರ್ಗ –ಎ ವರ್ಗಕ್ಕೆ ಸೇರಿದವರಿಗೆ ₹7.50 ಲಕ್ಷ, ಪ್ರವರ್ಗ –ಬಿ ವರ್ಗಕ್ಕೆ ₹4 ಲಕ್ಷ ಆರ್ಥಿಕ ನೆರವನ್ನು ಮೂರು ಹಂತಗಳಲ್ಲಿ ನೀಡಲಾಗುವುದು. ಕೌಶಲ ತರಬೇತಿ ನೀಡಲಾಗುವುದು. ಕೇರಳ, ಕರ್ನಾಟಕ, ತಮಿಳುನಾಡು ಸೇರಿ ಎಲ್ಲಾ ಸರ್ಕಾರಗಳೂ ನಕ್ಸಲರ ಬಗ್ಗೆ ಅನುಕಂಪದಿಂದಲೇ ವರ್ತಿಸುತ್ತವೆ ಎಂಬ ಭರವಸೆಯನ್ನು ಸರ್ಕಾರ ನೀಡಿದೆ.
ಈ ಕುರಿತು ಶಾಂತಿಗಾಗಿ ನಾಗರಿಕ ವೇದಿಕೆಯ ಕೆ.ಎಲ್.ಅಶೋಕ್ ಅವರನ್ನು ಮಾಧ್ಯಮದವರು ಸಂಪರ್ಕಿಸಿದಾಗ, ‘ಮುಖ್ಯವಾಹಿನಿಗೆ ಬರಲು ಬಯಸುತ್ತಿರುವ ನಕ್ಸಲರ ಬೇಡಿಕೆಗಳು ಸರಿಯಾಗಿವೆ. ಸರ್ಕಾರ ಅವುಗಳನ್ನು ಪರಿಗಣಿಸಬೇಕು’ ಎಂದು ಪ್ರತಿಕ್ರಿಯಿಸಿದರು.

*ನಕ್ಸಲರ ಬೇಡಿಕೆಗಳೇನು?:*

* ಭೂಮಿ ಇಲ್ಲದ ಕುಟುಂಬಕ್ಕೆ ಐದು ಎಕರೆ ಕೃಷಿ ಭೂಮಿ ನೀಡಬೇಕು, ಶಾಶ್ವತ ಹಕ್ಕುಪತ್ರ ನೀಡಬೇಕು.

* ಎಲ್ಲಾ ಆದಿವಾಸಿ ಕುಟುಂಬಗಳಿಗೆ ಭೂಮಿ ಮತ್ತು ವಸತಿ ನೀಡಬೇಕು.

* ಕೃಷಿ ಯೋಗ್ಯ ಪಾಳುಭೂಮಿಯನ್ನು ಭೂಹೀನರಿಗೆ ಹಂಚಬೇಕು.

* ಆಹಾರದ ಬೆಳೆ, ಮುಖ್ಯವಾಗಿ ಭತ್ತ ಬೆಳೆಯುವ ರೈತರ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕು. ಅವರಿಗೆ ಸಂಪೂರ್ಣ ಬೆಂಬಲವಾಗಿ ನಿಲ್ಲಬೇಕು. 

* ಕಸ್ತೂರಿ ರಂಗನ್ ವರದಿ ರದ್ದುಗೊಳಿಸಬೇಕು.

* ಹೈಟೆಕ್ ಟೂರಿಸಂ ನಿಲ್ಲಸಿ ಪರಿಸರ ರಕ್ಷಿಸಬೇಕು.

* ಆದಿವಾಸಿಗಳಿಗೆ ಕಾಡಿನ ಮೇಲಿನ ಎಲ್ಲ ರೀತಿಯ ಅಧಿಕಾರ ಇರಬೇಕು

* ಕುದುರೆಮುಖ ರಾಷ್ಟ್ರೀಯ ಉದ್ಯಾನವನ ರದ್ದಾಬೇಕು.

* ನಿರುದ್ಯೋಗಿಗಳಿಗೆ ಅರ್ಹತೆಗೆ ತಕ್ಕಂತೆ ಉದ್ಯೋಗ ಕೊಡಬೇಕು.

* ಸಾಂಸ್ಕೃತಿಕ ಬದಲಾವಣೆಗಳಿಂದ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು.

* ಹವಾಮಾನ ಬದಲಾವಣೆಯಿಂದ ಕೃಷಿ ಬೆಳೆ, ಮನುಷ್ಯನ ಬದುಕು ಮತ್ತು ಪ್ರಕೃತಿಯ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ವೈಜ್ಞಾನಿಕ ಕಾರಣಗಳನ್ನು ಕಂಡುಕೊಳ್ಳಬೇಕು.

* ಮೂರು ರಾಜ್ಯಗಳಲ್ಲಿ (ಕರ್ನಾಟಕ, ತಮಿಳುನಾಡು, ಕೇರಳ) ರೈತರನ್ನು ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು.

* ರೈತರ ಒತ್ತುವರಿ ಭೂಮಿ ತೆರವುಗೊಳಿಸುವುದನ್ನು ತಕ್ಷಣವೇ ನಿಲ್ಲಿಸಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು