8:00 PM Tuesday31 - December 2024
ಬ್ರೇಕಿಂಗ್ ನ್ಯೂಸ್
ಸಹಜ ಹೆರಿಗೆಗೆ ಆದ್ಯತೆ ನೀಡಿ: ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬನ್ನಿ: ನಕ್ಸಲರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನ ಬೈಕಿನ ಹಿಂದೆ ನಿಂತು ಜ್ವಾಲಿ ರೈಡ್ ಮಾಡಿದ ಮಲೆನಾಡಿನ ಶ್ವಾನ: ವೀಡಿಯೋ ವೈರಲ್ ಸಾಹಿತ್ಯ ಅನುವಾದ ಸೇತುವೆ ಕಟ್ಟುವ ಕೆಲಸದಂತೆ: ಚಿಂತಕ ರಹಮತ್ ತರೀಕೆರೆ ಪ್ರತಿಪಾದನೆ ಕೆಪಿಎಸ್ ಸಿ ಮರುಪರೀಕ್ಷೆಯಲ್ಲೂ ಎಡವಟ್ಟು: ಕಾಂಗ್ರೆಸ್ ಸರಕಾರ ವಿರುದ್ದ ಪ್ರತಿಪಕ್ಷದ ನಾಯಕ ಆರ್.… ಕೋಲಾರ ನೂತನ ಜಿಲ್ಲಾಧಿಕಾರಿಯಾಗಿ ಡಾ.ಎಂ.ಆರ್ ರವಿ ಅಧಿಕಾರ ಸ್ವೀಕಾರ ಕೊಕ್ಕಡ ದೇಗುಲದ ಅಚ್ಚುಮೆಚ್ಚಿನ ಶ್ಯಾಮ ಇನ್ನು ನೆನಪು ಮಾತ್ರ: ಅಲ್ಪಕಾಲದ ಅನಾರೋಗ್ಯದಿಂದ ದೇವರಪಾದ… ಸೂತಕದ ಮನೆಯಂತಿದ್ದ ಮುರುಡೇಶ್ವರ ಕಡಲ ಕಿನಾರೆಗೆ ಮತ್ತೆ ರಂಗು: ಮೋಜು- ಮಸ್ತಿಗೆ ಜಿಲ್ಲಾಡಳಿತ… ನಂಜನಗೂಡು: ಸೂರಹಳ್ಳಿ ಗ್ರಾಮಕ್ಕೆ ಸಾರಿಗೆ ಬಸ್ ಸೌಲಭ್ಯ ಆಗ್ರಹಿಸಿ ರೈತ ಸಂಘ ಮತ್ತು… ಜನಪ್ರತಿನಿಧಿಗಳು ಸದನದ ಹೊರಗೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು: ಸ್ಪೀಕರ್ ಖಾದರ್

ಇತ್ತೀಚಿನ ಸುದ್ದಿ

ಹೌದಲ್ವಾ! ಎಂತೆಂತಹಾ ಅನ್ಯಾಯ ಮಾಡಿದವರು ಸುಖವಾಗಿ ಬದುಕುತ್ತಾರಲ್ಲ?

28/12/2024, 22:36

ರಾಜೇಶ್ವರಿ ಕುಮಾರ್ ರಾವ್ ಬೆಂಗಳೂರು

info.reporterkarnataka@gmail.com

ಪ್ರತಿಯೊಬ್ಬರ ಬದುಕಿನಲ್ಲೂ, ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಜೀವಿತದ ಕೊನೆಯ ಕ್ಷಣದವರೆಗೂ ಅನಿರೀಕ್ಷಿತ ತಿರುವುಗಳು ಬರುತ್ತಲೇ ಇರುತ್ತವೆ. ಡೀವೀಜಿಯವರ ಮಾತಿನಲ್ಲಿ ಹೇಳುವುದಾದರೆ,
“ವ್ಯರ್ಥವೀ ಜೀವನದ ಬಡಿದಾಟವೆನ್ನದಿರು|
ಅರ್ಥವಹುದು ನಿನಗೆ ಪೂರ್ಣದರ್ಶನದಿಂ|
ನರ್ತಿಪನು ಜಡಜೀವ ರೂಪಂಗಳಲಿ ಬೊಮ್ಮ|
ಪೂರ್ತಿ ಇದನರಿಯೆ ಸೊಗ—ಮಂಕುತಿಮ್ಮ||
“ಈ ಜೀವನದ ಹೋರಾಟವನ್ನು ವ್ಯರ್ಥವೆನ್ನದಿರು. ಈ ಸ್ರಷ್ಟಿಯ ಸಂಪೂರ್ಣ ದರ್ಶನವಾದಾಗ ನಿನಗೆ ಈ
ಜಗತ್ತಿನ ಸಾರ್ಥಕತೆ ಅರ್ಥವಾಗುತ್ತದೆ. ಜೀವ ಮತ್ತು ಜಡರೂಪದಲ್ಲಿ ಆ ಪರಮಾತ್ಮನ ಲೀಲಾ ನರ್ತನ ನಡೆಯುತ್ತಿದೆ. ಇದರ ಸಂಪೂರ್ಣ ರೂಪ ನೋಡಿದರೆ ಸೊಗಸು” ಎಂದು ಮಂಕುತಿಮ್ಮನ ಕಗ್ಗದ ಮೂಲಕ ತಿಳಿಸಿದ್ದಾರೆ.
“ಅಂತಿಮ ಸತ್ಯ” ಯಾವುದು ಎಂಬ ಬಗ್ಗೆ ಯೋಚಿಸಿದಾಗ ತಲೆಯೊಳಗೆ ಯೋಚನೆಗಳು, ತರ್ಕ, ವಿತರ್ಕ, ಕುತರ್ಕಗಳ ಗೊಂದಲ, ಗೋಜಲು. ಆಗ ನನ್ನ ಮೆಚ್ಚಿನ ಮಂಕುತಿಮ್ಮನ ಕಗ್ಗದ ಈ ಮೇಲೆ ಬರೆದ ನಾಲ್ಕು ಸಾಲುಗಳು ಗಮನ ಸೆಳೆದವು. ವರಕವಿ ಡೀವೀಜೀಯವರು ಬದುಕಿನ ವಿವಿಧ ಮಜಲುಗಳನ್ನು ಕಂಡು, ಅನುಭವಿಸಿ, ವಿಮರ್ಶಿಸಿ ಬರೆದ ಮುತ್ತಿನಂತಹ ವಾಕ್ಯಗಳು.
ನನ್ನ ತಲೆಯೊಳಗೆ ಸುತ್ತುತ್ತಿದೆ ನೂರಾರು ಪ್ರಶ್ನೆಗಳು. ಯಾರು ಉತ್ತರಿಸುತ್ತಾರೆ? ಪ್ರತಿಯೊಂದು ಪ್ರಶ್ನೆಗೂ ಉತ್ತರವಿರ ಬೇಕೆಂದೇನೂ ಇಲ್ಲ. ಆಧ್ಯಾತ್ಮಿಕ ಜ್ಞಾನದ ಸಹಾಯದಿಂದ ಉತ್ತರ ನೀಡುವುದೇನೂ ದೊಡ್ಡ ವಿಷಯವಲ್ಲ. ಬೇರೆಯ
ವರಿಗೆ ಉಪದೇಶ ಮಾಡುವುದಂತೂ ತುಂಬಾ ಸುಲಭ.
ಯಾವುದು ಅಂತಿಮ?
‘ಪುನರತಿ ಜನನಂ,ಪುನರಪಿ ಮರಣಂ.
ಪುನರಪಿ ಜನನೀ ಜಠರೇ ಶಯನಂ’
ಈ ಕಾಲಚಕ್ರದಲ್ಲಿ ನಾವು ಎಷ್ಟು ಬಾರಿ ಸುತ್ತಿದ್ದೇವೆ,
ಸತ್ತಿದ್ದೇವೆ? ಹುಟ್ಟಿದ್ದೇವೆ ಗುರಿಮುಟ್ಟಿದ್ದೇವೆ? ನಾವು ಯಾವ ಜನ್ಮದಲ್ಲಿ ಯಾವ ರೂಪ ತಾಳಿದ್ದೆವು, ಈಗ ನಾವಿರುವುದು ಮೊದಲನೆಯ ಜನ್ಮವೇ ಅಥವಾ ಕೊನೆಯದೇ? ಇಂತಹಾ ಅನೇಕ ಪ್ರಶ್ನೆಗಳಿಗೆ ಉತ್ತರ ಕೊಡುವವರ್ಯಾರು?.
“ಒಗಟೆಯೇನೀ ಸೃಷ್ಟಿ?ಬಾಳಿನರ್ಥವದೇನು?
ಬಗೆದು ಬಿಡಿಸುವರಾರು ಸೋಜಿಗವನಿದನು?
ಜಗವ ನಿರವಿಸಿದ ಕೈಯೊಂದಾದಡೋಕಿಂತು|
ಬಗೆಬಗೆಯ ಜೀವಗತಿ?—ಮಂಕುತಿಮ್ಮ||”
“ನಾನು ಎಷ್ಟೊಂದು ಪೂಜೆ ಪುನಸ್ಕಾರಗಳನ್ನು, ದಾನ ಧರ್ಮಗಳನ್ನು ಮಾಡಿದೆ, ಒಬ್ಬರಿಗೂ ಮೋಸ ಅನ್ಯಾಯ ಮಾಡಿಲ್ಲ. ಹಾಗಿದ್ದೂ ನನಗ್ಯಾಕಪ್ಪಾ ಇಂತಹ ಕಷ್ಟ ಕೊಟ್ಟೆ” ಎಂದು ಭಗವಂತನೆದುರು ಗೋಳಾಡುವವರನ್ನು ಕಂಡಿದ್ದೇವೆ.
ಹೌದಲ್ವಾ! ಎಂತೆಂತಹಾ ಅನ್ಯಾಯ ಮಾಡಿದವರು ಸುಖವಾಗಿ ಬದುಕುತ್ತಾರೆ. ಯಾವ ಕಾಯಿಲೆ ಕಸಾಲೆಯೂ ಇಲ್ಲದೆ ಫಟ್ಟಂತ ಯಮಧರ್ಮರಾಯ ಸನ್ಮಾನಪೂರ್ವಕವಾಗಿ ಕರೆದೊಯ್ಯು ತ್ತಾನೆ.ಹಾಗೆ ಸತ್ತಾಗ ‘ಒಳ್ಳೆಯ ಸಾವು’ ಅನ್ನುತ್ತಾರೆ ಜನ.
ಆದರೆ‌ ಲೋಕದ ಮಾನದಂಡದಲ್ಲಿ ಪರೋಪಕಾರಿ, ಸಾತ್ವಿಕ ಪುರುಷನೆಂದು ಗೌರವಿಸಲ್ಪಡುತ್ತಿದ್ದ ವ್ಯಕ್ತಿ , ಸಾಲಸೋಲ, ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುತ್ತಾ ದಯನೀಯ ಬದುಕು ಬದುಕುವ ದೃಶ್ಯಗಳೂ ಅಪರೂಪವೇನಲ್ಲ. ಇದೆಲ್ಲಾ ನನ್ನ ಕರ್ಮಫಲ ಅಂದುಕೊಂಡು ಕಷ್ಟಗಳನ್ನು ಆನಂದಿಸುತ್ತಾ ಕುಳಿತುಕೊಳ್ಳಲು ಸಾಧ್ಯವೇ?ಅಂತಹವರು ಸಹನೆಯಹಂತ ಮೀರಿದಾಗ “ದೇವರಿಗೆ ಕಣ್ಣಿಲ್ಲ” ಎನ್ನುವ ಮಾತು ಹೇಳುವುದನ್ನು ಕೇಳಿರಬಹುದು. ಹಾಗಿರುವಾಗ ಈ ಜನ್ಮದಲ್ಲಿ ನಾವು ಮಾಡುವ ಕರ್ಮಕ್ಕೂ,ಅಂದರೆ ಸಾಮಾನ್ಯ ಅರ್ಥದಲ್ಲಿ ಕೆಲಸಕ್ಕೂ ಫಲಾಫಲಕ್ಕೂ ಯಾವುದೇ ಸಂಬಂಧವಿಲ್ಲ ಎಂದಾಯ್ತು.
“ತೇನವಿನಾ ತ್ರಣಮಪಿ ನ ಚಲತಿ” ಹಾಗಾದರೆ ಭೂಮಿ ಯಲ್ಲಿರುವ ಜೀವಿಗಳು ಆ ಸೂತ್ರಧಾರ ಆಡಿಸಿದಂತೆ ಆಡುವ ಕೀಲುಗೊಂಬೆಗಳೇ? “ನಾನು ಹಾಗೆ ಮಾಡಿದೆ, ಇದನ್ನು ಸಾಧಿಸಿದೆ” ಎಂಬುದೆಲ್ಲಾ ಸುಳ್ಳೇ?!ಹುಟ್ಟು ಸಾವುಗಳ ಮಧ್ಯೆ ನಡೆವ ಜೀವನ ನೀರಿನ ಗುಳ್ಳೆಯೇ? ಎಲ್ಲಾ ದೈವೇಚ್ಛೆ, ಎಂದಾದರೆ, ‘ನನ್ನ’ ಅಸ್ತಿತ್ವಕ್ಕೆ ಅರ್ಥವೇನು? ನಾನು ಮಾಡುವ ತಪ್ಪು ಒಪ್ಪುಗಳಿಗೆಲ್ಲಾ ಆ ಪರಮಾತ್ಮನೇ ಕಾರಣವೇ. ಹಾಗಿದ್ದರೆ ಪಾಪ ಪುಣ್ಯಕ್ಕೂ ಅವನೇ ಹೊಣೆಯಾಗಬೇಕಲ್ಲವೇ?,.ಇದಕ್ಕೆ ಪೂರಕವಾಗಿ ಪೂರ್ವಜನ್ಮ, ಮುಂದಿನ ಜನ್ಮ ಎಂಬ ಕಲ್ಪನೆಗೆ
ಯಾವ ಸ್ಪಷ್ಟೀಕರಣವಿದೆ? ಪೂರ್ವಜನ್ಮದಲ್ಲಿ ಏನಾಗಿದ್ದೆವೋ, ಹೇಗಿದ್ದೆವೋ ಒಂದೂ ಜ್ಞಾಪಕವಿಲ್ಲ. ಮುಂದಿನ ಜನ್ಮದಲ್ಲಿ ಏನಾಗಿ ಹುಟ್ಟುತ್ತೇವೋ ಭಗವಂತನಿಗೇ ಗೊತ್ತು.
ಸತ್ತೆನೆಂದೆನಬೇಡ, ಸೋತೆನೆಂದೆನಬೇಡ|
ಬತ್ತಿತೆನ್ನೊಳು ಸತ್ವದೂಟೆಯೆನಬೇಡ|
ಮೃತ್ಯುವೆನ್ನುವುದೊಂದು ತೆರೆಯಿಳಿತ,ತೆರೆಯೇರು|
ಮತ್ತೆ ತೋರ್ಪುದು ನಾಳೆ —–ಮಂಕುತಿಮ್ಮ||
ಹಾಗಿದ್ದರೆ, ಪರಮಾತ್ಮ ಹೇಳಿದಂತೆ ಕರ್ಮವನ್ನು ಮಾಡು , ಫಲವನ್ನು ನನಗೇ ಬಿಟ್ಟು ಬಿಡು, ಎಂಬಂತೆ ಬದುಕಬೇಕೇ? ಸಾಮಾನ್ಯ ಮಾನವನಿಂದ ಅದು ಸಾಧ್ಯವೇ? ತಮ್ಮ ಹ್ರದಯಕ್ಕೆ ಹತ್ತಿರವಾದವರನ್ನು ಮರಳಿಬಾರದ ಊರಿಗೆ ಕಳುಹಿಸುವ ಸಂದರ್ಭ ಬಂದಾಗ,ಬದುಕು ನಶ್ವರ,ಸಾವು ಅಂತಿಮ ಸತ್ಯ..ಅದೇ ಮುಕ್ತಿ,ಎಂದು ತಣ್ಣಗೆ ಕುಳಿತು ಮುಂದಿನ ಕಾರ್ಯವನ್ನು ನೋಡಬಲ್ಲೆವೇ?ಆತ್ಮ ಪರಮಾತ್ಮನಲ್ಲಿ ಲೀನವಾಯಿತೆಂದು ಶಾಂತಚಿತ್ತದಿಂದ ಇರಲು‌ ಸಾಧ್ಯವೇ. ಮೋಹ ಮಾಯೆ, ಆಸೆ, ಸ್ವಾರ್ಥ,ಕೋಪ ಮತ್ಸರ, ದುಃಖ ಸಂತೋಷ, ಎಷ್ಟೊಂದು ಭಾವಗಳು!! ಇದು ಬುದ್ಧಿಜೀವಿ ಎನಿಸಿಕೊಳ್ಳುವ ಮನುಷ್ಯನಿಗೆ ಮಾತ್ರವಲ್ಲ, ಪ್ರಾಣಿ ಪಕ್ಷಿಗಳಿಗೂ ಇರುವ ರಾಗ ದ್ವೇಷಗಳು.
ಅಂತಿಮ, ಅಂದರೆ ಬದುಕಿನ ಕೊನೆಯ ಹಂತದಲ್ಲಿ, ನಾವು
ಜೀವನವನ್ನು ಸರಿಯಾದ ರೀತಿಯಲ್ಲಿ ಬದುಕಿದ್ದೇನೆಯೇ ಎಂದು ವಿಮರ್ಶಿಸಿದಾಗಿ, ಹೆಚ್ಚಿನ ಸಂದರ್ಭಗಳಲ್ಲಿ ನಾವು ಅಂದುಕೊಂಡಂತೆ ಏನೂ ನಡೆದಿಲ್ಲ ಎನಿಸುತ್ತದೆ. ಕೆಲವೊಂದು ಸಂದರ್ಭದಲ್ಲಿ ‌ಆಂದುಕೊಂಡದ್ದಕ್ಕಿಂತಲೂ ಉತ್ತಮ ಫಲವನ್ನು ಪಡೆದಿದ್ದೇವೆ.ಹೀಗೆ ಪ್ರಯತ್ನ ಪಟ್ಟರೂ ಫಲ ಸಿಗದಿದ್ದಕ್ಕೂ, ಅನಾಯಾಸವಾಗಿ ಅದೃಷ್ಟ ಒಲಿದದ್ದಕ್ಕೂ ಕಾರಣಕರ್ತರು ಯಾರು? ಅಗೋಚರವಾದ ಭಗವಂತನೇ? ನಮ್ಮ ಪ್ರಯತ್ನಕ್ಕೆ ಅರ್ಥ, ಬೆಲೆ ಎರಡೂ ಇಲ್ಲವೇ?
ಅಮ್ಮನ ಗರ್ಭದಿಂದ ಈ ಭೂಮಿಗೆ ಬಂದಾಗ, ಪುಟ್ಟ ಕೈಯ್ಯನ್ನು ಬಿಗಿಯಾಗಿ ಮುಚ್ಚಿದ್ದ ಮಗುವು ,ಒಂದು ಮುಷ್ಟಿಯಲ್ಲಿ ಪೂರ್ವಜನ್ಮದ ಪುಣ್ಯಫಲವನ್ನೂ, ಇನ್ನೊಂದರಲ್ಲಿ ಪಾಪದ ಫಲವನ್ನೂ ಹಿಡಿದು ತರುತ್ತದೆ ಎಂದು ಹಿರಿಯರು ಹೇಳುತ್ತಿದ್ದರು. ಇನ್ನೂ ಕಣ್ಣೂ ಬಿಡದ ಮಗುವೂ ಪಾಪ ಪುಣ್ಯದ ಹೊರೆ ಹೊತ್ತೇ ಈ ಭೂಮಿಗಿಳಿಯಿತೇ?ಪುಣ್ಯ ಯಾವುದು?ಪಾಪ ಯಾವುದು? ಯಾವ ಜನ್ಮದ್ದು?
“ಋಣದ ಮೂಟೆಯ ಹೊರಿಸಿ,ಪೂರ್ವಾರ್ಜಿತದ ಹುರಿಯ|
ಕುಣಿಕೆಯಲಿ ನಿನ್ನ ಕೊರಳನ್ನು ಬಿಗಿದು ವಿಧಿಯು|
ತೃಣದ ಕಡ್ಡಿಯ ಮುಂದೆ ಹಿಡಿದಾಶೆ ತೋರುತಿದೆ|
ಕುಣಿವ ಗಾರ್ಧಭ ನೀನು —-ಮಂಕುತಿಮ್ಮ||”
ಗಡಿಯ ಈ ಕಡೆಯಲ್ಲಿರುವ ಸೈನಿಕ, ಶತ್ರುಪಡೆಯಲ್ಲಿರುವ ಸೈನಿಕನನ್ನು ಸಾಯಿಸಿದರೆ ತಪ್ಪಲ್ಲ,ಆ ಗಡಿಯ ಸೈನಿಕ ಈ ಕಡೆಯಲ್ಲಿರುವ ಸೈನಿಕನನ್ನು ಸಾಯಿಸಿದರೆ ಅವರಿಗೆ ಅದು ಸರಿ.ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ದ್ವೇಷವಿಲ್ಲ. ಇಬ್ಬರು ಮಾಡಿದ ಕ್ರತ್ಯಗಳೂ ಸರಿಯೇ?ತಪ್ಪೇ?
ಮಾಂಸಾಹಾರಿಗಳಿಗೆ ನಿರ್ದಿಷ್ಟ ಪ್ರಾಣಿಗಳ ಹತ್ಯೆ ಪಾಪವೆನಿಸುವುದಿಲ್ಲ.ಅದು ಅವರ ಆಹಾರ. ಅಂಗಳದಲ್ಲಿ ತಾನು ಹಾಕಿದ ಕಾಳು ತಿನ್ನುತ್ತಿದ್ದ ಮುದ್ದು ಪಾರಿವಾಳವನ್ನು ಯಾರೋ ಒಬ್ಬಾತ ತಿನ್ನುವುದಕ್ಕೋಸ್ಕರ ಹಿಡಿದೊಯ್ದನೆಂದು ಗೊತ್ತಾದಾಗ ಸಸ್ಯಾಹಾರಿಗೆ ದುಃಖವಾಗುತ್ತದೆ.ಇದೇ ವಿಚಿತ್ರ.ಹಾಗಾದರೆ ಸರ್ವಕಾಲಿಕ,ಸರ್ವರೂ ಒಪ್ಪುವಂತಹ,ಸರಿತಪ್ಪು, ಸತ್ಯ ಅಸತ್ಯ, ಪಾಪ ಪುಣ್ಯವೆಂಬುದಿಲ್ಲವೇ?ಬರೆಯುತ್ತಾ ಹೋದರೆ ಈ ಪುರಾಣ ಮುಗಿಯುವುದೂ ಇಲ್ಲ.
ಜೀವನದ ರಣರಂಗದಲ್ಲಿ ಹೋರಾಡುತ್ತಾ,ಜೀವನದ ಪೂರ್ಣ ದರ್ಶನದವರೆಗೆ ಕಾಯುತ್ತಾ,ಸ್ರಷ್ಟಿಯ ಸಂಪೂರ್ಣದರ್ಶನ ವನ್ನು ಮಾಡಿ, ಭಗವಂತ ನಮ್ಮನ್ನು ಬುಗರಿಯಂತೆ ಆಡಿಸುವ ಲೀಲಾನರ್ತನವನ್ನು ನೋಡುತ್ತಾ ಆನಂದಿಸುವುದೇ “ಅಂತಿಮ ಸತ್ಯವೇ?”

ಇತ್ತೀಚಿನ ಸುದ್ದಿ

ಜಾಹೀರಾತು